Advertisement

ನಾನು ಜಾತಿ ನೋಡಿ ಅಭಿವೃದ್ಧಿ ಮಾಡಿಲ್ಲ

09:53 PM Dec 21, 2019 | Lakshmi GovindaRaj |

ಭೇರ್ಯ: ಸಾಲಿಗ್ರಾಮದಲ್ಲಿ ನಡೆದ ಘಟನೆ ಬಗ್ಗೆ ನಮ್ಮ ತಾಲೂಕಿನ ಕೆಲ ದಲಿತ ಮುಖಂಡರಿಗೆ ಎಲ್ಲರಿಗೂ ತಿಳಿದಿದ್ದು, ಯಾವ ರೀತಿಯ ಹೇಳಿಕೆ ನೀಡದೆ ಮತ್ತು ಪ್ರತಿಭಟನೆ ಮಾಡದೇ, ಕೊಮು ಸೌಹಾರ್ದತೆ ಕಾಪಾಡಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಸಾ.ರಾ.ಮಹೇಶ್‌ ಒಳ್ಳೆಯದ್ದನ್ನು ಮಾಡುತ್ತಾರೆಂಬ ನಂಬಿಕೆ ಇಟ್ಟಿದ್ದಾರೆ ಆ ನಂಬಿಕೆ ಉಳಿಸಿಕೊಳ್ಳುವೆ ಎಂದು ಮಾಜಿ ಸಚಿವ, ಶಾಸಕ ಸಾ.ರಾ.ಮಹೇಶ್‌ ಹೇಳಿದರು. ಕೆ.ಆರ್‌.ನಗರ ತಾಲೂಕು ಸಾಲಿಗ್ರಾಮ ಹೋಬಳಿ ಗುಮ್ಮನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

Advertisement

ಘಟನೆ ಬಗ್ಗೆ ನನಗೂ ಬೇಸರವಿದೆ: ಚುನಾವಣೆಯಲ್ಲಿ ನನ್ನ ವಿರುದ್ಧ ಮತಹಾಕಿದ್ದ ಕೆ.ಆರ್‌.ನಗರ ಮತ್ತು ಸಾಲಿಗ್ರಾಮದ ಕೆಲ ದಲಿತ ಮುಖಂಡರು ನನ್ನ ಮೇಲೆ ನಂಬಿಕೆಯನ್ನಟ್ಟಿದ್ದಾರೆ. ನಾನೇ ಖುದ್ದು ಸಾಲಿಗ್ರಾಮದ ಅಂಬೇಡ್ಕರ್‌ನಗರಕ್ಕೆ ಹೋಗಿ ಆಗಿರುವ ಘಟನೆ ಬಗ್ಗೆ ಕೈ ಮುಗಿದು ವಿಷಾದ ವ್ಯಕ್ತಪಡಿಸಿದ್ದೇನೆ, ಆದರೆ ಎಲ್ಲದ್ದಕ್ಕೂ ಸಾ.ರಾ.ಮಹೇಶ್‌ ಕಾರಣನಾ ಎಂದು ಪ್ರಶ್ನೆ ಮಾಡಿದರು.

ನಾನು ಜಾತಿ ನೋಡಿ ಅಭಿವೃದ್ಧಿ ಮಾಡಿಲ್ಲ: ಕಳದೆ 15 ವರ್ಷಗಳಿಂದ ನಾನು ಜಾತಿ ನೋಡಿ ಅಭಿವೃದ್ಧಿ ಮಾಡಿಲ್ಲ, ನೀವೆ ಶ್ರೀನಿವಾಸಗೌಡ ಎಂಬುವರಿಗೆ ಬೈಕ್‌ನಲ್ಲಿ ಗುದ್ದಿ ಹಲ್ಲೆ ಮಾಡಿ ನಂತರ ಆಸ್ಪತ್ರೆಯಲ್ಲಿ ಶ್ರೀನಿವಾಸಗೌಡರಿಗೆ ಚಿಕಿತ್ಸೆ ಕೊಡಿಸುತ್ತಿದ್ದ ಜೈನ ಸಮಾಜದ ಯುವಕನಿಗೆ ನೀವೆ ಹಲ್ಲೆ ಮಾಡಿ, ಈ ಇಬ್ಬರಿಗೆ ಹಲ್ಲೆ ಮಾಡಿದರು, ಈ ಬಗ್ಗೆ ಪೊಲೀಸರು ದೂರು ದಾಖಲಿಸಿಲ್ಲ ಎಂದು ಮಹಿಳಾ ಸಂಘದವರು ಸಾಲಿಗ್ರಾಮ ಠಾಣೆ ಮುಂದೆ ಪ್ರತಿಭಟನೆ ಮಾಡಿದರು.

ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಿ: ಇದನ್ನು ಪ್ರಶ್ನೆ ಮಾಡಲು ಕೆಲವರು ಹೋಗಿರ ಬಹುದು ಆದರೆ ಅದನ್ನೇ ದೊಡ್ಡಮಟ್ಟದಲ್ಲಿ ಬಿಂಬಿಸುತ್ತಿರುವುದು ಎಷ್ಟು ಸರಿ, ಮನಸ್ಸು ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಿ ಆದರೆ ಹೊಡೆಯುವ ಕೆಲಸ ಮಾಡ ಬೇಡಿ ಎಂದು ಹೊರ ಜಿಲ್ಲೆಯಿಂದ ಬರುತ್ತಿರುವ ದಲಿತಪರ ಸಂಘಟನೆಗಳ ಮುಖ್ಯಸ್ಥರಲ್ಲಿ ಮನವಿ ಮಾಡಿದರು.

ನನಗೂ ಮಾನವೀಯತೆ ಇದೆ: ಕಳೆದ ಒಂದು ತಿಂಗಳ ಹಿಂದೆ ಕೆ.ಆರ್‌.ನಗರದ ಚೌಕಹಳ್ಳಿ ಗ್ರಾಮದ ದಲಿತ ಸಮುದಾಯ ಯುವಕನಿಗೆ ರಸ್ತೆ ಅಪಘಾತವಾಗಿದೆ ಆಸ್ಪತ್ರೆಗೆ 95 ಸಾವಿರ ಹಣ ಕಟ್ಟಿದ್ದಾರೆ, ಆದರೆ ಇವಾಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ, ಆದರೂ ಇನ್ನೂ ಮಾತು ಬರುತ್ತಿಲ್ಲ, ಈಗ 8 ಲಕ್ಷ ಆಗಿದೆ, ಹೊರಗಡೆಯಿಂದ ಬರುತ್ತಿದ್ದಾರಲ್ಲ, ಅವರು ಹಣ ಕಟ್ಟುತ್ತಾರಾ ಎಂದು ಪ್ರಶ್ನೆ ಮಾಡಿ, ಕಳೆದ ವರ್ಷ ಹಂಪಾಪುರದಲ್ಲಿ ದಲಿತ ಸಮಾಜದ ಹುಡುಗ ಅಪಘಾತದಲ್ಲಿ ಗಾಯಗೊಂಡಿದ್ದ,

Advertisement

ಒಂದು ಲಕ್ಷ ರೂ. ಆಸ್ಪತ್ರೆಗೆ ಕಟ್ಟಿದ್ದರೂ, ಆದರೆ ಮರಣ ಹೊಂದಿದ, ಆಸ್ಪತ್ರೆಯಲ್ಲಿ ಹಣ ಕಟ್ಟದೇ ಶವ ಕೊಡಲ್ಲ ಎನ್ನುತ್ತಿದ್ದರೂ, ನಾನೇ ಹೇಳಿ ಶವ ಕೊಡಿಸಿದೆ ಎಂದು ಮಾನವೀಯತೆಗಳ ಬಗ್ಗೆ ಉದಾಹರಣೆಯನ್ನು ತಿಳಿಸಿದರು. ಕರ್ಪೂರವಳ್ಳಿ ಗ್ರಾಮದಲ್ಲಿ ನನ್ನ ನಾಲ್ಕು ಎಕರೆ ಗದ್ದೆಯನ್ನು ಭತ್ತ ಬೆಳೆಯಲು ನೀಡಿದ್ದೇನೆ, ವಾರಕ್ಕೂ ಕೊಟ್ಟಿಲ್ಲ, ಒಂದು ರೂ. ಕೂಡ ಪಡೆದಿಲ್ಲ, ಈ ರೀತಿ ನೂರಾರು ಉದಾಹರಣೆಗಳಿವೆ ಎಂದರು.

ಎಲ್ಲಾ ಸೌಕರ್ಯ ನೀಡಿದ್ದೇನೆ: ಗುಮ್ಮನಹಳ್ಳಿ ಗ್ರಾಮಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ನೀಡಿದ್ದೇನೆ, ನಾನು ಶಾಸಕನಾದ ಮೇಲೆ ಗುಮ್ಮನಹಳ್ಳಿ ಗ್ರಾಮ ಹಿಂದೆ ಹೇಗಿತ್ತು ಈಗ ಹೇಗಿದೆ ಗ್ರಾಮಸ್ಥರೇ ಹೇಳಲಿ, ನಿಮ್ಮೂರಿಗೆ ಹಾರಂಗಿ ನಾಲೆಗೆ ಸೋಪಾನಕಟ್ಟೆ ಮಾಡಿಸುತ್ತೇನೆ, 8 ಲಕ್ಷದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಹಣ ನೀಡಿದ್ದೇನೆ, ನಿಮ್ಮೂರಲ್ಲಿ ಡೇರಿ ಸ್ಥಾಪನೆ ನಾನು ಮಾಡಿಸಿದ್ದು, ಹೊನ್ನೇನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸಮಗ್ರ ಅಭಿವೃದ್ಧಿಯಾಗಿದೆ ಎಂದು ತಿಳಿಸಿದರು.

ಸಾಲಮನ್ನಾ ವಿಚಾರದಲ್ಲಿ ನನಗೆ 1500 ಅರ್ಜಿಗಳು ಬಂದಿದ್ದವು, ಅದರಲ್ಲಿ 769 ಅರ್ಜಿಗಳು ಸಾಲಮನ್ನಾಕ್ಕೆ ಅನರ್ಹ ವಾಗಿದ್ದು ಬಾಕಿ 843 ಅರ್ಜಿಗಳು ಸಾಲಮನ್ನಾ ಯೋಜನೆಗೆ ಅರ್ಹವಾಗಿದೆ. ವಾರದೊಳಗೆ ಎಲ್ಲವನ್ನು ಬಗೆಹರಿಸುವ ಕಾರ್ಯ ವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮೈಮುಲ್‌ ನಿರ್ದೇಶಕ ಎ.ಟಿ.ಸೋಮಶೇಖರ್‌, ಎಪಿಎಂಸಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಮೈಮುಲ್‌ ಉಪವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ, ಸ್ತರಣಾಧಿಕಾರಿಗಳಾದ ಜಯಂತ್‌ಕುಮಾರ್‌, ದುಷ್ಯಂತ್‌, ಜಿಪಂ ಎಇಇ ಮಂಜುನಾಥ್‌, ಜೆಇ ಸ್ವಾಮಿ, ಹೊನ್ನೇನಹಳ್ಳಿ ಮರೀಗೌಡ, ಡೇರಿ ಅಧ್ಯಕ್ಷ ಸುರೇಶ್‌, ಕಾರ್ಯದರ್ಶಿ ರಾಜೇಶ್‌, ಡೇರಿ ನಾಗೇಶ್‌, ಪಿಡಿಒ ಮಂಜುಳಾ, ಹೊನ್ನೇ ನಹಳ್ಳಿ ಗ್ರಾಪಂ ಎಲ್ಲಾ ಸದಸರು, ಮುಖಂಡರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next