ನವದೆಹಲಿ: ಕಳೆದ ಕೆಲವು ವರ್ಷಗಳಿಂದ ವಿರಾಟ್ ಕೊಹ್ಲಿ ಅವರ ಸಾರಥ್ಯದಲ್ಲಿ ಭಾರತ ತಂಡ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದು, ಸದ್ಯ ಆಸ್ಟ್ರೇಲಿಯ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಆಡಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಕೊಹ್ಲಿ ತಾನು ಯಾರಿಗೂ ಏನನ್ನೂ ಸಾಬೀತುಪಡಿಸುವ ಅಗತ್ಯ ಇಲ್ಲ ಎಂದಿದ್ದಾರೆ.
ಕಳೆದ ಬಾರಿಯ ಆಸ್ಟ್ರೇಲಿಯ ಪ್ರವಾಸದಿಂದ ಸಾಕಷ್ಟು ವಿಚಾರಗಳನ್ನು ಕಲಿತಿರುವುದರಿಂದ ಮುಂಬರುವ ಟೆಸ್ಟ್ ಸರಣಿಯಲ್ಲಿ ನೀಡುವ ಪ್ರದರ್ಶನದ ಮೇಲೆ ಹೆಚ್ಚಿನ ವಿಶ್ವಾಸವಿದೆ. ಆಸ್ಟ್ರೇಲಿಯ ಆಟಗಾರರೊಂದಿಗೆ ಯಾವುದೇ ವಿಚಾರದಲ್ಲಿ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
“ಕಳೆದ ಬಾರಿಯ ಪ್ರವಾಸದಿಂದ ನಾನು ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಯಾರಿಗೂ ಏನನ್ನೂ ಸಾಬೀತುಪಡಿಸಬೇಕಾದ ಅಗತ್ಯ ನನಗಿಲ್ಲ. ವೃತ್ತಿ ಜೀವನದ ಆರಂಭದಲ್ಲಿ ಈ ವಿಚಾರಗಳೆಲ್ಲ ಆಟಗಾರನ ಬೆಳವಣಿಗೆಗೆ ಮುಖ್ಯವಾದುದು ಎಂದು ಭಾವಿಸಿದ್ದೆ. ಆದರೆ ಇಂದು ತಂಡದ ಗೆಲುವಿಗೆ ಏನು ಮಾಡಬೇಕೋ ಅದರ ಮೇಲೆ ಮಾತ್ರ ಗಮನಹರಿಸುವುದು ಮುಖ್ಯ ಎಂಬುದರ ಅರಿವಾಗಿದೆ. ಹಾಗಾಗಿ ಎದುರಾಳಿ ತಂಡದೊಂದಿಗೆ ಯಾವುದೇ ವಿಚಾರದಲ್ಲಿ ಚಕಮಕಿಯಲ್ಲಿ ಅಗತ್ಯವಿಲ್ಲ. ನೀವು ಮುಂದುವರಿದಂತೆ ಇಂತಹ ವಿಚಾರಗಳು ಅರಿವು ಮೂಡಿಸುತ್ತ ಹೋಗುತ್ತವೆ’ ಎಂದಿದ್ದಾರೆ.
ವಿದೇಶಿ ಪ್ರವಾಸವೊಂದು ಪ್ರಕ್ರಿಯೆ: “ಪ್ರತಿ ಸರಣಿ, ಪ್ರತಿ ಪ್ರವಾಸ ಹಾಗೂ ಪ್ರತಿಯೊಂದು ಪಂದ್ಯದಿಂದ ಅನೇಕ ವಿಚಾರಗಳನ್ನು ಕಲಿಯುತ್ತೇವೆ. ತಂಡಕ್ಕೆ ತನ್ನಿಂದ ಏನು ಅಗತ್ಯವಿದೆಯೋ ಅದರ ಬಗ್ಗೆ ಮಾತ್ರ ಗಮನಹರಿಸುತ್ತೇನೆ. ಮೈದಾನದಲ್ಲಿ ನನ್ನ ಸಾಮರ್ಥ್ಯ ತಕ್ಕಂತೆ ಪ್ರದರ್ಶನ ನೀಡುತ್ತೇನೆ. ಇಂದು ವಿದೇಶಿ ಪ್ರವಾಸಗಳು ನನಗೆ ವಿಭಿನ್ನ ಎಂದು ಅನಿಸುತ್ತಿಲ್ಲ, ಬದಲಾಗಿ ಇದೊಂದು ಪ್ರಕ್ರಿಯೆ ಎಂದು ಅನಿಸುತ್ತಿದೆ’ ಎಂಬುದಾಗಿ ಕೊಹ್ಲಿ ಹೇಳಿದರು.