Advertisement

ನಾನು ಕೇಳಿದ್ದನ್ನು, ಕಂಡದ್ದನ್ನು ಹೇಳಿದ್ದೇನೆ: ಸಚಿವ ಪಾಟೀಲ

06:15 AM Sep 13, 2017 | |

ವಿಜಯಪುರ: ತುಮಕೂರು ಸಿದ್ದಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿ ಅವರನ್ನು ಎರಡು ದಿನಗಳ ಹಿಂದೆ ಭೇಟಿ ಮಾಡಿದ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ವಿಷಯವಾಗಿ ಕೇಳಿದ್ದನ್ನು ಹಾಗೂ ಕಂಡದ್ದನ್ನು ಹೇಳಿದ್ದೇನೆ. ಇದರ ಹೊರತಾಗಿ ಬೇರೆ ಏನನ್ನೂ ಹೇಳಿಲ್ಲ ಎಂದು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದರು.

Advertisement

ಮಂಗಳವಾರ ಸಿದ್ದಗಂಗಾ ಮಠದಿಂದ ಹೇಳಿಕೆ ಬಿಡುಗಡೆ ಆಗಿತ್ತು. ಹೀಗಾಗಿ ತಿಕೋಟಾ ಗ್ರಾಮದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಂತದಲ್ಲಿಯೇ ಮಧ್ಯಾಹ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ತುಮಕೂರು ಸಿದ್ದಗಂಗಾ ಶ್ರೀಗಳ ವಿಷಯದಲ್ಲಿ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗುತ್ತಿದೆ. ಇದು ನನಗೆ ಸತ್ವ ಪರೀಕ್ಷೆಯ ಕಾಲ. 12ನೇ ಶತಮಾನದಲ್ಲಿ ಬಸವಣ್ಣನವರಿಗೆ ಇಂಥದ್ದೇ ಧರ್ಮ ಷಡ್ಯಂತ್ರ, ಇದೀಗ 21ನೇ ಶತಮಾನದಲ್ಲಿ ಬಸವೇಶ್ವರ ತತ್ವಾದರ್ಶಗಳ ಲಿಂಗಾಯತ ಧರ್ಮಕ್ಕಾಗಿ ಶ್ರಮಿಸುತ್ತಿರುವ ನನ್ನ ವಿರುದ್ಧವೂ ಷಡ್ಯಂತ್ರ ನಡೆದಿದೆ. ನನ್ನ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಇದಕ್ಕೂ ಮೊದಲು ಬೆಳಗ್ಗೆ ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಚಿವ ಡಾ| ಎಂ.ಬಿ. ಪಾಟೀಲ, “ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ದೊಡ್ಡ ಶ್ರೀಗಳಾದ ಡಾ| ಶಿವಕುಮಾರ ಸ್ವಾಮಿಗಳು ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡರು. ಈ ವೇಳೆ, ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಳ ಕುರಿತು ಶ್ರೀಗಳಿಗೆ ಹೇಳಿದಾಗ, ಲಿಂಗಾಯತ ಸ್ವತಂತ್ರ ಧರ್ಮ ಆಗಲಿ ಎಂದು ಶ್ರೀಗಳು ಸ್ಪಷ್ಟವಾಗಿ ಹೇಳಿದ್ದು, ನಾನು ಸ್ಪಷ್ಟವಾಗಿ ಕೇಳಿಸಿಕೊಂಡಿದ್ದೇನೆ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಮುಂದುವರಿಸುವೆ ಎಂದು ಶ್ರೀಗಳ ಆಶೀರ್ವಾದ ಪಡೆದು ಬಂದಿದ್ದೇನೆ’ ಎಂದು ವಿವರಿಸಿದರು.

“ಅಷ್ಟರಲ್ಲೇ ಸ್ಥಳದಲ್ಲಿದ್ದ ಆರಾಧ್ಯ ಎಂಬ ಸೇವಕ ಅಡ್ಡ ಬಾಯಿ ಹಾಕಿ ಸ್ವಾಮೀಜಿಗಳೇ ಪಾಟೀಲರು ವೀರಶೈವ ಹಾಗೂ ಲಿಂಗಾಯತ ಬೇರೆ ಎಂದು ಹೇಳುತ್ತಿದ್ದಾರೆ ಎಂದು ಶ್ರೀಗಳಿಗೆ ಹೇಳಿದ. ಈ ಹಂತದಲ್ಲಿ ಮತ್ತೆ ಪ್ರತಿಕ್ರಿಯಿಸಿದ ಶ್ರೀಗಳು ಲಿಂಗಾಯತ ಸ್ವತಂತ್ರ ಧರ್ಮ, ವೀರಶೈವ ಇತ್ತೀಚಿನದು ಎಂದು ಹೇಳಿದ್ದಾರೆ. ದೊಡ್ಡ ಶ್ರೀಗಳು ಹಾಗೂ ನಾನು ಸ್ಪಷ್ಟವಾಗಿದ್ದೇವೆ. ಇದರಲ್ಲಿ ಶ್ರೀಗಳ ಹೇಳಿಕೆಯನ್ನು ತಪ್ಪಾಗಿ ಆರ್ಥೈಸಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

“ಕೆಲವರಿಗೆ ನುಂಗಲಾರದ ತುತ್ತಾಗಿದೆ. ಅದರಲ್ಲೂ ವಿಶೇಷವಾಗಿ ವಿ.ಸೋಮಣ್ಣ, ಜಿ.ಎಸ್‌.ಬಸವರಾಜು, ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆಘಾತವಾಗಿದೆ. ಹೀಗಾಗಿ ಇವರೆಲ್ಲ ಹೋರಾಟದ ಹಾದಿ ತಪ್ಪಿಸಲು ಷಡ್ಯಂತ್ರ ನಡೆಸಿದ್ದಾರೆ. ಇದರಿಂದ ಹೇಗಾದರೂ ಮಾಡಿ ಇದನ್ನು ತಡೆಯಬೇಕು ಎಂದು ಹುನ್ನಾರ ನಡೆಸಿದ್ದಾರೆ. ಇದರೊಂದಿಗೆ ಶ್ರೀಗಳ ಹೇಳಿಕೆಯನ್ನು ತಿರುಚುವ ಕೆಲಸ ನಡೆದಿವೆ. ಇದಕ್ಕೆ ಕೆಲ ಮಾಧ್ಯಮಗಳು ಸಹ ಸಹಕಾರ ನೀಡುತ್ತಿವೆ. ಇದು ಹೀಗೆ ಮುಂದುವರಿದರೆ ನಾನು ನನ್ನ ತಾಯಿ, ಪತ್ನಿ, ಮಕ್ಕಳ ಸಮೇತ ಹೋಗಿ ಪ್ರಮಾಣ ಮಾಡಲು ಸಿದ್ಧ. ನಾನು ಹೇಳಿದ್ದು ತಪ್ಪಾಗಿದ್ದರೆ ಆ ಪಾಪ ನನ್ನ ಕುಟುಂಬಕ್ಕೆ ತಟ್ಟಲಿ. ನನ್ನ ಕುಟುಂಬಕ್ಕೆ ಬೇಕಾದ ಶಿಕ್ಷೆಯಾಗಲಿ, ಸರ್ವನಾಶವಾಗಲಿ’ ಎಂದು ಭಾವುಕರಾದರು.

Advertisement

ವಿಡಿಯೋ ಇದೆ, ಬಿಡುಗಡೆ ಮಾಡಲ್ಲ
“ಕೆಲ ಸ್ವಾಮಿಗಳು ಬಸವರಾಜ ಹೊರಟ್ಟಿ ಹಾಗೂ ಎಂ.ಬಿ.ಪಾಟೀಲ ಅವರನ್ನು ಸರ್ವನಾಶ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರ ವಿಡಿಯೋ ನನ್ನ ಬಳಿ ಇದ್ದರೂ, ವಿಷಯ ದೊಡ್ಡದು ಮಾಡಲು ಹೋಗುವುದಿಲ್ಲ. ಒಂದೊಮ್ಮೆ ಈ ವಿಡಿಯೋ ಬಿಡುಗಡೆ ಆದರೆ, ಸ್ವಾಮಿಗಳ ವಿರುದ್ಧ ಪೊಲೀಸ್‌ ದೂರು ದಾಖಲಾಗಿ ಬಂಧನವಾಗುತ್ತದೆ. ಸ್ವಾಮಿಗಳನ್ನು ಜೈಲಿಗೆ ಕಳುಹಿಸಿದರು ಎಂಬ ಅಪವಾದ ನಮ್ಮ ಮೇಲೆ ಬೇಡ ಎಂಬ ಕಾರಣಕ್ಕೆ ಅದನ್ನು ಬಿಡುಗಡೆ ಮಾಡಿಲ್ಲ’ ಎಂದರು. “ಇನ್ನೂ ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ’ ಎಂದು ಸ್ಪಷ್ಟಪಡಿಸಿದ ಸಚಿವ ಡಾ|ಎಂ.ಬಿ. ಪಾಟೀಲ, “ಬಂದರೂ ನಾನು ಹೆದರುವುದಿಲ್ಲ’ ಎಂದರು.

“ನಾನು ಬಸವನಾಡಿನಿಂದ ಬಂದವನಾಗಿದ್ದು,ಅವರ ಬಗ್ಗೆ ನಾನು ಮಾತನಾಡದಿದ್ದರೆ ಇನ್ನಾರು ಮಾತನಾಡುತ್ತಾರೆ. ಬಸವೇಶ್ವರರ ಕುರಿತು ಜಗತ್ತಿಗೆ ತಿಳಿಸಲು ಅವರ ವಚನಗಳು ಹಾಗೂ ಚರಿತ್ರೆಯನ್ನು ಎಂಟು ಭಾಷೆಗಳ ಮೂಲಕ ಮಾಹಿತಿ ಕೊಡುವ ಕೆಲಸ ನಡೆದಿದೆ. ಮುಂದಿನ ಪೀಳಿಗೆ ಬಸವೇಶ್ವರರಿಂದ ಪ್ರೇರೇಪಿತರಾಗಬೇಕಿದೆ’ ಎಂದರು.

ಸಿದ್ಧಗಂಗಾ ಶ್ರೀಗಳೇ ನಮಗೆ ಸುಪ್ರೀಂ
ವೀರಶೈವ ಲಿಂಗಾಯತರಲ್ಲಿ ಯಾವುದೇ ಭೇದ ಭಾವ ಇಲ್ಲ. ಎರಡೂ ಒಂದೇ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ತಿಳಿಸಿದ್ದಾರೆ. ಅವರ ಹೇಳಿಕೆಯೇ ನಮಗೆ ಸುಪ್ರೀಂ ಎಂದು ಅಖೀಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಈಶ್ವರ್‌ಖಂಡ್ರೆ ತಿಳಿಸಿದರು.

ಸಿದ್ಧಗಂಗಾ ಮಠದಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವೀರಶೈವ ಲಿಂಗಾಯತರಲ್ಲಿ ಯಾವುದೇ ಭೇದ ಭಾವವಿಲ್ಲ. ನಾವೆಲ್ಲ ಒಟ್ಟಾಗಿ ಕುಳಿತುಕೊಂಡು ಮಾತನಾಡುತ್ತೇವೆ. ಸಚಿವ ಎಂ.ಬಿ ಪಾಟೀಲ ಅವರನ್ನು ಗಣನೆಗೆ ತೆಗೆದುಕೊಂಡು ಮಾತನಾಡಿ, ಸಮಸ್ಯೆಯನ್ನು ಶೀಘ್ರ ಬಗೆಹರಿಸಿಕೊಳ್ಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next