ಉಡುಪಿ: ಶೀರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ರಾಜಕೀಯ ಪ್ರವೇಶ ಮಾಡುವ ವಿಚಾರ ನನಗೆ ಗೊತ್ತಿರಲಿಲ್ಲ. ಅವರು ಸುದ್ದಿಗೋಷ್ಠಿ ನಡೆಸಿದ ನಂತರವೇ ವಾಟ್ಸಪ್ಪ್ ಮೂಲಕ ತಿಳಿಯಿತು. ಇದನ್ನು ದೇವರ ಸಾಕ್ಷಿಯಾಗಿ ಹೇಳುತ್ತಿದ್ದೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಉಡುಪಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರೀಯಿಸಿದ ಅವರು ಶೀರೂರು ಶ್ರೀಗಳ ರಾಜಕೀಯ ಪ್ರವೇಶದ ಪೂರ್ವ ಸೂಚನೆಯೇ ಇರಲಿಲ್ಲ, ಅವರು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿರುವುದಕ್ಕೆ ಅವರಿಗೆ ಧನ್ಯವಾದಗಳು ಅವರ ಬಗ್ಗೆ ಅಪಾರವಾದ ನಂಬಿಕೆಯಿದೆ ಎಂದರು.
ಜನರ ತೀರ್ಮಾನ : ಶೀರೂರು ಶ್ರೀಗಳ ಸ್ಪರ್ಧೆಯಿಂದ ನಿಮಗೆ ಲಾಭ ಅಥವಾ ನಷ್ಟವಿದೆಯೇ ಎಂದು ಪ್ರಶ್ನಿಸಿದಾಗ ಚುನಾವಣೆ ಎಂದರೆ ಅದು ಜನರ ತೀರ್ಮಾನ ಅದಕ್ಕೆ ತಲೆಬಾಗಬೇಕಾಗುತ್ತದೆ. ಉಡುಪಿಯ ಜನತೆ ಎಲ್ಲರಿಗಿಂತಲೂ ಬುದ್ದಿವಂತರು, ಸೋಲು ಗೆಲುವನ್ನು ಸಮಚಿತ್ತವಾಗಿ ಸ್ವೀಕರಿಸಿದವನು ನಾನು ಎಂದು ಪ್ರಮೋದ್ ಉತ್ತರಿಸಿದರು.
ದೇವರ ಪ್ರೇರಣೆ: ಶೀರೂರು ಶ್ರೀಗಳು ರಾಜಕೀಯ ಪ್ರವೇಶ ಮಾಡುವ ಘೋಷಣೆ ಮಾಡಿದ ಸುದ್ದಿ ತಿಳಿದ ಅನಂತರ ಅವರಿಗೆ ಫೋನ್ ಮಾಡಿದ್ದೆ ಆಗ ಅವರು ಹನುಮಾನ್ ದೇವರ ಪ್ರೇರಣೆಯಂತೆ ಮಾಡಿದ್ದೇನೆ ಎಂದಿದ್ದಾರೆ. ನಾನು ಅವರನ್ನು ಪ್ರೇರೇಪಿಸಿಲ್ಲ ಅಂತಹ ರಾಜಕಾರಣ ನಾನು ಮಾಡುವುದಿಲ್ಲ. ಕಳೆದ ಚುನಾವಣೆ ಸಂದರ್ಭ ಶೀರೂರು ಶ್ರೀಗಳು ನನ್ನ ಪರ ಪ್ರಚಾರ ಮಾಡಿದ್ದರು. ನನ್ನ ಪರವಾಗಿ ಇರುವವರು ನನ್ನ ವಿರುದ್ಧವೇ ಸ್ಪರ್ದಿಸಲು ಪ್ರೇರೇಪಿಸುವಷ್ಟು ಮೂರ್ಖ ನಾನಲ್ಲ. ಹೊಗಳಿ ಹೊಗಳಿ ಏನು ಹೇಳುತ್ತಾರೆಂದು ಹೇಳಲಾಗದು ಎಂದು ಪ್ರಮೋದ್ ತಿಳಿಸಿದರು .
ನನಗೆ ಆಶೀರ್ವಾದ, ಬಿಜೆಪಿಗೆ ಇನ್ನೊಬ್ಬರು ಆಕಾಂಕ್ಷಿ!: ಭಾನುವಾರ ಬೆಳಗ್ಗೆ ಕಲ್ಮಾಡಿ ಗರಡಿ ಕಾರ್ಯಕ್ರಮದಲ್ಲಿ ಶೀರೂರು ಸ್ವಾಮೀಜಿಯ ಜೊತೆ ನಾನು ಮತ್ತು ರಘುಪತಿ ಭಟ್ ಕೂಡ ಪಾಲ್ಗೊಂಡಿದ್ದೆವು. ಆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶೀರೂರು ಸ್ವಾಮೀಜಿಗಳು ಬಾಂಬ್ ಸಿಡಿಸಿದ್ದಾರೆ, ಆ ಬಾಂಬ್ ಯಾರ ಮೇಲೆ ಎಂದು ಗೊತ್ತಾಗಿಲ್ಲ. ಆದರೆ ಅವರ ಆಶೀರ್ವಾದ ನನ್ನ ಮೇಲೆ ಇದೆ ಎಂಬ ನಂಬಿಕೆ ಇದೆ ಎಂದೆ. ಇದೇ ಕಾರ್ಯಕ್ರಮದಲ್ಲಿ ರಘುಪತಿ ಭಟ್ ಮಾತನಾಡಿ ನಮ್ಮ (ಬಿಜೆಪಿ) ಆಕಾಂಕ್ಷಿಗಳ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಯಿತು ಎಂದು ಹೇಳಿದರು. ಆದರೆ ಶ್ರೀರೂರು ಶ್ರೀಗಳು ಅದಕ್ಕೆ ಪ್ರತಿಕ್ರೀಯಿಸಲಿಲ್ಲ ಎಂದು ಪ್ರಮೋದ್ ನಗುತ್ತಾ ಹೇಳಿದರು