Advertisement

ನಾನೆಂದೂ ಪಕ್ಷದ ಕೆಲಸವನ್ನು ನೇರವಾಗಿ ಮಾಡಿಲ್ಲ: ತೇಜಸ್ವಿನಿ

12:37 AM Apr 13, 2019 | Team Udayavani |

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ಆರಂಭಿಸಿದ್ದೇನೆ. ನಾನು ಯಾವತ್ತೊ ಪಕ್ಷದ ಕೆಲಸವನ್ನು ನೇರವಾಗಿ ಮಾಡಿಲ್ಲ. ನಮ್ಮದೇ ಪ್ರತ್ಯೇಕ ತಂಡ ಇದೆ. ಆ ತಂಡದೊಂದಿಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಪ್ರಚಾರ ಮಾಡುತ್ತಿದ್ದೇವೆ. ಪಕ್ಷದ ಪ್ರಮುಖರ ನಿರ್ಧಾರಕ್ಕೆ ಪ್ರತಿಕ್ರಿಯಿಸುವುದು ಸರಿಯಲ್ಲ!

Advertisement

-ಇದು ತೇಜಸ್ವಿನಿ ಅನಂತಕುಮಾರ್‌ ಅವರ ಮಾತು. ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್‌ ಸಿಗದೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದ್ದ ತೇಜಸ್ವಿನಿ ಅವರು ಶುಕ್ರವಾರದಿಂದ ಪಕ್ಷದ ಪರ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. “ಉದಯವಾಣಿ’ಗೆ ಸಂದರ್ಶನ ನೀಡಿದ್ದು, ಸಂಕ್ಷಿಪ್ತ ವಿವರ ಹೀಗಿದೆ.

* ಪ್ರಧಾನಿ ಮೋದಿ ಕಾರ್ಯಕ್ರಮದ ಆಹ್ವಾನ ಬಂದಿದೆಯೇ?
ಶನಿವಾರ ಅರಮನೆ ಮೈದಾನದಲ್ಲಿ ನಡೆಯಲಿರುವ ಪ್ರಧಾನಿ ಮೋದಿಯವರ ಬೃಹತ್‌ ಪ್ರಚಾರ ಸಭೆಗೆ ಆಹ್ವಾನ ಬಂದಿದೆ. ವೇದಿಕೆ ಮೇಲೆ ಇರಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಅವರ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ.

* ಜೀನ್ಸ್‌, ಡಿಎನ್‌ಎ ಆಧಾರದಲ್ಲಿ ಟಿಕೆಟ್‌ ನೀಡಲು ಸಾಧ್ಯವಿಲ್ಲ ಎಂದು ನಿಮ್ಮ ಪಕ್ಷದ ಪ್ರಮುಖರಾದ ಬಿ.ಎಲ್‌. ಸಂತೋಷ್‌ ಹೇಳಿಕೆ ಬಗ್ಗೆ ಏನು ಹೇಳುವಿರಿ?
ಅವರು (ಬಿ.ಎಲ್‌.ಸಂತೋಷ್‌) ಯಾವ ಕಾರ್ಯಕ್ರಮದಲ್ಲಿ ಏನು ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರನ್ನು ಭೇಟಿಯೂ ಆಗಿಲ್ಲ. ಅವರಾಡಿರುವ ಮಾತುಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಕ್ರಿಯಿಸುವುದು ಸರಿಯಲ್ಲ. ಅದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡಬೇಕಾಗುತ್ತದೆ.

* ಬೆಂಗಳೂರು ದಕ್ಷಿಣದ ಅಭ್ಯರ್ಥಿ ಪರ ಬಹಿರಂಗ ಪ್ರಚಾರ ಮಾಡುತ್ತಿರಾ?
ಅನಂತಕುಮಾರ್‌ ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದವರು. ಅವರ ಕಾರ್ಯಗಳಿಗೆ ಕೈಜೋಡಿಸಿದ್ದೇನೆ. ಇಷ್ಟಾದರೂ ನಾನು ಎಂದೂ ಪಕ್ಷದ ಕೆಲಸಗಳಲ್ಲಿ ನೇರವಾಗಿ ತೊಡಗಿಸಿಕೊಂಡಿಲ್ಲ. ಈಗಾಗಲೇ ಬೆಂಗಳೂರು ದಕ್ಷಿಣದಲ್ಲಿ ಪ್ರಚಾರ ಆರಂಭಿಸಿದ್ದೇವೆ. ಅನಂತ ಕುಮಾರ್‌ ಅವರ ಜತೆಗೂ ಚುನಾವಣಾ ಪ್ರಚಾರಕ್ಕೆ ಹೋಗಿರಲಿಲ್ಲ. ನಮ್ಮದೇ ತಂಡ ಬೇರೆ ಇದೆ. ಆ ತಂಡದೊಂದಿಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಪ್ರಚಾರ ಮಾಡುತ್ತೇವೆ. ನಮ್ಮ ಪ್ರಚಾರ ನಿರಂತರವಾಗಿರುತ್ತದೆ.

Advertisement

* ರಾಜ್ಯದ ಬೇರೆ ಕಡೆ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕೆ ಹೋಗುವಿರಾ?
ಹುಬ್ಬಳ್ಳಿ ಸಹಿತವಾಗಿ ರಾಜ್ಯದ ಕೆಲವು ಕ್ಷೇತ್ರದಿಂದ ಪ್ರಚಾರಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಎಲ್ಲೆಲ್ಲಿ ಪ್ರಚಾರ ನಡೆಸಬೇಕು ಎಂಬುದನ್ನು ನಿರ್ಧರಿಸುತ್ತೇನೆ.

* ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ತೃಪ್ತಿ ತಂದಿದೆಯೇ?
ಪಕ್ಷದ ಹಿರಿಯರು ಬಹಳಷ್ಟು ಸಂಗತಿಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷದ ಮುಖಂಡರಿಗೆ ಅವರದ್ದೇ ಆದ ಆದ್ಯತೆಗಳು ಇರುತ್ತವೆ. ಅವರ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ರಾಜ್ಯಾಧ್ಯಕ್ಷರನ್ನು ಭೇಟಿಯಾದ ನಂತರ ಮುಂದಿನ ಯೋಚನೆ ಮಾಡುತ್ತೇನೆ.

* ಮೋದಿ ಮತ್ತೊಮ್ಮೆ ಎನ್ನುತ್ತೀರಿ. ಸ್ಥಳೀಯ ಅಭ್ಯರ್ಥಿ ಬಗ್ಗೆ ಮಾತಾಡುವುದಿಲ್ಲ ಏಕೆ?
ದೇಶ ಮೊದಲು, ಮೋದಿ ಮತ್ತೊಮ್ಮೆ ಸಂವಾದ ಕಾರ್ಯಕ್ರಮಕ್ಕೆ ಕೇವಲ ಒಂದು ಕ್ಷೇತ್ರದ ಜನರು ಬರುವುದಿಲ್ಲ. ಎಲ್ಲ ಕ್ಷೇತ್ರ ಹಾಗೂ ಎಲ್ಲ ವಲಯದವರು ಬರುತ್ತಾರೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮ್ಮ ಗುರಿ. ಇದು ಒಂದು ದಿನದ ಕಾರ್ಯಕ್ರಮವಲ್ಲ, ನಿರಂತರವಾಗಿ ನಡೆಯಲಿದೆ. ಮೋದಿ ಎಂದರೆ ಬಿಜೆಪಿ. ಬಿಜೆಪಿ ಎಂದರೆ ಎಲ್ಲ ಅಭ್ಯರ್ಥಿಗಳು. ಇಲ್ಲಿ ಯಾವುದೇ ಒಂದು ಕ್ಷೇತ್ರದ ಅಭ್ಯರ್ಥಿ ಮುಖ್ಯವಾಗುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ ಕಾರ್ಯ ನಡೆಸುತ್ತಿದ್ದೇವೆ. ಒಬ್ಬರನ್ನು ಐದು ವರ್ಷಕ್ಕೆ ಆರಿಸಿ ಕಳಿಸುವುದು ಮಾತ್ರವಲ್ಲ. ದೇಶ ಕಟ್ಟುವ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next