ರಾಮನಗರ: 40 ವರ್ಷ ದೀರ್ಘ ಕಾಲ ಹೃದ್ರೋಗ ಚಿಕಿತ್ಸಾ ಕೆಲಸ ಮಾಡಿ ನಂತರ ನಾನು ರಾಜಕೀಯಕ್ಕೆ ಬಂದಿದ್ದೇನೆ. ನಾನು ಕೆಲಸದ ಮಧ್ಯೆ ರಾಜಕೀಯಕ್ಕೆ ಬಂದಿಲ್ಲ. ಪಕ್ಷಾತೀತವಾಗಿ ಬೇರೆ ಬೇರೆ ರಾಜ್ಯ ಸೇರಿದಂತೆ ನಮ್ಮ ರಾಜ್ಯದ ಹಲವಾರು ಸ್ನೇಹಿತರು ಕ್ರಾಂತಿಕಾರಿ ಬದಲಾವಣೆ ತಂದಿದ್ದೀರಿ ಅದನ್ನು ರಾಷ್ಟ್ರ ಮಟ್ಟಕ್ಕೆ ತನ್ನಿ ಎಂದು ಸಲಹೆ ನೀಡಿದ್ದಾರೆ. ರಾಷ್ಟ್ರಮಟ್ಟಕ್ಕೆ ಬರಲು ವೇದಿಕೆ, ಭೂಮಿಕೆ ಬೇಕಾಗುತ್ತದೆ. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ರಾಜಕೀಯಕ್ಕೆ ಬಂದಿರುವುದು ರಾಜಕೀಯ ಮಾಡಲು ಅಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ಮೊದಲ ಬಾರಿಗೆ ರಾಮನಗರಕ್ಕೆ ಆಗಮಿಸಿದ ಅವರು ಕುಟುಂಬ ರಾಜಕೀಯ ಎಂದ ಸಂಸದ ಡಿ.ಕೆ. ಸುರೇಶ್‌ಗೆ ಟಾಂಗ್ ನೀಡಿದರು.
ನಾನು ಬಂದಿದ್ದು ಕಾಂಗ್ರೋ ಆಸ್ಪತ್ರೆ ಉದ್ಘಾಟನೆಗಾಗಿ. ಆದರೆ ಕಾಕತಾಳಿಯಂತೆ ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಾಗುತ್ತಿದೆ. ಬಿಜೆಪಿ ಜೆಡಿಎಸ್ ಮತ್ತು ಸಾರ್ವಜನಿಕರನ್ನು ಭೇಟಿ ಮಾಡುವ ಅವಕಾಶ ಬಂದಿದೆ. ಇದು ದೊಡ್ಡ ಕ್ಷೇತ್ರವಾಗಿದ್ದು, ಅನೇಕಲ್‌ನಿಂದ ಕುಣಿಗಲ್ ವರೆಗೆ ಇದೆ. ಅಧಿಕೃತವಾಗಿ ಈಗಾಗಲೇ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸಭೆ ಮಾಡಿದ್ದೇವೆ. ಸಂಜೆ ಬೆಂಗಳೂರು ದಕ್ಷಿಣದಲ್ಲಿ ಶಾಸಕ ಕೃಷ್ಣಪ್ಪ ಸಭೆ ಮಾಡುತ್ತಿದ್ದಾರೆ ಎಂದರು.
ಎರಡು ಪಕ್ಷದವರನ್ನು ಒಗ್ಗೂಡಿಸುವ ವಿಚಾರಕ್ಕೆ ಮಾತನಾಡಿದ ಅವರು, ಈ ವಿಚಾರ ನಮಗೆ ಸವಾಲೇ ಅಲ್ಲ. ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಹೃದಯಗಳು ಒಟ್ಟಾಗಿದೆ. ಇಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಖುಷಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಭಿನ್ನಾಭಿಪ್ರಾಯ ಜೀರೋ ಎಂದರು.