Advertisement

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

12:57 AM May 19, 2024 | Team Udayavani |

ಬೆಂಗಳೂರು: “ದೇವರಾಜೇಗೌಡ ಮಾಡುತ್ತಿರುವ ಆರೋಪಗಳ ಬಗ್ಗೆ ಆತನ ಬಳಿ ಏನೇ ದಾಖಲೆಗಳಿದ್ದರೂ ದೂರು ಕೊಡಲಿ’ ಎಂದು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್‌ ಸವಾಲೆಸೆದಿದ್ದಾರೆ.

Advertisement

ಪ್ರಜ್ವಲ್‌ ಅಶ್ಲೀಲ ವೀಡಿಯೋ ಹಂಚಿಕೆ ಮಾಡಿಸಿದ್ದು ಮಾಜಿ ಸಿಎಂ ಎಚ್‌ಡಿಕೆ ಎಂದು ಆರೋಪಿಸಲು ತನಗೆ ಡಿಕೆಶಿ 100 ಕೋಟಿ ರೂ. ಆಮಿಷ ಒಡ್ಡಿದ್ದರು ಎಂಬ ದೇವರಾಜೇಗೌಡ ಆರೋಪಕ್ಕೆ ಡಿ.ಕೆ. ಶಿವಕುಮಾರ್‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ, “ದೇವರಾಜೇಗೌಡ ಮಾನಸಿಕ ಸಮಸ್ಯೆ ಎದುರಿಸುತ್ತಿರಬೇಕು. ಅವನು ಮಾಡುತ್ತಿರುವ ಆರೋಪಗಳ ಬಗ್ಗೆ ಆತನ ಬಳಿ ದಾಖಲೆಗಳಿದ್ದರೆ, ಲೋಕಾಯುಕ್ತ ಸಹಿತ ಯಾರಿಗೆ ಬೇಕಿದ್ದರೂ ದೂರು ಕೊಡಲಿ. ಅವನಂತಹ ಮೆಂಟಲ್‌ ಗಿರಾಕಿಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

ಆತ ಏನಾದರೂ ಮಾತನಾಡಲಿ. ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆತನ ಹೇಳಿಕೆಯಲ್ಲಿ ಸತ್ಯ ಇದೆಯೇ ಇಲ್ಲವೇ ಎಂಬುದನ್ನು ಮಾಧ್ಯಮಗಳೂ ಪರಿಶೀಲಿಸಬೇಕು. ಯಾರೇ ಆಗಲಿ ಆರೋಪ ಮಾಡಿದರೆ ಆಧಾರ ಇರಬೇಕು. ತಲೆಕೆಟ್ಟು ಆಸ್ಪತ್ರೆ ಸೇರಬೇಕಾದವರ ಮಾತಿಗೆ ಇಷ್ಟು ಪ್ರಾಮುಖ್ಯ ನೀಡುವುದು ಸರಿಯಲ್ಲ ಎಂದರು.

ಯಾವ ಹುತ್ತದಲ್ಲಿ ಯಾವ ಹಾವೋ
ನಾನು ಈ ರಾಜ್ಯದ ಉಪಮುಖ್ಯಮಂತ್ರಿ. ನೂರಾರು ಜನರು ಬಂದು ಹೋಗುತ್ತಾರೆ, ಸಂಪರ್ಕಿಸುತ್ತಾರೆ. ಅದರಲ್ಲಿ ಒಳ್ಳೆಯವರೂ ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಎಲ್ಲರ ಹಿನ್ನೆಲೆಯನ್ನೂ ಪರಿಶೀಲಿಸಿಕೊಳ್ಳಲು ಸಾಧ್ಯವಿಲ್ಲ. ಯಾವ ಹುತ್ತದಲ್ಲಿ ಯಾವ ಹಾವಿರುತ್ತದೆಯೋ ಗೊತ್ತಿಲ್ಲ. ಆದರೆ ನಾನೇನೂ ತಪ್ಪು ಮಾಡಿಲ್ಲ, ತಪ್ಪು ಮಾತನ್ನೂ ಆಡಿಲ್ಲ. ಹೀಗಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

Advertisement

ನನಗೆ ನನ್ನದೇ ಆದ ಕೆಲಸ ಕಾರ್ಯಗಳಿವೆ. ನನ್ನ ಹೆಸರು ಬಳಸಿಕೊಂಡರೆ ಕೆಲವರಿಗೆ ಮಾರುಕಟ್ಟೆಯಲ್ಲಿ ಬೆಲೆ. ಹೀಗಾಗಿ ಬಳಸಿಕೊಳ್ಳುತ್ತಾರೆ. ಅದಕ್ಕೆಲ್ಲ ಏನೂ ಮಾಡಲಾಗುವುದಿಲ್ಲ ಎಂದರು.

ಪೆನ್‌ಡ್ರೈವ್‌ ಬಗ್ಗೆ ಚರ್ಚೆಯಾಗುತ್ತಿದೆಯೇ ವಿನಾ ಸಂತ್ರಸ್ತರ ಬಗ್ಗೆ, ಅವರಿಗಾಗಿರುವ ಅನ್ಯಾಯಗಳ ಬಗ್ಗೆ ಚರ್ಚೆ ಆಗುತ್ತಲೇ ಇಲ್ಲ. ಎಸ್‌ಐಟಿ ಸಮರ್ಥವಾಗಿ ತನಿಖೆ ನಡೆಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಲಿದೆ ಎನ್ನುವ ವಿಶ್ವಾಸವಿದೆ. ಅದು ನಮ್ಮ ಸರಕಾರದ ಕರ್ತವ್ಯ ಕೂಡ ಎಂದರು.

ಇಂದು ದೇವೇಗೌಡರ ಹುಟ್ಟುಹಬ್ಬ. ಅವರಿಗೆ ಒಳ್ಳೆಯ ಆರೋಗ್ಯ, ಸಂತೋಷ, ನೆಮ್ಮದಿ ಸಿಗಲಿ. ಅವರ ದುಃಖ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸರಕಾರದ ಪರವಾಗಿ, ವೈಯಕ್ತಿಕ ವಾಗಿ ಶುಭಾಶಯ ಕೋರುತ್ತೇನೆ.
-ಡಿ.ಕೆ. ಶಿವಕುಮಾರ್‌, ಡಿಸಿಎಂ

ಪ್ರಜ್ವಲ್‌ ರೇವಣ್ಣ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ನನ್ನದು ಯಾವ ತಕರಾರೂ ಇಲ್ಲ. ಈ ಪ್ರಕರಣದಲ್ಲಿ ಅನೇಕರು ಭಾಗಿ ಯಾಗಿದ್ದು, ನಾನು ಅವರ ಹೆಸರನ್ನು ಹೇಳಲು ಹೋಗುವುದಿಲ್ಲ. ಆದರೆ ಅವರೆಲ್ಲರ ಮೇಲೂ ಕ್ರಮ ಕೈಗೊಳ್ಳಬೇಕು.
-ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next