ಬೆಂಗಳೂರು: ವಕ್ಫ್ ವಿರುದ್ಧ ಹೋರಾಡುವ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ನಮಗಿಲ್ಲ. ವರಿಷ್ಠರು ಕರೆದರಷ್ಟೇ ಅವರೊಂದಿಗೆ ಮಾತನಾಡುತ್ತೇನೆ. ನಮ್ಮ ಹೋರಾಟವನ್ನು ನಾವು ಮುಂದುವರಿಸುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ನಮಗಾಗಿರುವ ಅನ್ಯಾಯದ ಕುರಿತು ವರಿಷ್ಠರಿಗೂ ಗೊತ್ತಿದೆ. ವಿಜಯೇಂದ್ರ ಜತೆಗೆ ನನಗೇನು ಮಾತು? ನಾನೇಕೆ ಅವರೊಂದಿಗೆ ಮಾತನಾಡಬೇಕು? ಅಂತಹ ಆವಶ್ಯಕತೆ ನನಗಿಲ್ಲ ಎಂದರು.
ನಮಗೇನು ಅನ್ಯಾಯ ಆಗಿದೆ ಎಂಬುದು ನಮಗೆ ಗೊತ್ತಿದೆ. ನಮ್ಮ ನೋವು ನಮಗಿದೆ. ನನ್ನನ್ನೇಕೆ ಪಕ್ಷದಿಂದ ಉಚ್ಚಾಟನೆ ಮಾಡುತ್ತಾರೆ? ಇವೆಲ್ಲ ಮಾಧ್ಯಮಗಳ ಸೃಷ್ಟಿಯಷ್ಟೇ. ವಿಜಯೇಂದ್ರ ಅವರಿಗೆ ದಿಲ್ಲಿ ನಾಯಕರು ಪದೇ ಪದೆ ಭೇಟಿಗೆ ಅವಕಾಶ ಕೊಟ್ಟಿದ್ದಾರೆ. ಅವರು ಹೋಗಿದ್ದಾರೆ. ಅದರಲ್ಲೇನಿದೆ? ನಮಗೆ ಯುಗಾದಿ ಹೊಸ ವರ್ಷ ಅಷ್ಟೇ. ನಾನು ಹೊಂದಾಣಿಕೆ ರಾಜಕಾರಣಿ ಅಲ್ಲ. ಕಾಂಗ್ರೆಸ್ ಭಿಕ್ಷೆಯಿಂದ ಶಾಸಕನಾಗಿಲ್ಲ. ಯಾರ ಮನೆಯ ಬಿರಿಯಾನಿ ತಿನ್ನಲೂ ಹೋಗುವವನಲ್ಲ. ಯತ್ನಾಳ್ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನಂತಹ ಪಕ್ಷನಿಷ್ಠ ಯಾರೂ ಇಲ್ಲ. ನಮ್ಮದು ದಿಲ್ಲಿ ಆಂದೋಲನ ಅಲ್ಲ, ಜನರ ಆಂದೋಲನ. ನಾನು, ಕುಮಾರಬಂಗಾರಪ್ಪ, ಜಿ.ಎಂ. ಸಿದ್ದೇಶ್ವರ್ ಎಂದಿಗೂ ಯಾರ ಬಗ್ಗೆಯೂ ದೂರು ಹೇಳಿದವರಲ್ಲ. ಈ ವಿಚಾರದಲ್ಲಿ ಹೈಕಮಾಂಡ್ ಖುಷಿ ವ್ಯಕ್ತಪಡಿಸಿದ್ದಿದೆ. ನಾವು ಮತ ತರುವವರು ಎಂದರು.
3ನೇ ಹಂತದಲ್ಲೂ ಹೋರಾಡುತ್ತೇವೆ
ವಕ್ಫ್ ವಿರುದ್ಧ ಹೋರಾಟ ಮುಂದುವರಿಸಲು ವರಿಷ್ಠರೇ ಒಪ್ಪಿಗೆ ಕೊಟ್ಟಿದ್ದಾರೆ. 2ನೇ ಹಂತದ ಹೋರಾಟವನ್ನು ಬೀದರ್‌ನಿಂದ ಚಾಮರಾಜ ನಗರದವರೆಗೆ ಮಾಡುತ್ತೇವೆ. 3ನೇ ಹಂತದ ಹೋರಾಟ ವನ್ನೂ ಮಾಡುತ್ತೇವೆ. ಹಿಂದೂಗಳು, ರೈತರಿಗೆ ಅನ್ಯಾಯ ಆಗಿದೆ. ಭವಿಷ್ಯದಲ್ಲಿ ಸ್ಪೀಕರ್ ಪೀಠದ ಮೇಲೆ ಮೌಲ್ವಿಗಳು ಬಂದು ಕೂರುತ್ತಾರೆ. ಬೆಳಗಾವಿಯಲ್ಲಿ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿಸಿದ ಹಿತೇಂದ್ರನ ಮಾವ ಸಿದ್ದರಾಮಯ್ಯ ಜತೆ ಓಡಾಡುತ್ತಾರೆ. ರವಿ ಪ್ರಕರಣದಲ್ಲಿ ನಮ್ಮನ್ನು ಕರೆದು ಮಾತನಾಡಿಸಿದ್ದಕ್ಕೆ ಸಿಪಿಐ ನಾಯಕ್‌ನ್ನು ಅಮಾನತು ಮಾಡಿದ್ದಾರೆ. ನಮ್ಮ ಸರಕಾರ ಬಂದರೆ ಭಡ್ತಿ ಕೊಡುತ್ತೇವೆ ಎಂದು ಹೇಳಿದರು.