Advertisement

ಮೊಮ್ಮಗನಿಗಾಗಿ ನಾನು ಕಣ್ಣೀರು ಹಾಕಲಿಲ್ಲ: ದೇವೇಗೌಡ

07:26 AM Mar 15, 2019 | |

ಮಂಡ್ಯ: ನಿನ್ನೆ ಹಾಸನದಲ್ಲಿ ಒಬ್ಬ ಮೊಮ್ಮಗನಿಗಾಗಿ ಕಣ್ಣೀರು ಹಾಕಿದ್ದೆ, ಇವತ್ತು ಇನ್ನೊಬ್ಬ ಮೊಮ್ಮಗನಿಗಾಗಿ ಕಣ್ಣೀರು ಹಾಕಲಿಲ್ಲ ಎಂದು ವ್ಯಂಗ್ಯ ಮಾಡಬೇಡಿ. ಇಂದು ಕಣ್ಣೀರು ಹಾಕುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ತಿಳಿಸಿದರು. ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. 

Advertisement

ನನ್ನ ಮೊಮ್ಮಗನ ರಾಜಕೀಯ ಭವಿಷ್ಯಕ್ಕಾಗಿ ನಾನು ಕಣ್ಣೀರು ಹಾಕಲಿಲ್ಲ. ಹಾಸನ ಜಿಲ್ಲೆ ಹರದನಹಳ್ಳಿ ಪಕ್ಕದ ಕೂಡಲ ಹಿಪ್ಪೆ ಗ್ರಾಮಕ್ಕೆ ಅರವತ್ತು ವರ್ಷದ ಬಳಿಕ ಹೋಗಿದ್ದೆ. ನಾನು ಹೋದಾಗ ಜನರು ಅತ್ಯಂತ ಪ್ರೀತಿ-ಅಭಿಮಾನ ತೋರಿಸಿದ್ದರು. ಹಿರಿಯರ ಬಗ್ಗೆ ವಿಚಾರಿಸಿದಾಗ ನನ್ನ ಸ್ನೇಹಿತರೂ ಸೇರಿದಂತೆ ಹಲವರು ಮೃತಪಟ್ಟಿದ್ದರು. ಅದರ ನೋವನ್ನು ತಡೆಯಲಾಗಲಿಲ್ಲ. ನನ್ನ ಸ್ನೇಹಿತರನ್ನು ನೆನೆದು ಉದ್ವೇಗದಿಂದ ಕಣ್ಣೀರು ಹಾಕಿದೆ. ಆದರೆ, ಇಂದು ಮತ್ತೂಬ್ಬ ಮೊಮ್ಮಗನ ರಾಜಕೀಯ ಭವಿಷ್ಯಕ್ಕಾಗಿ ಕಣ್ಣೀರು ಹಾಕುವುದಿಲ್ಲ ಎಂದು ತಿಳಿಸಿದರು.

ಮತ್ತೂಬ್ಬ ಮೊಮ್ಮಗ ನಿಖಿಲ್‌ ತನ್ನ ತಂದೆ ಆಸ್ಪತ್ರೆಯಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾಗ ಇಷ್ಟೊಂದು ಕಷ್ಟಪಟ್ಟು ಜನರ ಸೇವೆ ಮಾಡುತ್ತಿದ್ದೀರಿ. ನಾನೂ ನಿಮಗೆ ನೆರವಾಗುತ್ತೇನೆ. ನಿಮ್ಮ ರಾಜಕೀಯ ಹಾದಿಯಲ್ಲಿ ನೆರವಾಗಿ ನೋವಿಗೆ ಸ್ಪಂದಿಸುತ್ತೇನೆ ಎಂದು ತಂದೆಯೊಡನೆ ಹೇಳಿದ ಮಾತು ನನ್ನ ಹೃದಯಕ್ಕೆ ನಾಟಿತು. ನನ್ನ ಮೊಮ್ಮಕ್ಕಳನ್ನು ರಾಜಕೀಯಕ್ಕೆ ಕರೆತಂದು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ. ಆತ ನೋವಿನಲ್ಲಿರುವ ಜನರಿಗೆ ದನಿಯಾಗುವನೆಂಬ ನಂಬಿಕೆ ನನ್ನದು ಎಂದು ತಿಳಿಸಿದರು.

ಮೊಮ್ಮಕ್ಕಳ ವ್ಯಾಮೋಹವಿಲ್ಲ: ಮೊಮ್ಮಕ್ಕಳನ್ನು ರಾಜಕೀಯಕ್ಕೆ ತಂದಿರುವುದು ವ್ಯಾಮೋಹದಿಂದ ಅಲ್ಲ. ಅದು ಕುಟುಂಬ ರಾಜಕಾರಣವೂ ಅಲ್ಲ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ಅವರನ್ನು ರಾಜಕೀಯಕ್ಕೆ ಕರೆತಂದಿದ್ದೇವೆ. ಅವರಿಬ್ಬರ ಬಗ್ಗೆ ನನಗೆ ನಂಬಿಕೆ ಇದೆ. ಕುಟುಂಬ ಬೆಳೆಸಬೇಕೆಂಬ ಸ್ವಾರ್ಥ ನನ್ನಲ್ಲಿ ಇಲ್ಲ. ವಂಶ ಪಾರಂಪರ್ಯ ರಾಜಕಾರಣವೂ ಅಲ್ಲ. ಯಾರ ಬಗ್ಗೆಯೂ ನಾನು ನಿಂದಿಸುವುದಿಲ್ಲ ಎಂದು ನುಡಿದರು.

ದೈವದ ಆಟವೇ ಬೇರೆ: ನಾವು ದೇವರ ಮೇಲೆ ನಂಬಿಕೆ ಇಟ್ಟವರು. 37 ಸ್ಥಾನ ಗೆದ್ದು ಮುಖ್ಯಮಂತ್ರಿಯಾಗಿ ಪದವಿ ಅಲಂಕರಿಸುತ್ತಾರೆ ಎಂದರೆ ಅದು ದೈವೇಚ್ಛೆಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದ ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ಮುಕ್ತ ಭಾರತ ಮಾಡ್ತೀನಿ ಅಂತ ಹೇಳಿದ್ದರು. ಇದು ಯಾರ ಕೈಯ್ಯಲ್ಲೂ ಇಲ್ಲ. ಯಾರನ್ನೂ ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ದೈವದ ಆಟವೇ ಬೇರೆಯಾಗಿರುತ್ತದೆ. ರಾಜಕೀಯದಲ್ಲಿ ದೇವೇಗೌಡರ ಅಂತ್ಯವಾಯಿತು ಅನ್ನೋರು ಬಹಳಷ್ಟು ಜನ ಇದ್ದಾರೆ. ಈ ವಿಚಾರವನ್ನು ನಾನು ನಾಡಿನ ಜನರಿಗೆ ಬಿಡುತ್ತಿದ್ದೇನೆ. ನಾಳೆ ಏನಾಗುತ್ತದೆ ಅನ್ನೋದು ನನಗೆ ತಿಳಿದಿಲ್ಲ. ದೈವೇಚ್ಛೆಯಂತೆ ಎಲ್ಲವೂ ನಡೆಯಲಿದೆ ಎಂದು ತಿಳಿಸಿದರು.

Advertisement

ಮೋದಿಗೆ ರೈತರ ನೆನಪು: ಪ್ರಧಾನಿ ಮೋದಿ ರೈತರಿಗೆ 6 ಸಾವಿರ ರೂ. ವಾರ್ಷಿಕ ಸಹಾಯ ಧನ ನೀಡುವುದಾಗಿ ತಿಳಿಸಿದ್ದಾರೆ. ಮಾಸಿಕ 500 ರೂ. ಆಗಲಿದೆ. ಐದು ವರ್ಷ ಆಳಿದ ನರೇಂದ್ರ ಮೋದಿ ಅವರಿಗೆ ಐದನೇ ವರ್ಷದ ಅಂತ್ಯ ಬಂದಾಗ ರೈತರ ಬಗ್ಗೆ ಅನುಕಂಪ ಮೂಡಿತೇ. ಕೇವಲ ತಿಂಗಳಿಗೆ 500 ರೂ. ಕೊಡುತ್ತದೆ ಎಂದಾದರೆ ಅವರ ಆಡಳಿತದ ಪರಿ ಹೇಗಿದೆ ಎನ್ನುವುದನ್ನು ಅಥೆìçಸಿಕೊಳ್ಳಬೇಕು ಎಂದು ಹೇಳಿದರು.

ದೇಶ ಉಳಿಯಬೇಕು ಎಂದರೆ ಕಾಂಗ್ರೆಸ್‌-ಜೆಡಿಎಸ್‌ ಒಂದು ತಾಯಿಯ ಮಕ್ಕಳಂತೆ ಕೆಲಸ ಮಾಡಬೇಕು. ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸಬೇಕು. ಅವರು ಕರೆದ ಕಡೆಗೆ ನಾನು ಹೋಗಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ. ಅವರೂ ಮೈತ್ರಿಧರ್ಮ ಪಾಲಿಸಬೇಕು. 17 ಸ್ಥಾನ ಪಡೆದಿರುವ ಬಿಜೆಪಿಯನ್ನು 4ರಿಂದ 5 ಸ್ಥಾನಕ್ಕೆ ಇಳಿಸಬೇಕು ಎಂದು ಪಣತೊಟ್ಟು ಕೆಲಸ ಮಾಡುವಂತೆ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next