ಅಂದು ಶುಭ್ರ ಮುಂಜಾನೆ. ನನ್ನ ರೆಂಬೆ ಕೊಂಬೆಯ ಮೇಲಿನ ಹನಿಗಳು ಚಿಗುರು ಬಿಸಿಲಿಗೆ ಇನ್ನೂ ಆರಿ ಹೋಗಿರಲಿಲ್ಲ. ಇನ್ನೇನು ಚಿಗುರು ಬಿಡುವ ಎಳೆಯ ಎಲೆಗಳು. ನಾನೊಂದು ಸಿಹಿಯಾದ ಪನ್ನೇರಳೆ ಹಣ್ಣಿನ ಮರ. ಭವಿಷ್ಯದಲ್ಲಿ ಹಣ್ಣಾಗುವ ನನ್ನ ಕಂದಮ್ಮಗಳ ಕನಸು ಕಾಣುತ್ತಾ ಹಾಗೇ ಅರಳಿ ನಿಂತಿದ್ದೆ. ಚಳಿಗೆ ಮೈ ಜುಮ್ ಎನ್ನುತ್ತಿತ್ತು. ಕಾಲೇಜು ಮಕ್ಕಳು ಒಬ್ಬೊಬ್ಬರಾಗಿ ಬರುತ್ತಿದ್ದರು. ನನ್ನ ಹಣ್ಣುಗಳನ್ನು ಅವರ ಮಡಿಲಿಗೆ ಹಾಕುವ ಯೋಜನೆಯನ್ನು ಕಲ್ಪಿಸಿಕೊಳ್ಳುತ್ತಲೇ ನನ್ನ ತುಟಿ ಅರಳಿತ್ತು.
ಹನಿ ಬಿಸಿಲಿಗೆ ಮೈಯೊಡ್ಡಿ ಚೆಂದದಿ ನಿಂತಿದ್ದೆ. ಅದಾರೋ ಇಬ್ಬರು ನನ್ನ ಬಳಿಯೇ ಬರುತ್ತಿರುವ ಭಾಸವಾಯಿತು. ಕಣ್ಣು ಮುಚ್ಚಿ ತೆರೆಯುವುದರಲ್ಲಿ ನನ್ನ ಬೆನ್ನು ಮೂಳೆಗೆ ಬಲವಾಗಿ ಹೊಡೆತ ಬಿದ್ದಿತ್ತು. ನನ್ನ ತೊಗಟೆ ಸೀಳಿ ಹೋಗಿತ್ತು. ಕಣ್ಣು ಕೆಳಗೆ ಮಾಡಿ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಮತ್ತೂಂದು ಪೆಟ್ಟು ಬಿದ್ದಿತ್ತು ಊರಗಲದಲ್ಲಿ ಚಾಚಿಕೊಂಡಿರುವ ಕೈಗೆ. ಏನು ನಡೆಯುತ್ತಿದೆ ಇಲ್ಲಿ ಎಂಬುದು ಒಂಚೂರು ಅರ್ಥವಾಗಿರಲಿಲ್ಲ. ಯಾರೋ ಒಬ್ಬ ನನ್ನ ಕೈಯನ್ನು ಜೋರಾಗಿ ಎಳೆದಿದ್ದ. ನನ್ನ ಎಳೆಯ ಕಾಯಿಗಳನ್ನು ಛಿದ್ರ ಛಿದ್ರವಾಗಿ ಹರಿದು ಹಾಕುತಿದ್ದ.
ಹೇ ಅಣ್ಣಂದಿರ.. ನನ್ನ ಮುಗ್ದ ಕಂದಮ್ಮಗಳು ಅವು.. ಕಾಯಿ ಬಲಿಯುವ ತನಕ ಬದುಕಲು ಬಿಡಿ.. ಇನ್ನು ಪುಟ್ಟ ಕಣ್ಣನ್ನೂ ಒಡೆದಿಲ್ಲ. ಹಸುಗೂಸ ಕೊಲ್ಲುವುದು ಪಾಪದ ಕೆಲಸ ಎಂದು ಜೋರಾಗಿ ಕೂಗಿಕೊಂಡಿದ್ದೆ. ಉಹೂ ಒಬ್ಬರಿಗೂ ನನ್ನ ಕೂಗು ಕೇಳಲೇ ಇಲ್ಲ. ರಪ ರಪನೇ ಕೋಲು ತೂರುತಿದ್ದರು. ಅವರು ಹೊಡೆಯುತಿದ್ದ ಪೆಟ್ಟಿಗೆ ನನ್ನ ಮೈ ಪುಡಿಯಾದಂತೆ ನೋವಾಗುತ್ತಿತ್ತು. ದೇಹ ಕಂಪಿಸುತ್ತಿತ್ತು. ಮಾತೊಂದು ಬರುವುದಿಲ್ಲ ಎಂಬುದು ಬಿಟ್ಟರೆ ನನಗೂ ಜೀವ ಇದೆಯಲ್ಲ. ತುಟಿ ಕಚ್ಚಿ ಅತ್ತಿದ್ದೆ.
ಅದೆಲ್ಲಾ ಅವರಿಗೆಲ್ಲಿ ಕಾಣಬೇಕು. ತಂಡ ತಂಡವೇ ನನ್ನೊಡಲಿಗೆ ಕೈ ಹಾಕಿತ್ತು. ಒಂದೆರಡು ನಿಮಿಷವಲ್ಲ. ಗಂಟೆಗಟ್ಟಲೆ ನನ್ನ ಜೀವ ತೇಯ್ದಿದ್ದರು. ನನ್ನ ಎಳೆಯ ಕಾಯಿಗಳನ್ನು ಹಂಚಿ ತಿಂದು ತೇಗಿದ್ದರು. ನಾಳೆಯ ಕನಸು ಹೆಣೆಯುತಿದ್ದ ನನ್ನ ಚಿಗುರು ಎಲೆಗಳನ್ನು ತರಚಿ ಹೊಸಕಿ ಹಾಕಿದ್ದರು. ನಿಮ್ಮ ಅಮ್ಮನಂತೆ ನಾನು ಹೊಸ ಜೀವಕ್ಕೆ ಜೀವ ಕೊಟ್ಟಿರುವೆ. ಪುಟ್ಟ ಕಾಯಿಗಳನ್ನಾದರೂ ಬಿಡಿ ಎಂದು ಬೇಡಿ ಕೊಂಡಿದ್ದಾರೆ. ತಾಯಿಯೊಬ್ಬಳ ಶಾಪವಿದೆ ನಿಮ್ಮ ಮೇಲೆ ಎಂದು ವದರಿದ್ದೆ. ಉಹೂ ಕಲ್ಲು ಬಂಡೆಗಳವು ಕೇಳಲೇ ಇಲ್ಲ. ನನ್ನಲ್ಲೂ ಕೂಗುವ ಶಕ್ತಿ ಇರಲಿಲ್ಲ.. ಕಣ್ಣು ಮಂಜಾಗಿತ್ತು. ಪಾಪ.. ಹಸಿವಿರಬಹುದು. ಎಷ್ಟು ದಿನವಾಗಿತ್ತೋ ಊಟ ಮಾಡಿ ನನ್ನ ಕಾಯಿಗಳಿಂದ ಹೊಟ್ಟೆ ತುಂಬಿತಲ್ಲ ಖುಷಿಯಾಗಿರಿ ಎಂದು ಕಣ್ಣು ಮುಚ್ಚಿದ್ದೆ.
ಮಾರನೇ ದಿನ ಎಚ್ಚರವಾದಾಗ ನನ್ನ ಗಾಯಗಳು ಸ್ವಲ್ಪ ಮಾಗಿತ್ತು. ಮೈ ಕೈ ನೋವು ಹಾಗೇ ಇತ್ತು. ಯಾರಾದರೂ ಸನಿಹಕ್ಕೆ ಬಂದರೆ ಗಡ ಗಡ ನಡಗುತ್ತಿದ್ದೆ. ನನ್ನ ಪುಟ್ಟ ಕೂಸುಗಳ ಹೆಣಗಳು ನನ್ನ ಕಾಲ ಬುಡದಲ್ಲೇ ಬಿದ್ದಿತ್ತು.. ಚಿಗುರು ಎಲೆಗಳು ಬಾಡಿ ಹೋಗಿತ್ತು. ಮತ್ತೂಂದು ತಂಡ ಇಂದು ಯುದ್ಧಕ್ಕೆ ಸಜ್ಜಾಗಿದೆ ಎಂದು ಅರಿತಾಗ ಅಯ್ಯ ರಾಕ್ಷಸರ.. ನನಗೂ ಜೀವವಿದೆ. ಭಾವನೆ ಇದೆ.. ಎಂದು ಕೂಗಬೇಕೆನಿಸಿತ್ತು…
ಮೂಕಿಯಾದರೇನು ನಾನು ತಾಯಿಯಲ್ಲವೆ?
ಮರವಾದರೇನು? ನನಗೂ ಜೀವವಿಲ್ಲವೆ?
-ಶಿಲ್ಪಾ ಪೂಜಾರಿ
ಜಡ್ಡಿಗದ್ದೆ