Advertisement

ಅಯ್ಯಪ್ಪ ಸ್ವಾಮಿ ಹಾಡಿನ ಧಾಟಿ ನಕಲಿನಲ್ಲಿ ನನ್ನ ಪಾತ್ರವಿಲ್ಲ

06:00 AM Mar 11, 2018 | Team Udayavani |

ಮಂಗಳೂರು: ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಯ ಧಾಟಿ ನಕಲು ಮಾಡಿ ಹಾಡು ರಚಿಸಿರುವ ಪ್ರಕರಣದಲ್ಲಿ  ನನ್ನ ಪಾತ್ರವಿಲ್ಲ. ಈ ಹಾಡು ನನ್ನ ಗಮನಕ್ಕೆ ಬಾರದೆ ಮಾಡಲಾಗಿದೆ. ಯಾರೋ ನನ್ನ ಅಭಿಮಾನಿಗಳು ಅಥವಾ ವಿರೋಧಿಗಳು ಇದನ್ನು ಮಾಡಿದ್ದು, ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಶಾಸಕ ಮೊದಿನ್‌ ಬಾವಾ ಹೇಳಿದ್ದಾರೆ.

Advertisement

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಾವಾ ಅವಧಿಯಲ್ಲಿ ಆಗಿರುವ ಅಭಿವೃದ್ಧಿಯನ್ನು ಪ್ರಚಾರ ಪಡಿಸಲು ಅಯ್ಯಪ್ಪ  ಭಕ್ತಿಗೀತೆಯ ಧಾಟಿ ನಕಲು ಮಾಡಿ ರಚನೆಯಾಗಿರುವ ಹಾಡು ಸೃಷ್ಟಿಸಿರುವ ವಿವಾದ ಕುರಿತಂತೆ ನಗರದ ತನ್ನ ಕಚೇರಿಯಲ್ಲಿ  ಶನಿವಾರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು ಈ ಹಾಡಿಗೂ ನನಗೂ ಸಂಬಂಧವಿಲ್ಲ. ಇದನ್ನು ಯಾರು ಮಾಡಿದ್ದಾರೆ ಎಂದೂ  ತಿಳಿದಿಲ್ಲ. ಅಯ್ಯಪ್ಪ ಸ್ವಾಮಿಯ ಹಾಡಿನ ಧಾಟಿ ನಕಲು ಮಾಡಿರುವ ವಿಚಾರ ಶುಕ್ರವಾರ ಪಾದಯಾತ್ರೆ ಸಂದರ್ಭದಲ್ಲಿ ನನಗೆ ತಿಳಿದು ಬಂತು. ದೇವರ ಹಾಡುಗಳನ್ನು  ನಕಲು ಮಾಡಿ ಬೇರೆ ಹಾಡುಗಳನ್ನು ರಚಿಸುವುದಕ್ಕೆ ನಾನೂ ವಿರೋಧಿಯಾಗಿದ್ದೇನೆ. ಈ ಹಾಡಿನ ಬಗ್ಗೆ ವಿಷಾದವಿದೆ. ಈ ಬಗ್ಗೆ  ತನಿಖೆ ನಡೆಸುವಂತೆ ಆಗ್ರಹಿಸುತ್ತೇನೆ ಎಂದರು.

ಶ್ರೀ ಅಯ್ಯಪ್ಪ  ದೇವರ ಹಾಡನ್ನು ನಾನು ವಿರೂಪಗೊಳಿಸಿದ್ದೇನೆ  ಎಂಬ ಆರೋಪದಿಂದ  ತುಂಬಾ ನೋವಾ ಗಿದೆ. ಅಯ್ಯಪ್ಪ ಸ್ವಾಮಿಯನ್ನು  ಭಕ್ತಿಯಿಂದ ಕಾಣುತ್ತೇನೆ. ನನ್ನ ಕ್ಷೇತ್ರದಲ್ಲಿ  ಅಯ್ಯಪ್ಪ ಮಂದಿರಗಳಿಗೆ ಸರಕಾರದಿಂದ ಅನುದಾನಗಳನ್ನು ದೊರಕಿಸಿಕೊಟ್ಟಿದ್ದೇನೆ. ನಾನು ಎಲ್ಲ ಧರ್ಮಗಳನ್ನು ಗೌರವದಿಂದ ಕಾಣುತ್ತಾ ಬಂದಿದ್ದೇನೆ. ದೇವಸ್ಥಾನ, ಬ್ರಹ್ಮಶ್ರೀ ನಾರಾಯಣ ಗುರುಮಂದಿರಗಳಿಗೆ ಸರಕಾರದಿಂದ ನೆರವು ದೊರಕಿಸಿಕೊಟ್ಟಿದೇನೆ ಹಾಗೂ ನನ್ನ ವೈಯುಕ್ತಿಕ ನೆಲೆಯಲ್ಲೂ ನೆರವು ನೀಡಿದ್ದೇನೆ. ಯಾರೋ ಮಾಡಿದ ತಪ್ಪನ್ನು  ನನ್ನ  ಮೇಲೆ ಹೊರಿಸುವುದು ಸರಿಯಲ್ಲ. ಈ ಹಾಡನ್ನು ಯಾರೂ  ವೈರಲ್‌ ಮಾಡಬಾರದು ಎಂಬುದು ನನ್ನ ಮನವಿಯಾಗಿದೆ ಎಂದರು.

ಮಾ.15ರಂದು ನನ್ನ  ಹುಟ್ಟು ಹಬ್ಬದ ಸಂದರ್ಭದಲ್ಲಿ  ಶಾಲಾ ಮಕ್ಕಳಿಗೆ ಕಳೆದ ವರ್ಷದಂತೆ  ಈ ಬಾರಿಯೂ ಪುಸ್ತಕಗಳನ್ನು  ವಿತರಿಸಲಾಗುವುದು ಎಂದವರು   ತಿಳಿಸಿದರು.

ಬಾವಾ ವಿರುದ್ಧ ಪುತ್ತೂರಿನಲ್ಲಿ ದೂರು
ಪುತ್ತೂರು:
ಅಯ್ಯಪ್ಪ ಭಕ್ತಿಗೀತೆ ಧಾಟಿಯಲ್ಲಿ ಪ್ರಚಾರ ಕೈಗೊಂಡ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊದಿನ್‌ ಬಾವಾ  ವಿರುದ್ಧ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ಶಾಸಕ ಬಾವಾ ಅವರು ತಮ್ಮ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿಗಳನ್ನು ಬಣ್ಣಿಸಲು, ಕೋಟ್ಯಂತರ ಭಕ್ತರು ಆರಾಧಿಸುವ ಶಬರಿಮಲೆ ಅಯ್ಯಪ್ಪ ಸ್ವಾಮಿಯನ್ನು ಸ್ತುತಿಸುವ ಹಾಡಿನ ಧಾಟಿಯನ್ನು ಬಳಸಿಕೊಂಡು ತುಳು ಭಾಷೆಯಲ್ಲಿ ತನ್ನ ಹಾಡು ರಚಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ತೀವ್ರ ಘಾಸಿ ಮಾಡಿದ್ದಾರೆ.

ಪ್ರಚಾರದ ನೆಪದಲ್ಲಿ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಚುನಾವಣೆ ಹತ್ತಿರವಾಗುವಾಗ ಉದ್ದೇಶ ಪೂರ್ವಕವಾಗಿ ಕೋಮು ಸೌಹಾರ್ದವನ್ನು ಕದಡುವ ಇಂತಹ ವಿಷಯಗಳಿಗೆ ಸಂಬಂಧಿಸಿ ಪೊಲೀಸ್‌ ಇಲಾಖೆ  ಶಾಸಕರ ಮೇಲೆ ಮತ್ತು ಹಾಡಿಗೆ ಸಂಬಂಧಪಟ್ಟ ಇತರರ ಮೇಲೆ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಠಾಣಾಧಿಕಾರಿಗೆ ನೀಡಿರುವ ದೂರಿನಲ್ಲಿ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next