ವಿಧಾನಸಭೆ: “ನಾನು ಡೇಟ್ ಇಟ್ಟು ಕೊಟ್ಟಿಲ್ಲ ಅಂದಿದ್ರೆ ಜಗದೀಶ್ ಶೆಟ್ಟರು ಬಜೆಟ್ ಮಂಡಿಸಲು ಆಗ್ತಾನೆ ಇರ್ಲಿಲ್ಲ!’ ಹೀಗೆಂದವರು ಎಚ್.ಡಿ.ರೇವಣ್ಣ. ಅತೃಪ್ತ ಶಾಸಕರಿಗೆ ಅನುದಾನ ನೀಡಿಕೆಯಲ್ಲಿ ತಾರತಮ್ಯ ತೋರಿಲ್ಲ ಎಂದು ರೇವಣ್ಣ ಹೇಳಿದಾಗ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅದು ಮನೆಯ ಹಣವಲ್ಲ ಎಂದರು.
ಆಗ ರೇವಣ್ಣ, ಅದು ನಮ್ಮನೆ ದುಡ್ಡಲ್ಲ. ಸರ್ಕಾರದ ಹಣ. ನಾನು ಡೇಟ್ ಇಟ್ಟುಕೊಟ್ಟಿಲ್ಲ ಅಂದಿದ್ರೆ ಜಗದೀಶ್ ಶೆಟ್ಟರು ಬಜೆಟ್ ಮಂಡಿಸ್ತಾನೆ ಇರ್ಲಿಲ್ಲ ಎಂದು ಹೇಳಿದರು. ಆಗ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, “ನನಗೆ ಡೇಟ್ ಕೊಟ್ಟಿಲ್ವಪ್ಪ’ ಎಂದು ಕಾಲೆಳೆದರು. ಆಗ ರೇವಣ್ಣ, “ನೀವು ಯಮಗಂಡಕಾಲದಲ್ಲಿ ಕಲಾಪ ಶುರು ಮಾಡಿದ್ದೀರಿ’ ಎಂದು ನಕ್ಕರು.
15 ಅತೃಪ್ತರು ಗೆದ್ದು ಬರಲ್ಲ: ಬಳಿಕ ರೇವಣ್ಣ, ರಾಜೀನಾಮೆ ನೀಡಿರುವ 15 ಶಾಸಕರು ಮತ್ತೆ ಗೆದ್ದು ಬರಲ್ಲ. ನಾನು ಬರೆದು ಕೊಡುತ್ತೇನೆ. 15 ಶಾಸಕರನ್ನು ಕೂಡಿ ಹಾಕಿದ್ದು, ಅವರ ರಕ್ಷಣೆಗೆ ಬೌನ್ಸರ್‌ಗಳನ್ನು ನೇಮಿಸಿದ್ದಾªರೆ. ಈ ರೀತಿಯ ಪ್ರಯತ್ನಗಳಿಂದ ಪ್ರಧಾನಿ ಮೋದಿಯವರ ಗೌರವ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು. ಎಚ್.ಡಿ.ದೇವೇಗೌಡರು ತುಮಕೂರಿನಲ್ಲಿ ಸೋತಾಗ ಗಂಗೆ ಶಾಪ ಎಂದು ಹೇಳುತ್ತಿದ್ದರು. ಆದರೆ, ಫಲಿತಾಂಶ ಬಂದ ಮೇಲೆ ಮಳೆ ಬೀಳುತ್ತಿಲ್ಲ. ತುಮಕೂರಿನಲ್ಲಿ ಸುಳ್ಳು ಹೇಳಿದ್ದಕ್ಕೆ ದೇವರೇ ಶಾಪ ಕೊಟ್ಟಿದ್ದಾರೆ ಎಂದು ತಿಳಿಸಿದರು.
ರೇವಣ್ಣ ಮುಗ್ಧ: ಚರ್ಚೆ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಸಹೋದರ ರೇವಣ್ಣ ಮುಗ್ಧ ಎಂದು ಹೇಳಿದರು. ರೇವಣ್ಣ ಕೈಯಲ್ಲಿ ನಿಂಬೆ ಹಣ್ಣು ಇಟ್ಟುಕೊಂಡರೆ ಮಾಟ ಮಂತ್ರ ಮಾಡಿಸುತ್ತಾರೆ ಎಂದು ಆರೋಪಿಸುತ್ತಾರೆ. ಆದರೆ ಆತ ಮುಗ್ಧ. ದೇವರ ಮೇಲೆ ನಂಬಿಕೆ ಜಾಸ್ತಿ. ಆಂಜನೇಯ ದೇವಸ್ಥಾನಕ್ಕೆ ಹೋದರೆ ಎಲ್ಲರಿಗೂ ನಿಂಬೆ ಹಣ್ಣು ಕೊಡುತ್ತಾರೆ. ಅದನ್ನೇ ತಮಾಷೆ ಮಾಡುವುದು ಎಷ್ಟು ಸರಿ ಎಂದು ಹೇಳಿದರು.