ಚಿಕ್ಕಬಳ್ಳಾಪುರ: ನನ್ನ ಮಗ ಬುದ್ದಿವಂತ ವಿದ್ಯಾವಂತ ಅವನ ನಿರ್ಧಾರದಲ್ಲಿ ನಾನು ಎಂದಿಗೂ ತಲೆ ಹಾಕುವುದಿಲ್ಲ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನಿರಾಕರಿಸಿರುವ ತಮ್ಮ ಪುತ್ರ ಶರತ್ ಬಚ್ಚೇಗೌಡ ಬಗ್ಗೆ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ಬೇಡ ಎಂದಿರುವುದು ನಿಜ. ಅವನ ತೀರ್ಮಾನದಲ್ಲಿ ನಾನು ತಲೆ ಹಾಕುವುದಿಲ್ಲ. ಅವನು ವಿದ್ಯಾವಂತ ಆಗಿದ್ದಾನೆ. ಅವನ ನಿರ್ಧಾರ ಸ್ವತಂತ್ರ, ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದರು.
ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುತ್ತದೆ. ವರಿಷ್ಟರ ತೀರ್ಮಾನ ಕಾದು ನೋಡಬೇಕಿದೆ ಎಂದ ಅವರು ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ೯೦ ಸಾವಿರಕ್ಕೂ ಹೆಚ್ಚು ಮತ ತೆಗದುಕೊಂಡಿದ್ದಾನೆ. ಆತ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದರು.
ಐಟಿ ದಾಳಿ ಹಿಂದೆ ದ್ಷೇಷದ ರಾಜಕಾರಣ ಇಲ್ಲ:
ಕಾಂಗ್ರೆಸ್ ನಾಯಕರ ಮನೆ, ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಐಟಿಯಾಗಲಿ, ಇಡಿಯಾಗಲಿ ಸ್ವಾಯತ್ತತೆ ಸಂಸ್ಥೆಗಳು, ಅವುಗಳ ಪಾಡಿಗೆ ಅವು ಕೆಲಸ ಮಾಡುತ್ತೇವೆ. ಸುಮ್ಮನೆ ರಾಜಕೀಯ ಪಕ್ಷಗಳು ಒಂದರ ಮೇಲೆ ಒಂದು ಕೆಸರು ಎರಚಿಕೊಂಡು ಜನಹಿತ, ದೇಶದ ಹಿತ ಮರೆಯುತ್ತಿವೆ. ಇದರಿಂದ ರಾಜಕೀಯ ಸಂಘರ್ಷ ಅಗುವುದು ಬಿಟ್ಟರೆ ಜನಕ್ಕೆ ಏನು ಲಾಭ ಇಲ್ಲ ಎಂದರು.