ಈಕೆ ಹಾಡುತ್ತಾಳೆಂದರೆ, ಆ ದೇವರು ತನ್ಮಯದಿಂದ ಕೇಳುತ್ತಾ ಹೋಗುತ್ತಾನೆ. ಈ ಯುವತಿ ಹಾಡುವ ಸೋಬಾನೆ ಪದಗಳು ಆತನಿಗೂ ಪ್ರೀತಿ. ಸುಮಾರು 200ಕ್ಕೂ ಹೆಚ್ಚು ಗೀತೆಗಳನ್ನು ತನ್ನ ನೆನಪಿನ ಗಂಟಿನಲ್ಲಿ ಇಟ್ಟುಕೊಂಡಿರುವ ಈಕೆಯನ್ನು ಕಂಡರೆ ಊರಿನವರಿಗೂ ಅಷ್ಟೇ ಪ್ರೀತಿ.
ಎಲ್ಲ ಹಾಡುಗಾರ್ತಿಯರಂತೆ ಈಕೆಯೂ ಹಾಡಬಲ್ಲಳಷ್ಟೇ ಎಂದರೆ, ಆ ವ್ಯಾಖ್ಯಾನ ಶುದ್ಧ ತಪ್ಪಾದೀತು. ಕಾರಣ, ಈಕೆ ಅಂಧ ಯುವತಿ. ತಾನು ಹಾಡುವ ಹಾಡು ಯಾರನ್ನು ತಲುಪುತ್ತದೋ, ಇಲ್ಲವೋ ಎಂಬುದರ ಬಗ್ಗೆ ಈಕೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಹಾಗಾಗಿ, ಬಳ್ಳಾರಿ ಜಿಲ್ಲೆಯ ಕೊಟ್ಟೂರು ಸಮೀಪದ ಕೆ. ಅಯ್ಯನಹಳ್ಳಿ ಗ್ರಾಮದಲ್ಲಿ ಪಾರ್ವತಿ ಅಂದ್ರೆ ಎಲ್ಲರಿಗೂ ವಿಶೇಷ ಪ್ರೀತಿ. ಅಲ್ಲಿ ಈಕೆಯ ಹಾಡಿಗೆ ಅಪಾರ ಅಭಿಮಾನಿಗಳೂ ಇದ್ದಾರೆ. ಗ್ರಾಮದಲ್ಲಿ ಜರುಗುವ ಪ್ರತಿ ಶುಭ ಸಮಾರಂಭಗಳಲ್ಲೂ ಅಂಧ ಗಾಯಕಿ ಪಾರ್ವತಿ ಸುಮಧುರವಾಗಿ ಸೋಬಾನೆ ಪದಗಳನ್ನು ಹಾಡುತ್ತಾರೆ. ಮದುವೆ, ನಾಮಕರಣದಂಥ ಶುಭ ಸಮಾರಂಭಗಳಲ್ಲಿ ಈಕೆಯ ಹಾಡುಗಳೇ ಹೈಲೈಟ್.
ಈಕೆ ಭಕ್ತಿಗೀತೆ ಹಾಡುತ್ತಾಳೆಂದರೆ, ಆ ಹಾಡಿಗೆ ದೇವರೂ ಸಂಪ್ರೀತಗೊಳ್ಳುತ್ತಾನೆಂಬ ನಂಬಿಕೆ ಊರಿನವರಲ್ಲಿದೆ. ಭಕ್ತಿಗೀತೆಗಳಲ್ಲಿ ಪ್ರಸ್ತಾಪಗೊಳ್ಳುವ ದೇವರ ಹೆಸರಿನ ಬಗ್ಗೆಯೂ ಇವರು ಆಳವಾಗಿ ಮಾತಾಡಬಲ್ಲರು. ಗ್ರಾಮದಲ್ಲಿ ನಿತ್ಯವೂ ಒಂದೊಂದು ದೇಗುಲಕ್ಕೆ ಹೋಗುತ್ತಾರೆ. ಅಲ್ಲಿ ಭಕ್ತಿಯಿಂದ ದೇವರನ್ನು ಮನಸಾರೆಯಾಗಿ ತನ್ನ ಹಾಡುಗಳ ಮುಖೇನ ಭಜಿಸಿ ಆನಂದಿಸುತ್ತಾರೆ. ಶಿವ ಇವರ ನೆಚ್ಚಿನ ದೇವರಂತೆ.
“ಸದೃಢ ದೇಹದಲ್ಲಿ ಸದೃಢ ಮನಸ್ಸು’ ಎಂಬ ಮಾತು ಈಕೆಯನ್ನು ನೋಡಿದಾಗ ಸುಳ್ಳಾಗುತ್ತದೆ. ದೈಹಿಕವಾಗಿ ಅನೇಕರು ಸದೃಢರಿದ್ರೂ ಅವರೆಲ್ಲ ಪಾರ್ವತಿಯಂಥ ಪ್ರತಿಭೆಗಳಾಗಿರುವುದಿಲ್ಲ. ಕೇವಲ ಹಾಡಿನ ವಿಚಾರಕ್ಕಷ್ಟೇ ಅಲ್ಲ, ಈಕೆಯ ಗುಣ ನಡತೆಗಳೂ ಎಲ್ಲರಿಗೂ ಪ್ರೇರಣೆ. ಈಕೆ ಯಾವ ಕೆಲಸಕ್ಕೂ ಪರರನ್ನು ಅವಲಂಬಿಸುವುದಿಲ್ಲ. ತನ್ನ ಕೆಲಸವನ್ನು ತಾನೇ ನಿಭಾಯಿಸುತ್ತಾಳೆ. ಅಡುಗೆ ಮನೆಯಲ್ಲಿ ತನ್ನ ತಾಯಿಗೂ ನೆರವಾಗುತ್ತಾಳೆ ಎಂಬುದೇ ಒಂದು ಹೆಮ್ಮೆಯ ಸಂಗತಿ.
ಒಟ್ಟಿನಲ್ಲಿ ಈಕೆಯನ್ನು ನೋಡಿದರೆ, “ಸಾಧನೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ’ ಎನ್ನುವ ಮಾತು ಸುಳ್ಳಲ್ಲ ಅಂತನ್ನಿಸುತ್ತೆ.
– ಪ್ರದೀಪ ಎಂ.ಬಿ., ಕೊಟ್ಟೂರು