Advertisement
“ಈ ಹುಡುಗನ್ನಾದ್ರೂ ಒಪ್ಕೊಳ್ಳೇ ಮಾರಾಯ್ತಿ. ಒಳ್ಳೆ ಕೆಲಸ, ಬೆಂಗ್ಳೂರಲ್ಲಿ ಸ್ವಂತ ಮನೆ ಇದೆ ಅಂತೆ. ಇನ್ನೇನ್ ಬೇಕು ನಿಂಗೆ….’ ಅಮ್ಮ ಹೇಳುತ್ತಲೇ ಇದ್ದಳು. ಅವನ ಎಫ್ಬಿ ಪ್ರೊಫೈಲ್ ಜಾಲಾಡಿ, ಈಗಾಗ್ಲೆ ಅವನನ್ನು ರಿಜೆಕ್ಟ್ ಮಾಡಿರೋ ವಿಷ್ಯ ಅಮ್ಮನಿಗೆ ಗೊತ್ತಿಲ್ಲ. ಯಾವುದೇ ಹುಡುಗನ ಜಾತಕ ಬಂದರೂ, ನಾನು ಮೊದಲು ಮಾಡೋ ಕೆಲಸ ಅವನ ಫೇಸ್‌ಬುಕ್ ಪ್ರೊಫೈಲ್ ಚೆಕ್ ಮಾಡೋದು. ಹುಡುಗ ಎಂಥವನೆಂದು ಹೇಳಲು ಜಾತಕ ಯಾಕೆ, ಎಫ್ಬಿ ಗೋಡೆಯೇ ಸಾಕಲ್ಲ? ಈ ಹುಡುಗ ಹಾಕೋ ಸ್ಟೇಟಸ್, ಶೇರ್ ಮಾಡೋ ಪೋಸ್ಟ್‌ಗಳನ್ನು ನೋಡಿದರೇ ಗೊತ್ತಾಗುತ್ತೆ ಹುಡುಗ ತುಂಬಾ ಬೋರಿಂಗ್ ಅಂತ. ಬೇರೆಯವರ ಪೋಸ್ಟ್‌ಗಳಿಗೆ ಅವನು ಕಮೆಂಟ್ ಮಾಡಿರೋ ರೀತಿಯೂ ಹಿಡಿಸಲಿಲ್ಲ. ಬೇಡ ಅನ್ನೋಕೆ ಇದಕ್ಕಿಂತ ಕಾರಣ ಬೇಕೇ?
Related Articles
Advertisement
ಓದು ಮುಗಿಯಿತು. ಕೆಲಸವೂ ಸಿಕ್ಕಿತು. ಬದುಕಿನ ಮುಂದಿನ ಘಟ್ಟ ಮದುವೆಯೇ ತಾನೆ? “ಯಾರನ್ನಾದ್ರೂ ಇಷ್ಟಪಟ್ಟಿದ್ದೀಯ?’ ಅಂತ ಅಪ್ಪ ಕೇಳಿದಾಗ, ನಿಂಗಾಗಿ ಕಾಯ್ತಿನಿ ಅಂತ ಹೇಳಿದ ಯಾವ ಹುಡುಗನ ಹೆಸರನ್ನೂ ಹೇಳಲಿಲ್ಲ. ಹೇಳಬೇಕು ಅಂತ ಅನ್ನಿಸಲೂ ಇಲ್ಲ. ಸರಿ, ಮನೆಯವರೇ ನನಗಾಗಿ ಗಂಡು ಹುಡುಕೋಕೆ ಶುರು ಮಾಡಿದರು. ಇಷ್ಟು ದಿನ, ನಂಗಿಷ್ಟ ಆಗ್ತಿಲ್ಲ ಅನ್ನೋ ಕಾರಣಕ್ಕೆ ಹುಡುಗರನ್ನು ರಿಜೆಕ್ಟ್ ಮಾಡ್ತಿದ್ದೆ. ಆದರೆ, ಈಗ “ಯಾಕೆ ಇಷ್ಟ ಆಗ್ತಿಲ್ಲ?’ ಅನ್ನೋ ಪ್ರಶ್ನೆಗೆ ಸಕಾರಣ ಸಮೇತ ಉತ್ತರಿಸಬೇಕಿತ್ತು.
ಮೊದಲು ಬಂದ ಒಂದೆರಡು ಪ್ರಪೋಸಲ್‌ಗಳು ಚೆನ್ನಾಗೇ ಇದ್ದವು. ಆದರೆ, ನಂಗೆ ಪ್ರಪೋಸ್ ಮಾಡಿದ ಹುಡುಗರೇ ಇವರಿಗಿಂತ ಚೆನ್ನಾಗಿದ್ದರು. ಅವರಿಗೇ ಓಕೆ ಅಂದಿಲ್ಲ. ಕಾದು ನೋಡೋಣ ನನಗೆ ಇವನಿಗಿಂತ ಚೆನ್ನಾಗಿರೋನು ಸಿಕ್ಕೇ ಸಿಗ್ತಾನೆ ಅಂತ ಜಂಭದಲ್ಲಿ ನೋ ಎಂದೆ. ಮತ್ತೂಂದರೆಡು ಹುಡುಗರು ನನಗಿಂತ ಎರಡೇ ಇಂಚು ಎತ್ತರದವರು. ಆರಡಿಯ ಸುಂದರಾಂಗನಲ್ಲದಿದ್ದರೂ, ಮೂರಿಂಚಿನ ಹೀಲ್ಸ್ ಹಾಕಿ ಗಂಡನ ಭುಜ ಹಿಡಿದು ನಡೆಯಬೇಕು ಅಂತ ಆಸೆಪಡೋದರಲ್ಲಿ ತಪ್ಪೇನಿಲ್ಲವಲ್ಲ?
ಮ್ಯಾಟ್ರಿಮೊನಿಯಲ್ಲಿ ಅಕ್ಕ ಹುಡುಕಿದ ಸಂಬಂಧ ಮನೆಯವರೆಲ್ಲರಿಗೂ ಬಹಳ ಹಿಡಿಸಿತ್ತು. ಎತ್ತರ, ಬಣ್ಣ, ಸಂಬಳ, ಮನೆ, ಕಾರು…ಎಲ್ಲವೂ ಇತ್ತು. ಆದರೆ, ಯಾಕೋ ಆ ಹುಡುಗ ಮನಸ್ಸಿಗೆ ಇಷ್ಟವಾಗಲೇ ಇಲ್ಲ. ಮೊಸರಲ್ಲಿ ಕಲ್ಲು ಹುಡುಕಿದಂತೆ, “ಹುಡುಗನ ಹೆಸರು ಚೆನ್ನಾಗಿಲ್ಲ. ಮದುವೆಯಾದ್ಮೇಲೆ ಸರ್ ನೇಮ್ ಚೇಂಜ್ ಮಾಡಿಕೊಳ್ಳೋಕೆ ಆಗಲ್ಲ. ಅದಕ್ಕೇ ನಂಗಿವನು ಬೇಡ’ ಅಂದಿºಟ್ಟೆ!
ಹುಡುಗನ ಟೇಸ್ಟ್ ನಂಗೆ ಮ್ಯಾಚ್ ಆಗ್ತಾ ಇಲ್ಲ, ಕನ್ನಡಾನೇ ಸರಿ ಬರಲ್ಲ, ಸಂಗೀತ-ಸಾಹಿತ್ಯದಲ್ಲಿ ಆಸಕ್ತಿ ಇಲ್ಲ, ಮೀಟ್ ಮಾಡೋಕೆ ಹೋದಾಗ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲಿಲ್ಲ, ಹುಡುಗಂಗೆ ಒಬ್ಬಳು ಗರ್ಲ್ಫ್ರೆಂಡ್ ಇದ್ದಳಂತೆ, ಹುಡುಗನ ಮನೆಯಲ್ಲಿ ತುಂಬಾ ಸಂಪ್ರದಾಯ, ಅವರಮ್ಮ ಜೋರು, ಅಂಕಲ್ ಥರ ಇದಾನೆ…ಹೀಗೆ, ನೋ ಅನ್ನಲು ನಾನಾ ಕಾರಣಗಳು.
ಕಳೆದ ತಿಂಗಳು ಮಾವ ತೋರಿಸಿದ್ದ ಹುಡುಗನೇನೋ ಒಪ್ಪಿಗೆಯಾದ. ನಮ್ಮಿಬ್ಬರ ನಡುವೆ ಬಹಳಷ್ಟು ಕಾಮನ್ ಇಂಟ್ರೆಸ್ಟ್‌ಗಳಿದ್ದವು. ಆದರೆ, ಅವರಮ್ಮ ಇಷ್ಟ ಆಗ್ಲಿಲ್ಲ. ಆ ಹುಡುಗನೋ, ಎಲ್ಲದಕ್ಕೂ ಅಮ್ಮನ ಒಪ್ಪಿಗೆ ಕೇಳ್ಳೋ “ಮಮ್ಮಾಸ್ ಬಾಯ್’. ಮುಂದೆ ಆ ವಿಷಯವೇ ನಮ್ಮಿಬ್ಬರ ನಡುವಿನ ವಿರಸಕ್ಕೆ ಕಾರಣವಾದರೆ? “ತುತ್ತಾ ಮುತ್ತಾ?’ ಅನ್ನೋ ಗೊಂದಲ ಅವನಿಗೂ ಬೇಡ, ಸೊಸೆ ಬಂದ ಮೇಲೆ ಮಗ ಮಾತು ಕೇಳ್ತಿಲ್ಲ ಅನ್ನೋ ಅಪವಾದ ನನಗೂ ಬೇಡ. ಏನಂತೀರಾ?
ಹೌದು, ನನ್ನದೇ ವಯಸ್ಸಿನ ಗೆಳತಿಯರಿಗೆಲ್ಲಾ ಮದುವೆಯಾಗಿದೆ. ಒಂದಿಬ್ಬರಿಗೆ ಮಕ್ಕಳೂ ಆಗಿವೆ. ಹಾಗಂದ ಮಾತ್ರಕ್ಕೆ ನಾನು ಮುದುಕಿಯಾಗಿಲ್ಲ. ಅವಳು ಯಾರನ್ನೂ ಒಪ್ತಿಲ್ಲ, ಈಗಲ್ಲ ಅಂದ್ರೆ ಇನ್ನಾéವಾಗ ಮದುವೆಯಾಗ್ತಿàಯ?, ನಿನ್ನ ಮದುವೆಯಾಗೋಕೆ ಯುವರಾಜ ಕಾಯ್ತಾ ಇದಾನೆ ಅಂದ್ಕೊಡ್ಯಾ… ಹೀಗೆಲ್ಲಾ ಜನ ಮಾತಾಡ್ತಾರೆ ಅಂತ ಯಾರನ್ನೋ ಮದುವೆಯಾಗಲು ನಾನು ತಯಾರಿಲ್ಲ. ಮನಸ್ಸಿಗೆ ಹಿಡಿಸುವ ಸಂಗಾತಿ ಸಿಗುವವರೆಗೂ ಕಾಯೋಣ ಅಂತಿದೀನಿ. ನೋಡಿ ಮಾಡಿ ಖರೀದಿಸಿದ ಸೀರೆಯೇ, ಮನೆಗೆ ಬಂದ ಮೇಲೆ ಚೆನ್ನಾಗಿಲ್ಲ ಅನ್ನಿಸುತ್ತೆ. ಎಕ್ಸ್‌ಛೇಂಜ್ ಆಫರ್ ಇದ್ದರೂ ಮೋಸ ಹೋದ ಭಾವನೆ ಕಾಡುತ್ತೆ. ಹೀಗಿರುವಾಗ, ಬದುಕಿಡೀ ಜೊತೆಗಿರಬೇಕಾದ ಹುಡುಗನನ್ನು ಆರಿಸುವಾಗ ಎಚ್ಚರ ಬೇಡವೇ?
ಜಗತ್ತಿನ ಸಿಲ್ಲಿ ನಿರಾಕರಣೆಗಳುಈ ದೇಶದಲ್ಲಿ ನಾ ಒಬ್ಬಳೇ ಅಲ್ಲ. ನನ್ನಂಥ ಅನೇಕ ಸುರಸುಂದರಿಯರು ಸಿಲ್ಲಿ ಕಾರಣಗಳಿಗೆ ಹುಡುಗರಿಗೆ ನೋ ಅಂದಿದ್ದಾರೆ…
* ನಮ್ಮ ಚಿಕ್ಕಮ್ಮನಿಗೆ ಒಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆಯಿತು. ನಿಶ್ಚಿತಾರ್ಥದ ನಂತರ ನಡೆವ ಪೂಜೆಯಲ್ಲಿ, ಹುಡುಗ ಅಂಗಿ ತೆಗೆದು ಪೂಜೆಗೆ ಕೂರಬೇಕಿತ್ತು. ಅವನ ಬೆನ್ನಿನಲ್ಲಿ ಸಣ್ಣ ಕಪ್ಪು ಮಚ್ಚೆ ಇರುವುದನ್ನು ನೋಡಿ, ನಮ್ಮ ಚಿಕ್ಕಮ್ಮ ಆ ಮದುವೆ ಬೇಡ ಅಂದಿದ್ದರು- ಪಾರ್ಥ್ ವಾಲಿಖೀಂಡಿ * ಗುರ್ಗಾಂವ್‌ನ ಕರಿಷ್ಮಾ ವಾಲಿಯಾ ಎನ್ನುವವರು ಹುಡುಗನಿಗೆ ನಾಯಿ ಇಷ್ಟವಿಲ್ಲ ಎಂಬ ಕಾರಣಕ್ಕೆ ಹುಡುಗನಿಗೆ ನೋ ಅಂದಿದ್ದರು.
* ಒಳ್ಳೆಯ ಹುದ್ದೆಯಲ್ಲಿದ್ದ ನನ್ನ ಕಸಿನ್‌ಗೆ ಮದುವೆ ನಿಶ್ಚಯವಾಯ್ತು. ಎರಡು ತಿಂಗಳ ನಂತರ ಹುಡುಗಿ, ಕಸಿನ್ ಮನೆಗೆ ಬಂದಾಗ ಆತ ಕನ್ನಡಕ ಹಾಕಿಕೊಂಡು ಪೇಪರ್ ಓದುತ್ತಿರೋದನ್ನು ನೋಡಿ ಮದುವೆ ಮುರಿದುಕೊಂಡಳು. ವಾಸ್ತವದಲ್ಲಿ, ಅದು ಹುಡುಗನ ಅಪ್ಪನ ಚಷ್ಮಾ ಆಗಿತ್ತು. – ವಿಘ್ನೇಷ್ ಸ್ವರ್ಗಂ * ತನ್ನ ಅಣ್ಣನಿಗಿಂತ ಜಾಸ್ತಿ ಓದಿದ್ದಾನೆ ಎಂಬ ಕಾರಣ ನೀಡಿ ಹುಡುಗಿಯೊಬ್ಬಳು ಹುಡುಗನನ್ನು ರಿಜೆಕ್ಟ್ ಮಾಡಿದಳಂತೆ.
* ತನಗಿಂತ ಹುಡುಗ ಬಿಳಿ ಇದ್ದಾನೆ ಅಂತ ನನ್ನ ತಂಗಿ ಮದುವೆಗೆ ಒಪ್ಪಿರಲಿಲ್ಲ. ಅದು ಫೋಟೊಶಾಪ್ ಎಫೆಕ್ಟ್ ಅಂದರೂ ಅವಳು ಒಪ್ಪಲಿಲ್ಲ. ಜ್ಯೋತಿಷಿಯೊಬ್ಬರು, “ನಿನಗಿಂತ ಕಪ್ಪಗಿರುವ ಹುಡುಗನನ್ನೇ ನೀನು ಮದುವೆಯಾಗಬೇಕು’ ಅಂತ ಹೇಳಿದ್ದೇ ನಿರಾಕರಣೆಗೆ ಕಾರಣ. ಒಂದು ವರ್ಷದ ನಂತರ ಕೊನೆಗೂ ಅವಳು ಅದೇ ಹುಡುಗನನ್ನು ಮದುವೆಯಾದಳು- ವಿಘ್ನೇಶ್ ಮುತ್ತುಸ್ವಾಮಿ – ಪ್ರಿಯಾ