Advertisement

ನನ್ನ ಮನೆಯಲ್ಲಿ ಸಿಕ್ಕಿದ್ದು ಪೊಲೀಸರದ್ದೇ ಹಣ

12:01 PM Apr 23, 2017 | |

ಬೆಂಗಳೂರು: ರಹಸ್ಯ ತಾಣದಲ್ಲಿ ಕುಳಿತು ವಿಡಿಯೋ ಮೂಲಕ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದಿರುವ ಮಾಜಿ ರೌಡಿಶೀಟರ್‌ ನಾಗರಾಜ್‌ ಪೊಲೀಸ್‌ ಅಧಿಕಾರಿಗಳನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾನೆ.

Advertisement

“ನನ್ನ ಮನೆಯಲ್ಲಿ ಸಿಕ್ಕಿರುವ ಹಣ ಐಪಿಎಸ್‌ ಅಧಿಕಾರಿಗಳದ್ದೆ. ಅವರೇ ನನ್ನ ಮನೆಯಲ್ಲಿ ಹಣ ಇಟ್ಟು ನನಗೆ ಮೋಸ ಮಾಡಿದ್ದಾರೆ. ಪ್ರಾಮಾಣಿಕವಾಗಿ ತನಿಖೆ ನಡೆಸಿದರೆ ಪೊಲೀಸ್‌ ಇಲಾಖೆಯಲ್ಲಿರುವ ಶೇ.25ರಷ್ಟು ಮಂದಿ ಅಮಾನತುಗೊಳ್ಳುತ್ತಾರೆ. ಇಬ್ಬರು ಕಮಿಷನರ್‌, ಇಬ್ಬರು ಡಿಸಿಪಿಗಳು, ನಾಲ್ವರು ಎಸಿಪಿ  ಹಾಗೂ ಐದಾರು ಮಂದಿ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಜೈಲು ಸೇರುತ್ತಾರೆ.

ನನ್ನನ್ನು ಹುಡುಕಾಟ ನಡೆಸುತ್ತಿದ್ದೀರಾ. ನಾನು ಬೆಂಗಳೂರಿನಲ್ಲೇ ಇದ್ದೇನೆ. ಎಲ್ಲಿಯೂ ಓಡಿ ಹೋಗಿಲ್ಲ. ಏಕೆ ಓಡಿ ಹೋಗಬೇಕು. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು. ನಾನು ಹೇಡಿಯಲ್ಲ,’ ಎಂದು ಎಚ್ಚರಿಸಿದ್ದಾನೆ. ಮುಖ್ಯಮಂತ್ರಿ ಅವರ ವಿಶೇಷ ಆಪ್ತ ಕಾರ್ಯದರ್ಶಿ ಮಂಜುನಾಥ್‌ನ ಮಧ್ಯವರ್ತಿಗಳು ಪೊಲೀಸರು ದಾಳಿ ಮಾಡುವ ಒಂದು ದಿನ ಮೊದಲು ನನ್ನ ಮನೆಗೆ ಬಂದು ಹೋಗಿದ್ದರು. ಹೆಣ್ಣೂರು ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹೆಣ್ಣೂರಿಗೂ ನನಗೂ ಸಂಬಂಧವಿಲ್ಲ. ನಾನೂ ಹೆಣ್ಣೂರಿಗೆ ಬಂದಿದ್ದರೆ ನನ್ನ ವಂಶವನ್ನು ಪೊಲೀಸ್‌ ಇಲಾಖೆ ಎನ್‌ಕೌಂಟರ್‌ ಮಾಡಲಿ. ಅದನ್ನು ಬಿಟ್ಟು ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಘಟನೆ ನಡೆದಿರುವುದು ಶ್ರೀರಾಮಪುರ ಠಾಣಾ ವ್ಯಾಪ್ತಿಯಲ್ಲಿ ಹೇಗೆ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ದಾಳಿ ಹೇಗೆ ಮಾಡಿದರು. ಕಮಿಷನರ್‌ ಅವರೇ ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ. 

ಉಮೇಶ್‌ ಹಾಗೂ ಇತರರ ವಿರುದ್ಧ ಯಾಕೆ ಪ್ರಕರಣ ದಾಖಲಿಸಿಲ್ಲ. ನನ್ನ ವಿರುದ್ಧ ಮಾತ್ರ ಏಕೆ ಪ್ರಕರಣ ದಾಖಲಿಸಿದ್ದೀರಿ. ಉಮೇಶ್‌ ಕೂಡ ಈ ಹಿಂದೆ ಸಿಸಿಬಿ ದಾಳಿ ವೇಳೆ ಸಿಕ್ಕಿಬಿದ್ದಿದ್ದರು. ಆದರೆ, ಕೇವಲ ಒಂದು ದೂರು ಪಡೆದು ಗೂಂಡಾಕಾಯ್ದೆಗೆ ಸೇರಿಸಿದ ಹೆಣ್ಣೂರು ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ಎಂದು ನಾಗರಾಜ್‌ ನಿಂದಿಸಿದ್ದಾನೆ. ವರ್ಷಕ್ಕೆ 2 ಕೋಟಿ ರೂ.

Advertisement

ದಾನ ಮಾಡುತ್ತೇನೆ: ನನಗೆ 15-20 ಲಕ್ಷ ಆದಾಯ ಇದೆ. ವರ್ಷಕ್ಕೆ 2 ಕೋಟಿ ದಾನ ಮಾಡುತ್ತೇನೆ. ಸಮಾಜ ಸೇವೆ ಮಾಡುತ್ತಿದ್ದೇನೆ. ನಾನು ರೋಲ್‌ ಕಾಲ್‌ ಮಾಡಿಲ್ಲ ಎಂದು ತಿಳಿಸಿದ್ದಾನೆ. ಈ ಹಿಂದೆ ನನ್ನ ವಿರುದ್ಧ ದಾಖಲಿಸಿದ್ದ ಗೂಂಡಾಕಾಯ್ದೆಧಿಯನ್ನು ಹೈಕೋರ್ಟ್‌ ತ್ರಿಸದಸ್ಯ ಪೀಠದ ಮುಂದೆ ವಾದ ಮಾಡಿದ್ದೆ. ಕೊನೆಗೆ ಕೋರ್ಟ್‌ ಗೂಂಡಾ ಕಾಯೆxಯಡಿ ದಾಖಲಾಗಿದ್ದ ಕೇಸ್‌ನಿಂದ ಹೊರ ಹಾಕಲು ಸೂಚಿಸಿತ್ತು. ಇತಿಹಾಸದಲ್ಲೇ ಇಷ್ಟು ಬೇಗ ಪ್ರಕರಣದಿಂದ ಹೊರಬಂದಿದ್ದು ನಾನೇ ಎಂದು ಹೇಳಿದ್ದಾನೆ. 

ನಾಗನ ವಿರುದ್ಧ ದೂರು: ಲಂಚ ಪಡೆದ ಆರೋಪದ ಮೇಲೆ ಇಬ್ಬರು ಸೆಷನ್ಸ್‌ ನ್ಯಾಯಾಧೀಶರ ವಿರುದ್ಧ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ದೂರು ನೀಡಿದ್ದ ಮಾಜಿ ರೌಡಿಶೀಟರ್‌ ನಾಗರಾಜ್‌ ವಿರುದ್ಧ ನೆಲಮಂಗಲ ವಕೀಲರ ಸಂಘದ ಕಾರ್ಯದರ್ಶಿ ರಘು ನೇತೃತ್ವದ ತಂಡ ಬೆಂಗಳೂರು ಗ್ರಾಮಾಂತರ ಎಸ್ಪಿ ಅಮಿತ್‌ ಸಿಂಗ್‌ಗೆ ದೂರು ನೀಡಿದೆ. ಸಮಾಜ ವಿರೋಧಿ ಚಟುವಟಿಧಿಕೆಗಳಲ್ಲಿ ತೊಡಗಿದ್ದ ನಾಗರಾಜ್‌ ತನ್ನ ಪರ ತೀರ್ಪು ನೀಡಲು ನ್ಯಾಯಾಧೀಶರಿಗೆ ಲಂಚ ಕೊಟ್ಟಿರುವುದಾಗಿ ಹೇಳಿ ದೂರು ನೀಡಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ನಾಗರಾಜ್‌ ವಿರುದ್ಧ ತನಿಖೆ ನಡೆಸುವಂತೆ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.

ಯಾರ್ಯಾರ ಸಂಪರ್ಕ
ರೌಡಿಗಳು ಹಾಗೂ ಪೊಲೀಸ್‌ ಅಧಿಕಾರಿಗಳು ಹಾಗೂ ರಾಜಕಾರಣಿ, ಅಧಿಕಾರಸ್ಥರ ನಡುವೆ ಸಂಬಂಧ ಇದೆ ಎಂಬ ಮಾತುಗಳು ಮೊದಲಿನಿಂದಲೂ ಇವೆ. ಇದೀಗ ನಾಗರಾಜ್‌ ವಿಡಿಯೋದಲ್ಲಿ ಬಹಿರಂಗಪಡಿಸಿರುವ ಕೆಲವು ಮಾಹಿತಿಗಳು ಇಂತಹ ಆರೋಪಕ್ಕೆ ಮತ್ತಷ್ಟು ಪುಷ್ಠಿ ಕೊಟ್ಟಿವೆ. ಆದರೆ, ನಾಗರಾಜ್‌ ಆರೋಪ ಮಾಡಿರುವ ಪೊಲೀಸ್‌ ಅಧಿಕಾರಿಗಳು ಯಾರ್ಯಾರು? ಮುಖ್ಯಮಂತ್ರಿಯವರ ವಿಶೇಷ ಆಪ್ತ ಕಾರ್ಯದರ್ಶಿ ಮಂಜುನಾಥ್‌ ಯಾರು? ಆ ರೀತಿಯ ಹೆಸರು ಹೇಳಿಕೊಂಡು ಪರಿಚಯಿಸಿ ಕೊಂಡಿದ್ದರೆ ಅಥವಾ ಸುಳ್ಳು ಹೆಸರು ಹೇಳಿದ್ದರೇ? ಎಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ. 

ಬಾಂಬ್‌ ಹೇಳಿಕೆ ಬಗ್ಗೆ ಗಂಭೀರ ತನಿಖೆ: ಪರಂ
ಬೆಂಗಳೂರು:
ನಿಷೇಧಿತ ಸಾವಿರ ಹಾಗೂ ಐನೂರು ರೂಪಾಯಿ ನೋಟುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪ ಎದುರಿಸುತ್ತಿರುವ ಮಾಜಿ ರೌಡಿ ಶೀಟರ್‌ ನಾಗ, ವಿಡಿಯೋ ಮೂಲಕ ನೀಡಿರುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ. 

ವಿಕಾಸಸೌಧದಲ್ಲಿ ಶನಿವಾರ ಸಂಜೆ ನಾಗನ ವಿಡಿಯೋ ಕುರಿತು ಬೆಂಗಳೂರು ನಗರ ಪಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಜೊತೆ ಚರ್ಚಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಾಂಬ್‌ ನಾಗ ಎಲ್ಲಿಯೋ ಕುಳಿತು ಹೇಳಿಕೆ ನೀಡಿದರೆ ಸತ್ಯ ಹೊರ ಬರುವುದಿಲ್ಲ ಎಂದರು. ಪೊಲಿಸರು ಆತನ ಬಂಧನಕ್ಕೆ ಪ್ರಯತ್ನ ನಡೆಸಿದ್ದಾರೆ.

ಐಪಿಎಸ್‌ ಅಧಿಕಾರಿಗಳ ವಿರುದ್ಧ ಮಾಡಿರುವ ಆರೋಪವನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ. ಮೊದಲು ಆತನ ಬಂಧನವಾಗಬೇಕು. ಆ ನಂತರವಷ್ಟೇ ಸತ್ಯ ತಿಳಿಯಲಿದೆ. ಆತನ ಬಳಿ ಸಾವಿರ ಸಿಮ್‌ ಇದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದೆ. ಪ್ರತಿ ದಿನ ಸಿಮ್‌ ಬದಲಾಯಿಸಿದರೆ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಬಾಂಬ್‌ ನಾಗ ಎಲ್ಲಿದ್ದಾನೆ ಎನ್ನುವುದು ಇನ್ನೂ ಪತ್ತೆಯಾಗಿಲ್ಲ ಎಂದು ಪರಮೇಶ್ವರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next