Advertisement

ನಾನು ಗುಜರಾತ್‌ ನಿರ್ಮಿಸಿದೆ: ಪ್ರಧಾನಿಯಿಂದ ಹೊಸ ಘೋಷ ವಾಕ್ಯ

09:28 PM Nov 06, 2022 | Team Udayavani |

ಗಾಂಧಿನಗರ: ಚುನಾವಣೆಯಿಂದ ಚುನಾವಣೆಗೆ ಹೊಸ ಹೊಸ ಘೋಷವಾಕ್ಯ ನೀಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿಸ್ಸೀಮರಾಗಿದ್ದಾರೆ. ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ “ನಾನು(ಜನರು) ಈ ಗುಜರಾತ್‌ ಅನ್ನು ನಿರ್ಮಿಸಿದೆ’ ಎಂದು ಗುಜರಾತಿಯಲ್ಲಿ ಹೊಸ ಘೋಷವಾಕ್ಯವನ್ನು ಪ್ರಧಾನಿ ಮೋದಿ ಮೊಳಗಿಸಿದ್ದಾರೆ.

Advertisement

ಗುಜರಾತ್‌ನ ವಲ್ಸಾಡ್‌ ಜಿಲ್ಲೆಯ ನಾನಾ ಪೋಂಧಾ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, “ದ್ವೇಷ ಹರಡುತ್ತಿರುವವರು ಮತ್ತು ಗುಜರಾತ್‌ ಬಗ್ಗೆ ಅಪಪ್ರಚಾರ ಮಾಡುತ್ತಿರುವವರು ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಿಂದ ಹೊರ ಹಾಕಲ್ಪಡುವರು,’ ಎಂದು ಹೇಳಿದರು.

“ಗುಜರಾತ್‌ನಲ್ಲಿ ದ್ವೇಷ ಹರಡುವ ವಿಭಜಕ ಶಕ್ತಿಗಳು, ರಾಜ್ಯಕ್ಕೆ ಅಪಕೀರ್ತಿ ತರುವವರು ಮತ್ತು ಅವಮಾನ ಮಾಡುವವರನ್ನು ಹಿಂದೆಯೂ ರಾಜ್ಯದಿಂದ ಹೊರಗೆ ಹಾಕಲಾಗಿದೆ. ದ್ವೇಷ ಹರಡುವವರನ್ನು ಗುಜರಾತ್‌ ಜನತೆ ಎಂದಿಗೂ ಒಪ್ಪಿಕೊಳ್ಳುವುದಿಲ್ಲ,’ ಎಂದರು.

“ಪ್ರಸ್ತುತ ಗುಜರಾತ್‌ನಲ್ಲಿ ಜನರಿಗೆ 24 ಗಂಟೆ ವಿದ್ಯುತ್‌ ದೊರೆಯುತ್ತಿದೆ. ಪ್ರತಿ ಮನೆಗೆ ನೀರು ಸರಬರಾಜಾಗುತ್ತಿದೆ. ಪ್ರತಿ ಗುಜರಾತಿ ಆತ್ಮವಿಶ್ವಾಸ ಹೊಂದಿದ್ದಾನೆ. “ನಾನು ಈ ಗುಜರಾತ್‌ ಅನ್ನು ನಿರ್ಮಿಸಿದೆ’ ಎಂದು ಆತ ಅಂತರಾಳದಿಂದ ಹೇಳುತ್ತಾನೆ,’ ಎಂದು ಹೇಳಿದರು.

ಹಿಮಾಚಲ: ಸಮಾನ ನಾಗರಿಕ ಸಂಹಿತೆ ಜಾರಿಗೆ ಒತ್ತು
ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾನುವಾರ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದರು.

Advertisement

ಬಿಜೆಪಿ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು ಹೀಗಿದೆ.
– ರಾಷ್ಟ್ರ ಮಟ್ಟದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ನಿಟ್ಟಿನಲ್ಲಿ ಸಂಪೂರ್ಣ ಬದ್ಧತೆಯಿಂದ ಕ್ರಮ.
– ಸರ್ಕಾರಿ ಉದ್ಯೋಗಗಳು ಸೇರಿದಂತೆ ರಾಜ್ಯದಲ್ಲಿ 8 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ.
– ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು.
– 6ರಿಂದ 12ನೇ ತರಗತಿ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್‌.
– ರಾಜ್ಯದಲ್ಲಿ ಹೊಸದಾಗಿ ಐದು ವೈದ್ಯಕೀಯ ಕಾಲೇಜುಗಳ ಸ್ಥಾಪನೆ.
– ವಕ್ಫ್ ಬೋರ್ಡ್‌ ಆಸ್ತಿಗಳ ಸರ್ವೆ. ಕಾನೂನುಬಾಹಿರವಾಗಿ ಆಸ್ತಿಗಳ ಪರಾಭಾರೆ ರದ್ದು.
– ಪ್ರತಿಭಾವಂತ 5 ಸಾವಿರ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು 2,500 ರೂ. ವಿದ್ಯಾರ್ಥಿ ವೇತನ

Advertisement

Udayavani is now on Telegram. Click here to join our channel and stay updated with the latest news.

Next