Advertisement

Vijayapura: ಖರ್ಗೆ ಕುಟುಂಬ ನಿವೇಶನ ವಾಪಸ್ ಕೊಟ್ಟಿದ್ದು ಗೊತ್ತಿಲ್ಲ: ಸಚಿವ ಎಂ.ಬಿ.ಪಾಟೀಲ್

04:13 PM Oct 14, 2024 | keerthan |

ವಿಜಯಪುರ: ಸಿದ್ಧಾರ್ಥ್ ವಿಹಾರ ಟ್ರಸ್ಟ್ ಗೆ ಮಂಜೂರಾಗಿದ್ದ ಕೆಐಎಡಿಬಿಗೆ ನಿವೇಶನವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ವಾಪಸ್ ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಈ ಕುರಿತು ನಾನು ಪರಿಶೀಲಿಸದೆ ಏನೂ ಹೇಳುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಾನು ಅಮೆರಿಕ ಪ್ರವಾಸ ಬಳಿಕ ಬೆಂಗಳೂರಿಗೆ ಹೋಗದೆ ನೇರವಾಗಿ ವಿಜಯಪುರಕ್ಕೆ ಬಂದಿದ್ದೇನೆ. ನಾಳೆ, ನಾಡಿದ್ದು ಬೆಂಗಳೂರಿಗೆ ಹೋದ ಬಳಿಕ ಆ ಕುರಿತು ನೋಡುತ್ತೇನೆ ಎಂದೆಷ್ಟೇ ಹೇಳಿದರು.

ಇದೇ ವೇಳೆ, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ವಿಚಾರಣೆ ಮತ್ತು ಬಂಧನಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ಕಾರಣಕ್ಕೆ ಸಿಎಂ ಬಂಧನವಾಗಬೇಕು? ದೂರುದಾರರಿಗಾಗಿ ಬಂಧನ ಮಾಡಬೇಕಾ?. ದೂರುದಾರರಿಗೆ ಬೆದರಿಕೆ ಹಾಕುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಆಗಲಿ, ನಮ್ಮ ಸರ್ಕಾರ ಆಗಲಿ ಮಾಡಲ್ಲ. ದೂರುದಾರರು ನಿರ್ಭಿಡೆಯಿಂದ ಇರಬಹುದು. ದೂರುದಾರರಿಗೆ ರಕ್ಷಣೆ ನೀಡಲು ನಮ್ಮ ಇಲಾಖೆ ಇದೆ ಎಂದು ತಿಳಿಸಿದರು.

ಕಾಂಗ್ರೆಸ್ ಇಸ್ಲಾಮಿಕ್ ಪಾರ್ಟಿ ಎಂದು ಪ್ರಧಾನಿ ಮೋದಿ ಹೇಳಿಕೆ ಹಾಗೂ ಬಿಜೆಪಿ ಭಯೋತ್ಪಾದಕರ ಪಾರ್ಟಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ಎಲ್ಲ ಜಾತಿ ಧರ್ಮದವರನ್ನೂ ಸರಿಸಮನಾಗಿ ಕಾಣುತ್ತದೆ. ನಾವು ಎಲ್ಲರನ್ನೂ ರಕ್ಷಣೆ ಮಾಡುತ್ತೇವೆ, ಎಲ್ಲರಿಗೂ ಪ್ರೋತ್ಸಾಹ ನೀಡುತ್ತೇವೆ. ಬಿಜೆಪಿಯವರ ಹಾಗೆ ಒಡೆದಾಳುವ ನೀತಿಯನ್ನು ನಾವು ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು.

ಸನ್ಮಾನ ಮಾಡಿದವರ ವಿರುದ್ಧ ದೂರಿಗೆ ಚಿಂತನೆ: ಇದೇ ಸಂದರ್ಭದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಾದ ಮನೋಹರ ಯಡವೆ ಹಾಗೂ ಪರಶುರಾಮ ವಾಗ್ಮೋರೆಗೆ ನಗರದ ಹಿಂದೂಪರ ಸಂಘಟನೆಗಳ ಮುಖಂಡರು ಸನ್ಮಾನಿಸಿರುವ ಬಗ್ಗೆ ಪ್ರಕ್ರಿಯಿಸಿದ ಸಚಿವರು, ಗೌರಿ ಹತ್ಯೆಯ ಆರೋಪಿಗಳಿಗೆ ಸನ್ಮಾನ ಮಾಡಿದ್ದನ್ನು ನಾನು ಮಾಧ್ಯಮಗಳ ಮೂಲಕ ನೋಡಿದ್ದೇನೆ. ಉಮೇಶ್ ವಂದಾಲ್ ಹಾಗೂ ಕಂಪನಿ ಈ ಸನ್ಮಾನ ಮಾಡಿದೆ. ಇದು ಅತ್ಯಂತ ಕೆಟ್ಟ ಕೆಲಸ. ಗೌರಿ ಲಂಕೇಶ್ ಹಾಗೂ ಇತರ ಚಿಂತಕರ ಹತ್ಯೆಯ ಆರೋಪಿಗಳಿಗೆ ಸನ್ಮಾನ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲು ಚಿಂತನೆ ಮಾಡಲಾಗುತ್ತದೆ ಎಂದು ತಿಳಿಸಿದರು.

Advertisement

ಬಸವಣ್ಣನ ಜನ್ಮ ಭೂಮಿಯಲ್ಲಿ ಈ ರೀತಿಯಾಗಿದ್ದು ಹೇಯ ಕೃತ್ಯ. ಅಲ್ಲದೇ, ಯಾರ ಜೀವ ತೆಗೆದುಕೊಳ್ಳಲು ಯಾರಿಗೂ ಅಧಿಕಾರ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಗೌರಿ ಲಂಕೇಶ್ ಹತ್ಯೆಯ ಪ್ರಕರಣದಲ್ಲಿ ನಿರಾಪರಾಧಿಗಳಾಗಿ ಬಂದಮೇಲೆ ಸನ್ಮಾನ ಮಾಡುವುದು ವಿಚಾರ ಬೇರೆ. ಆದರೆ, ಅದಕ್ಕೂ ಮೊದಲೇ ಜಾಮೀನಿನ ಮೇಲೆ ಬಂದವರಿಗೆ ಸನ್ಮಾನ ಮಾಡಿದ್ದು ಸರಿಯಲ್ಲ. ಇಂತಹ ಮಹಾನ್ ವ್ಯಕ್ತಿಗಳ ಹತ್ಯೆ ಮಾಡಿದ ಆರೋಪಿಗಳಿಗೆ ಸನ್ಮಾನ ಮಾಡುವುದು ಹೇಯ ಕೃತ್ಯ. ಗೌರಿ ಲಂಕೇಶ್ ಹತ್ಯೆ ಆರೋಪಿಗಳು ತಪ್ಪಿತಸ್ಥರಲ್ಲ ಎಂದು ಹೇಳೋಕೆ ಇವರು ನ್ಯಾಯಾಧೀಶರಾ? ಇವರು ಅಪರಾಧಿಗಳಾ? ನಿರಪರಾಧಿಗಳಾ ಎಂದು ನ್ಯಾಯಾಲಯ ನಿರ್ಧಾರ ಮಾಡುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next