Advertisement

Ayodhye ಬೀದಿ ಅಲೆಯುತ್ತಿದ್ದ ನನಗೆ ಪೇಜಾವರಶ್ರೀ ಸಿಕ್ಕರು!

11:00 AM Jan 08, 2024 | Team Udayavani |

ಕಮಲಾಕ್ಷ ಬಜಿಲಕೇರಿ ಅವರು ಹಿಂದೂ ಯುವಸೇನೆ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದವರು. ಮಂಗಳೂರು ನೆಹರೂ ಮೈದಾನದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸ್ಥಾಪನಾ ಸಂಘಟನ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದವರು.

Advertisement

ಮಂಗಳೂರಿನ ಅತೀ ಹಳೆಯ ಹುಲಿವೇಷ ತಂಡವನ್ನು ಹೊಂದಿರುವವರು. ಬಜಿಲಕೇರಿಯಲ್ಲಿ ಸ್ವಾಮಿ ಅಯ್ಯಪ್ಪ ಸೇವಾ ಸಮಿತಿಯನ್ನು ಮುನ್ನಡೆಸುತ್ತಿರುವವರು. ಎರಡು ಬಾರಿ ಸೆಂಟ್ರಲ್‌ ಮಾರುಕಟ್ಟೆ ವಾರ್ಡನ್ನು ಪಕ್ಷೇತರ ಕಾರ್ಪೊರೇಟರ್‌ ಆಗಿ ಪ್ರತಿನಿಧಿಸಿದವರು.

ಮರುದಿನ ಕರಸೇವೆ ನಿಗದಿಯಾಗಿತ್ತು. ಮುಂಚಿನ ದಿನ ರಾತ್ರಿ ನನಗೆ ಅದೇನೋ ಚಡಪಡಿಕೆ ಆಗುತಿತ್ತು. ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ. ಎದ್ದು ಅಯೋಧ್ಯೆಯ ಬೀದಿಯಲ್ಲಿ ಅಲೆದಾಡುತ್ತಾ ಇದ್ದೆ. ಅಷ್ಟರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ತಿನ ಅಶೋಕ್‌ ಸಿಂಘಾಲ್‌, ಉಮಾಭಾರತಿ, ಗಿರಿರಾಜ್‌ ಕಿಶೋರ್‌ ಮುಂತಾದ ನಾಯಕರು ನಡೆದು ಬರುತ್ತಿರುವುದು ಕಂಡಿತು. ಪೇಜಾವರ ಸ್ವಾಮೀಜಿಯವರಿಗೆ ನನ್ನ ಮುಖ ಪರಿಚಯವಿತ್ತು. ನನ್ನನ್ನು ನೋಡಿ “”ಏನು ತಿರುಗಾಡುವುದು, ನಮ್ಮೊಂದಿಗೆ ಬಾ” ಎಂದು ನನ್ನನ್ನು ಒಂದೆಡೆಗೆ ಕರೆದೊಯ್ದರು. ಅಲ್ಲಿ ರಾತ್ರಿ ಪ್ರಮುಖ ಮುಖಂಡರ ಸಭೆ ನಡೆಯುತಿತ್ತು. ಮರುದಿನ ದಿನ ಕರಸೇವೆ ಹೇಗೆ ನಡೆಯಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ಗಹನ ಚರ್ಚೆ ನಡೆಯಿತು. ಡಿ. 6ರ ಬೆಳಗ್ಗೆ 11 ಗಂಟೆಯೊಳಗೆ ಕರಸೇವೆಯನ್ನು ಯಶಸ್ವಿಗೊಳಿಸುವ ನಿರ್ಧಾರಕ್ಕೆ ಬರಲಾಯಿತು.

ಡಿ.6ರಂದು ಕರಸೇವೆಯಲ್ಲಿ ಪಾಲ್ಗೊಳ್ಳಬೇಕಿದ್ದ ನಾಗಪುರದ ಶಿವಸೇನೆ, ಬಜರಂಗದಳದವರ ಪರಿಚಯವೂ ಇದ್ದ ಕಾರಣ ಅವರ ಜತೆ ಸೇರಿಕೊಂಡೆ. ಒಂದು ಬದಿಯಿಂದ ಸಾವಿರಾರು ಕರಸೇವಕರು ಸೇರಿದ್ದರು. ಕರಸೇವೆಗೆ ಮೊದಲು ಅಯೋಧ್ಯೆಯ ಒಂದು ಫೋನ್‌ಬೂತ್‌ನಿಂದ ಊರಿಗೆ ಫೋನ್‌ ಮಾಡಿದೆ. ನಾನು ಫೋನ್‌ ಮಾಡಿ ತಿಳಿಸುವ ಮೊದಲು ವಿಜಯೋತ್ಸವ ಆಚರಣೆ ಬೇಡ ಎಂದಿದ್ದೆ. ಬಳಿಕ ಅಂಗಡಿಯಾತನಿಗೂ 100 ರೂ. ಮುಂಗಡ ನೀಡಿ, ಮತ್ತೆ ಬಂದು ಫೋನ್‌ ಮಾಡಲು ಅವಕಾಶ ಕೊಡಬೇಕು ಎಂದು ಕೇಳಿಕೊಂಡಿದ್ದೆ.

ಕರಸೇವೆಗೆ ಎಲ್ಲರೂ ಸೇರಿಕೊಂಡೆವು. ಇತರ ಕರಸೇವಕರ ಜತೆ ನನ್ನೊಂದಿಗೆ ಬಂದ ಗಣೇಶ್‌, ಫ್ರಾನ್ಸಿಸ್‌, ಎಕ್ಕೂರು ಸೀನ, ವಿಟuಲ ಇಷ್ಟು ಮಂದಿ ನಾವು ಮೇಲೆ ಹೋಗಿ ವಿವಾದಿತ ಕಟ್ಟಡವನ್ನು ಕೆಡವುವ ಕಾರ್ಯದಲ್ಲಿ ಪಾಲ್ಗೊಂಡೆವು. ಒಂದೇ ದಿನದಲ್ಲಿ ವಿವಾದಿತ ಕಟ್ಟಡ ಭಗ್ನವಾಯಿತು. ಕರಸೇವೆ ಯಶಸ್ವಿಯಾಯಿತು. ಆ ದಿನದ ನಮ್ಮ ಉತ್ಸಾಹಕ್ಕೆ ಪಾರವಿರಲಿಲ್ಲ.

Advertisement

ಅಯೋಧ್ಯೆಯಲ್ಲಿ ನಡೆದ 1990, 1992ರ ಎರಡೂ ಸಲದ ಕರಸೇವೆಯಲ್ಲಿ ತೊಡಗಿಸಿಕೊಂಡ ಭಾಗ್ಯ ನನ್ನದು. ಡಿ.6ರಂದು ನಮ್ಮ ರಾಜ್ಯದ ಕೆಲವು ಕಾರ್ಯಕರ್ತರಿಗೆ ಸಿಕ್ಕ ಅಪೂರ್ವ ಅವಕಾಶ ನನಗೂ ಸಿಕ್ಕಿತ್ತು. ಮಂಗಳೂರಿನಿಂದ 1992ರ ನವೆಂಬರ್‌ ಕೊನೆವಾರ ನಾವು ಹೊರಟಿದ್ದೆವು. ಹಿಂದೂ ಯುವಸೇನೆಯ ಪ್ರತ್ಯೇಕ ತಂಡವಾಗಿ ಸುಮಾರು 15 ಜನರು ತೆರಳಿದ್ದೆವು. ಝಾನ್ಸಿ ಜಂಕ್ಷನ್‌ ಸೇರಿದೆವು. ಅಲ್ಲಿಂದ ಸಿಕ್ಕ ಸಿಕ್ಕ ವಾಹನ, ಪಾದಯಾತ್ರೆ ಮೂಲಕ ಅಯೋಧ್ಯೆ ಹತ್ತಿರ ಸೇರಿಕೊಂಡೆವು. ನನ್ನೊಂದಿಗೆ ಎಕ್ಕೂರು ಸೀನ, ಫ್ರಾನ್ಸಿಸ್‌, ಪದ್ಮನಾಭ ಪುತ್ರನ್‌, ಪದ್ಮನಾಭ ಯಾನೆ ಪದ್ದು ಗರೋಡಿ, ಗಣೇಶ್‌ ಕರ್ಮಾರ್‌, ಎಕ್ಕೂರು ಬಾಬಾ, ನವೀನ್‌ ವಿಟ್ಠಲ್‌ ಹೊಯ್ಗೆಬಜಾರ್‌ ಮುಂತಾದವರಿದ್ದರು. ಅವರಲ್ಲಿ ಅನೇಕರು ಈಗ ನಮ್ಮೊಂದಿಗೆ ಇಲ್ಲ.

ನನಗೀಗ 73 ವರ್ಷ. ಅಂದಿನ ನಮ್ಮ ಕರಸೇವೆ ಬಳಿಕ ಅನ್ನಿಸಿದ್ದೆಂದರೆ ಮಂದಿರ ನಿರ್ಮಾಣ ಇಷ್ಟು ಸುದೀರ್ಘ‌ವಾಗಬಾರದಿತ್ತು. ಏನೇ ಆಗಲಿ, ಈಗಲಾದರೂ ಮಂದಿರ ನಿರ್ಮಾಣಗೊಳ್ಳುತ್ತಿದೆ ಎನ್ನುವ ಖುಷಿಯೂ ಇದೆ.

ಕರಸೇವೆಗೆ ಮೊದಲು ಅಯೋಧ್ಯೆಯ:

ಒಂದು ಫೋನ್‌ಬೂತ್‌ನಿಂದ ಊರಿಗೆ ಫೋನ್‌ ಮಾಡಿದೆ. ನಾನು ಫೋನ್‌ ಮಾಡಿ ತಿಳಿಸುವ ಮೊದಲು ವಿಜಯೋತ್ಸವ ಆಚರಣೆ ಬೇಡ ಎಂದಿದ್ದೆ. ಬಳಿಕ ಅಂಗಡಿಯಾತನಿಗೂ 100 ರೂ. ಮುಂಗಡ ನೀಡಿ, ಮತ್ತೆ ಬಂದು ಫೋನ್‌ ಮಾಡಲು ಅವಕಾಶ ಕೊಡಬೇಕು ಎಂದು ಕೇಳಿಕೊಂಡಿದ್ದೆ.

 ಕಮಲಾಕ್ಷ ಬಜಿಲಕೇರಿ, ಮಂಗಳೂರು

 ನಿರೂಪಣೆ: ವೇಣುವಿನೋದ್‌

Advertisement

Udayavani is now on Telegram. Click here to join our channel and stay updated with the latest news.

Next