ಮೊನ್ನೆ, ತುರ್ತಾಗಿ ಬ್ಯಾಂಕ್‌ಗೆ ಹೋಗಬೇಕಾಗಿ ಬಂತು. ಮನೆಯಿಂದ ಹೊರಗೆ ಕಾಲಿಡದೆ ಬರೋಬ್ಬರಿ 50 ದಿನವಾಗಿದ್ದರಿಂದ, ಗೇಟು ದಾಟಿ ಆಚೆ ಹೋಗಲು ಹೆದರಿಕೆ ಆಗುತ್ತಿತ್ತು. ವಿಧಿ ಇಲ್ಲದೆ, ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೊರಟೆ. ಬೆಂಗಳೂರಿನಲ್ಲಿ, ಸಾಮಾನ್ಯ ದಿನಗಳಲ್ಲಿಯೇ ಆಟೋದವರೊಂದಿಗೆ ಚೌಕಾಸಿ ಮಾಡುವುದು ಸವಾ ಲಿನ ಕೆಲಸ. ಇನ್ನು, ಇಂಥ ಪರಿಸ್ಥಿತಿಯಲ್ಲಿ ಕೇಳಬೇಕೆ? ದೇವರ ದಯಕ್ಕೆ, ಒಬ್ಬ ಆಟೋದವನು ನಾನು ಹೇಳಿದಲ್ಲಿಗೆ ಬರಲು ಒಪ್ಪಿಕೊಂಡ.
(ಅವನೂ ಮಾಸ್ಕ್ ಧರಿಸಿದ್ದ.) ಬ್ಯಾಂಕ್ ಒಳಗೆ ಉದ್ದ ಕ್ಯೂ ಕಾಣಿಸಿತು. ವಾಸ್ತವವಾಗಿ ಅಲ್ಲಿ 6-7 ಜನ ಇದ್ದರೂ, ಸಾಮಾಜಿಕ ಅಂತರದ ಕಾರಣದಿಂದ, ಕ್ಯೂ ಉದ್ದ ಕಾಣಿಸುತ್ತಿತ್ತು. ಬಾಗಿಲಿನಬಳಿಯೇ ಸ್ಯಾನಿಟೈಸರ್ ಇಟ್ಟಿದ್ದರು. ಒಳಗೆ ಹೋದರೆ, ಬ್ಯಾಂಕ್ ಸಿಬ್ಬಂದಿಗೂ ನಮಗೂ ಮೂರಡಿ ಅಂತರ. ನಡುವೆ ಗಾಜಿನ ಪರದೆ! ಮಾಸ್ಕ್ ತೆಗೆದು ಉಸಿರಾಡುತ್ತಿದ್ದ ಕ್ಯಾಶಿಯರ್, ನಾನು ಕೌಂಟರ್ ನತ್ತ ಹೋಗುತ್ತಿದ್ದಂತೆಯೇ ಮಾಸ್ಕ್ ನಿಂದ ಮುಖ ಮುಚ್ಚಿಕೊಂಡರು. ನಾನು ಕೊಟ್ಟ ನೋಟುಗಳನ್ನು, ಸ್ಯಾನಿಟೈಸ್ ಮಾಡಬೇಕಾದ ನೋಟುಗಳ ಕಂತೆಗೆ ಸೇರಿಸಿದರು.
ಕೊಟ್ಟು, ತೆಗೆದುಕೊಳ್ಳುವ ಎಲ್ಲ ವಸ್ತುಗಳನ್ನೂ ಸ್ಯಾನಿಟೈಸ್ ಮಾಡುತ್ತಾರಂತೆ ಅವರು. ಅಬ್ಬಬ್ಟಾ, ಜನ ದುಡ್ಡನ್ನು ಇಷ್ಟೊಂದು ಅಸ್ಪೃಶ್ಯವಾಗಿ ನೋಡುತ್ತಿರುವುದು, ಇದೇ ಮೊದಲಿರ ಬೇಕು. ಇಷ್ಟು ದಿನ ಒಳಗೇ ಇದ್ದವಳಿಗೆ, ಹೊರಗೆ ಜನರು ಇಷ್ಟೆಲ್ಲಾ ಮುಂಜಾಗ್ರತೆಯಿಂದ ನಡೆದುಕೊಳ್ಳುತ್ತಿದ್ದಾರೆ ಅಂತ ಅಂದಾಜಿರಲಿಲ್ಲ. ಕೊನೆಗೆ, ಎಲ್ಲಾ ಕೆಲಸ ಮುಗಿಸಿಕೊಂಡು ಹತ್ತಿರದ ಎಟಿಎಂ ಬೂತ್‌ಗೆ ಹೋದೆ. ಸೀದಾ ಒಳ ನುಗ್ಗುತ್ತಿದ್ದ ನನ್ನನ್ನು ತಡೆದ ಸೆಕ್ಯುರಿಟಿಯವನು, “ಮೇಡಂ, ಸಿಸಿ ಕ್ಯಾಮೆರಾದಲ್ಲಿ ಮುಖ ಕಾಣಿಸ್ಬೇಕು. ಮಾಸ್ಕ್ ತೆಗೆದು ಒಳಗೆ ಹೋಗಿ’ ಅಂದ.
ಯುದ ಮಾಡುವಾಗ ಕತ್ತಿಯನ್ನೇ ಕಿತ್ತುಕೊಂಡರೆ ಹೇಗಾಗುತ್ತೋ, ಹಾಗಾಯ್ತು ನನಗೆ. ಮಾಸ್ಕ್ ತೆಗೆದು, ಎಟಿಎಂ ಯಂತ್ರ ಮುಟ್ಟುತ್ತಿದ್ದಂತೆಯೇ, ಅಲ್ಲೆಲ್ಲೋ ಅದೃಶ್ಯವಾಗಿ ಇರುವ ವೈರಸ್ ಅಟ್ಯಾಕ್ ಮಾಡಿಬಿಟ್ಟರೆ… ಹೀಗೊಂದು ಯೋಚನೆ ಬಂದದ್ದೇ ತಡ; ನಿಂತಲ್ಲೇ ಮೈ ಬೆವರಿತು. ಎಟಿಎಂ ಸಹವಾಸವೂ ಬೇಡ, ಹೆಚ್ಚಿನ ಹಣವೂ ಬೇಡ. ಕೊರೊನಾ ಕಾಟ ಮುಗಿಯುವವರೆಗೆ ನಾನು ಹೊರಗೆಲ್ಲೂ ಹೋಗುವುದೇ ಇಲ್ಲ. ಇರುವ ದುಡ್ಡಿನಲ್ಲಿಯೇ ಅಡ್ಜಸ್ಟ್ ಮಾಡಿದರಾಯ್ತು ಅಂತ ಸೀದಾ ಮನೆಗೋಡಿದೆ.
* ಶಾಲಿನಿ