ನವದೆಹಲಿ: “ಲೋಕಸಭೆ ವೆಬ್‌ಸೈಟ್‌ನಲ್ಲಿ ನಾನು ಹೊಂದಿರುವ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಉದ್ಯಮಿ ದರ್ಶನ್ ಹೀರಾನಂದಾನಿಗೆ ಕೊಟ್ಟಿದ್ದು ನಿಜ” ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಒಪ್ಪಿಕೊಂಡಿದ್ದಾರೆ.
ಉದ್ದೇಶಪೂರ್ವಕವಾಗಿ ಅದಾನಿ ಗ್ರೂಪ್ ವಿರುದ್ಧ ಸಂಸತ್‌ನಲ್ಲಿ ಪ್ರಶ್ನೆ ಕೇಳಿದ ವಿಚಾರದಲ್ಲಿ ವಿವಾದಕ್ಕೆ ಗುರಿಯಾಗಿರುವ ಸಂಸದೆ ಮಹುವಾ ಮೊಯಿತ್ರಾ “ಇಂಡಿಯಾ ಟುಡೇ”ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ತಿಳಿಸಿದ್ದಾರೆ. ಹಿರಾನಂದಾನಿ ಅವರಿಂದ ಉಡುಗೊರೆಯಾಗಿ ಒಂದು ಸ್ಕಾರ್ಫ್ ಕೆಲವು ವಿಧಗಳ ಲಿಪ್‌ಸ್ಟಿಕ್‌ಗಳನ್ನು ಸ್ವೀಕರಿಸಿದ್ದು ಬಿಟ್ಟರೆ, ಬಿಜೆಪಿ ಆರೋಪಿಸಿರುವಂತೆ ಯಾವುದೇ ಲಂಚ ಪಡೆದಿಲ್ಲ ಎಂದು ಮಹುವಾ ಹೇಳಿಕೊಂಡಿದ್ದಾರೆ.
ದೂರದ ಸ್ಥಳದಿಂದ ತಾವು ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಲೋಕಸಭೆಯ ವೆಬ್‌ಸೈಟ್‌ನ ತಮ್ಮ ಲಾಗ್‌ಇನ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಹಿರಾನಂದಾನಿ ಅವರಿಗೆ ನೀಡಿದ್ದೆ. ಪಾಸ್‌ವರ್ಡ್ ಹಂಚಿಕೊಳ್ಳಬಾರದು ಎಂಬ ಬಗ್ಗೆ ನ್ಯಾಷನಲ್ ಇನ್ಫೊಮ್ಯಾಟಿಕ್ ಸೆಂಟರ್ ಬಳಿ ಯಾವುದೇ ನಿಯಮಗಳಿಲ್ಲ ಎಂದು ಮೊಯಿತ್ರಾ ಹೇಳಿದ್ದಾರೆ. ಇನ್ನೊಂದೆಡೆ, ನ್ಯಾಯವಾದಿ ಜಯ ಅನಂತ ದೇಹದ್ರಾಯ್‌ಗೆ ಅನಗತ್ಯ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ದೂರಿದ್ದಾರೆ.
ಇದೇ ವೇಳೆ, ಉದ್ಯಮಿ ಗೌತಮ್ ಅದಾನಿಯವರೇ ಎರಡರಿಂದ ಮೂರು ವರ್ಷಗಳ ಅವಧಿಯಲ್ಲಿ ಇಬ್ಬರು ಸಂಸದರ ಮೂಲಕ ತಮ್ಮನ್ನು ಪ್ರಶ್ನೆ ಕೇಳದಂತೆ ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದರು ಎಂದೂ ಮೊಯಿತ್ರಾ ದೂರಿದ್ದಾರೆ.
ನ.2ರಂದು ಹಾಜರಿ:
ಇನ್ನೊಂದೆಡೆ, ಸಂಸತ್‌ನ ಎಥಿಕ್ಸ್ ಕಮಿಟಿಯ ಮುಂದೆ ಅ.31ರ ಬದಲಾಗಿ, ನ.2ರಂದು ಹಾಜರಾಗಲು ಸಂಸದೆ ಮೊಯಿತ್ರಾ ಸೂಚಿಸಲಾಗಿದೆ. ಆ ದಿನಾಂಕಕ್ಕಿಂತ ಬೇರೆ ವಿಸ್ತರಣೆ ನೀಡಲು ಸಾಧ್ಯವಿಲ್ಲ ಎಂದೂ ಸಮಿತಿ ಸ್ಪಷ್ಟಪಡಿಸಿದೆ.