ನವರಸನಾಯಕ ಜಗ್ಗೇಶ್ ಅಭಿನಯದ “ಪ್ರೀಮಿಯರ್ ಪದ್ಮಿನಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಆರಂಭದಲ್ಲಿ ಚಿತ್ರದ ಮಾತಿನ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದ ಚಿತ್ರತಂಡ ಅಂತಿಮವಾಗಿ ಬಾಕಿಯಿದ್ದ ಚಿತ್ರದ ಹಾಡಿನ ಚಿತ್ರೀಕರಣವನ್ನು ನಡೆಸುವುದರ ಮೂಲಕ ಕುಂಬಳಕಾಯಿ ಒಡೆದಿದೆ. ಇನ್ನು ಚಿತ್ರದ ಟೈಟಲ್ ಸಾಂಗ್ ಚಿತ್ರೀಕರಣದ ಕೊನೆಯ ಹಂತದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಕೆ.ಆರ್ ರಸ್ತೆಯ ಕೆಫೆ ಶ್ರೀ ಶೂಟಿಂಗ್ ಹೌಸ್‌ಗೆ ಚಿತ್ರತಂಡ, ಪತ್ರಕರ್ತರು ಮತ್ತು ಮಾಧ್ಯಮಗಳನ್ನು ಆಹ್ವಾನಿಸಿತ್ತು.
ಈ ವೇಳೆ ಯೋಗರಾಜ್ ಭಟ್ ಬರೆದ “ಮನಸ್ಸು ಎಲ್ಲೋ… ದೇಹ ಎಲ್ಲೋ..’ ಸಾಹಿತ್ಯದ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯ ಹಾಡಿಗೆ ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿಯಲ್ಲಿ ನಟ ಜಗ್ಗೇಶ್, ಪ್ರಮೋದ್ ಸಹ ಕಲಾವಿದರ ಜೊತೆ, ಗುಂಡು ಹಾಕುತ್ತಾ “ಅತ್ಲಾಗ್ ಹೋದ್ರೆ ಆ ಕಡೆ, ಇತ್ಲಾಗ್ ಹೋದ್ರೆ ಈ ಕಡೆ’ ಅಂತ ತೂರಾಡುತ್ತಾ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದರು. ಅದ್ವೆ„ತ ಗುರುಮೂರ್ತಿ ತಮ್ಮ ಕ್ಯಾಮರಾ ಕಣ್ಣಲ್ಲಿ ಆ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು. ಬಳಿಕ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ನೀಡಿ, ಮಾತಿಗಿಳಿದ ಚಿತ್ರತಂಡ “ಪ್ರೀಮಿಯರ್ ಪದ್ಮಿನಿ’ಯ ಜರ್ನಿಯ ಅನುಭವಗಳನ್ನು ತೆರೆದಿಟ್ಟಿತು.
ಮೊದಲಿಗೆ ಚಿತ್ರದ ಬಗ್ಗೆ ಮಾತು ಶುರುಮಾಡಿದ ನಿರ್ಮಾಪಕಿ ಶೃತಿ ನಾಯ್ಡು, “ನಾವು ಅಂದುಕೊಂಡ ರೀತಿಯಲ್ಲಿ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿಯುತ್ತಿದೆ. ಚಿತ್ರದ ಎಲ್ಲಾ ಕಲಾವಿದರು, ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಆದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ. ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುವುದೆಂಬ ನಂಬಿಕೆ ಇದೆ’ ಎಂದರು.
ಇನ್ನು “ಪ್ರೀಮಿಯರ್ ಪದ್ಮಿನಿ’ ರೀಮೇಕ್ ಚಿತ್ರ ಎಂಬ ಸುದ್ದಿ ನಿರ್ದೇಶಕ ರಮೇಶ್ ಇಂದಿರಾ ಅವರ ಕಿವಿ ಮೇಲೆ ಬಿದ್ದಿದೆಯಂತೆ. ಮೊದಲಿಗೆ ಇದರ ಬಗ್ಗೆ ಸ್ಪಷ್ಟನೆ ಕೊಡುತ್ತಾ ಮಾತು ಆರಂಭಿಸಿದ ರಮೇಶ್ ಇಂದಿರಾ, “ಇದೊಂದು ಕಂಪ್ಲೀಟ್ ಸ್ವಮೇಕ್ ಚಿತ್ರ. ನನಗೆ ರೀಮೇಕ್ ಮಾಡುವ ಯಾವುದೇ ದರ್ದು ಇಲ್ಲ. ನನ್ನ ಬರವಣಿಗೆಗೆ ಬರ ಬಂದಿಲ್ಲ. ಅಂತಹ ಅನಿವಾರ್ಯ ಪರಿಸ್ಥಿತಿ ಬಂದರೆ ನೋಡೋಣ. ಸುಮ್ಮನೆ ಇಂಥ ವಿಷಯಗಳ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ. ಇದು ಎರಡು ಜನರೇಷನ್ ನಡುವಿನ ಸಂಬಂಧ, ಯೋಚನೆಗಳ ಕುರಿತಾಗಿರುವ ಚಿತ್ರ. ಇಲ್ಲಿ ಪ್ರೀಮಿಯರ್ ಪದ್ಮಿನಿ ಎಂಬ ಕಾರು ಒಂದು ಸಿಂಬಲ…. ಈ ಕಾರಿನ ಯಜಮಾನ ಹಾಗೂ ಚಾಲಕನ ಸಂಬಂಧ ನಿತ್ಯ ಜೀವನದಲ್ಲಿ ಹೇಗಿರುತ್ತದೆ ಎಂದು ಪ್ರಸ್ತಾಪಿಸುತ್ತಾ, ಜೀವನದ ಅನೇಕ ಸ್ತರಗಳ ಪರಿಚಯ ಮಾಡಲಾಗಿದೆ. ಹ್ಯೂಮರಸ್ ಆಗಿ ಚಿತ್ರವನ್ನು ತೆರೆಮೇಲೆ ತರುತ್ತಿದ್ದೇವೆ’ ಎಂದರು.
ಇನ್ನು ಚಿತ್ರದ ಬಗ್ಗೆ ಮಾತನಾಡಿದ ನಟ ಜಗ್ಗೇಶ್, “ಕೆಲವರಿಗೆ ಸಿನಿಮಾ ಮಾಡುವವರ ಕಷ್ಟಗೊತ್ತಿಲ್ಲ. ಬಂಡವಾಳ ಹಾಕುವವರ ನೋವು ಗೊತ್ತಿಲ್ಲ. ತಿಂಗಳಾನುಗಟ್ಟಲೆ ಕುಳಿತು ಕತೆ ಬರೆದವರ ಶ್ರಮ ಗೊತ್ತಿರುವುದಿಲ್ಲ. ಎಲ್ಲೋ ಕೇಳಿ, ಇನ್ನೇನನ್ನೋ ನೋಡಿ, ಒಂದು ಸಿನಿಮಾ ರೀಮೇಕು, ಕದ್ದಿದ್ದು ಅಂತೆಲ್ಲ ಪಟ್ಟ ಕಟ್ಟುವುದು, ಆರೋಪ ಮಾಡುವುದು, ಗಾಸಿಪ್ ಹಬ್ಬಿಸುವುದು ತುಂಬಾ ಸುಲಭ. ಇದು ಶುದ್ಧ ಸ್ವಮೇಕ್ ಸಿನಿಮಾ. ರೀಮೇಕ್ ಎನ್ನುವ ಆರೋಪ ಶುದ್ಧ ಸುಳ್ಳು. ಕೆಲವರಿಗೆ ಹೊಟ್ಟೆ ಕಿಚ್ಚು. ಈ ಸಂದರ್ಭ ಕನ್ನಡದ ಪ್ರೇಕ್ಷಕರಿಗೆ ನಾನೊಂದು ಭರವಸೆ ನೀಡುತ್ತೇನೆ. ಈ ತರಹದ ಕತೆ, ಈ ತನಕ ಬಂದಿಲ್ಲ. ನಿರ್ದೇಶಕ ರಮೇಶ್ ಇಂದಿರಾ ಅವರೇ ತಿಂಗಳುಗಟ್ಟಲೆ ಕುಳಿತು ಬರೆದ ಕತೆ ಇದು. ಸಾಂಸಾರಿಕ ಜೀವನದ ಹಲವು ಮಜಲುಗಳನ್ನು ಈ ಕಥೆ ಹೇಳುತ್ತದೆ. ಕಾರ್ ಡ್ರೈವರ್ ಮತ್ತು ಅದರ ಮಾಲೀಕನ ನಡುವೆ ನಡೆಯುವ ಸಂಭಾಷಣೆ ತುಂಬಾ ಅದ್ಭುತವಾಗಿದೆ. ಇಂತಹ ಕಥೆಗೆ ರಿಮೇಕ್ ಎನ್ನುವ ಪಟ್ಟಕಟ್ಟುವುದು ಸರಿಯಲ್ಲ’ ಎಂದರು ಜಗ್ಗೇಶ್.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ನಟ ಪ್ರಮೋದ್, ಛಾಯಾಗ್ರಹಕ ಅದ್ವೆ„ತ ಗುರುಮೂರ್ತಿ, ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಜಿ. ಎಸ್. ಕಾರ್ತಿಕ ಸುಧನ್