ಬೆಂಗಳೂರು: “ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಬಳಿಕ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಇದ್ದ ಅಧಿಕಾರವನ್ನು ಕಳೆದುಕೊಂಡು “ಹಲ್ಲು ಕಿತ್ತ ಹಾವು’, “ಭ್ರಷ್ಟಾಚಾರದ ವಿರುದ್ಧ ಕೀರಲು ಧ್ವನಿಗಷ್ಟೇ ಸೀಮಿತ’, “ದೂರು ಸ್ವೀಕರಿಸುವ ಟಪಾಲು’ ಎಂಬಿತ್ಯಾದಿ ಅಪಖ್ಯಾತಿಗಳನ್ನು ಹೊತ್ತಿರುವ ಕರ್ನಾಟಕ ಲೋಕಾ ಯುಕ್ತ ಸಂಸ್ಥೆ ಶೀಘ್ರದಲ್ಲೇ “ನಾವಿಕನಿಲ್ಲದ ನಾವೆ’ ಆಗಲಿದೆ.
ಹಾಲಿ ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಅವರ ಅವಧಿ ಜ.27ಕ್ಕೆ ಕೊನೆಗೊಳ್ಳಲಿದ್ದು, ಬಳಿಕ ಹುದ್ದೆ ತೆರವಾಗಲಿದೆ. ಆದರೆ ಸರಕಾರ ಹೊಸ ಲೋಕಾಯುಕ್ತರ ನೇಮಕಕ್ಕೆ ಈವರೆಗೆ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಸರಕಾರದ ಈಗಿನ ನಡೆಯನ್ನು ಗಮನಿಸಿದರೆ ಮುಂದೆ ಎಷ್ಟು, ದಿನ, ಎಷ್ಟು ತಿಂಗಳು ಹೀಗೆ ಇರುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿ ಇಲ್ಲಿಯವರೆಗೆ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಸ್ವತಃ ಕಾನೂನು ಇಲಾಖೆ ಹೇಳುತ್ತಿದೆ.
ಕಾಯ್ದೆ ಪ್ರಕಾರ ಒಬ್ಬರು ಲೋಕಾಯುಕ್ತರು, ಇಬ್ಬರು ಉಪ ಲೋಕಾಯುಕ್ತರು ಇರಬೇಕು. ಲೋಕಾಯುಕ್ತರ ಹುದ್ದೆ ಒಂದೆರಡು ದಿನಗಳಲ್ಲಿ ಖಾಲಿಯಾಗುತ್ತಿದೆ. ಇದೇ ವೇಳೆ ಒಂದು ಉಪ ಲೋಕಾಯುಕ್ತ ಹುದ್ದೆಯೂ ಖಾಲಿಯಿದ್ದು, ಸದ್ಯ ಒಬ್ಬರು ಮಾತ್ರ ಉಪ ಲೋಕಾಯುಕ್ತರು ಇದ್ದಾರೆ.
ಲೋಕಾಯುಕ್ತರ ನೇಮಕಕ್ಕೆ ಶಾಸನಬದ್ಧ ಪ್ರಕ್ರಿಯೆ ಇದೆ. ಮುಖ್ಯಮಂತ್ರಿಯವರು ಹೈಕೋರ್ಟ್‌ನ ಮುಖ್ಯ ನ್ಯಾಯ ಮೂರ್ತಿಗಳು, ಸ್ಪೀಕರ್, ಸಭಾಪತಿ, ವಿಪಕ್ಷ ನಾಯಕರೊಂದಿಗೆ ಸಮಾಲೋಚಿಸಿ ಅವರ ಸಹಮತದೊಂದಿಗೆ ಲೋಕಾಯುಕ್ತರ ನೇಮಕ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಇದಕ್ಕಾಗಿ ಮೊದಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಲೋಕಾಯುಕ್ತ ಹುದ್ದೆಗೆ ಅರ್ಹರಿರುವ ಮತ್ತು ಒಪ್ಪಿಗೆ ಸೂಚಿಸುವ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಅಥವಾ 10 ವರ್ಷ ಕಡಿಮೆ ಇಲ್ಲದಂತೆ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದವರ ಪಟ್ಟಿ ತರಿಸಿಕೊಂಡು, ಅದರ ಆಧಾರದಲ್ಲಿ ಬಹುಮತದ ಅಥವಾ ಸಹಮತದ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯಪಾಲರಿಗೆ ಕಳಿಸಿಕೊಡಬೇಕು. ಇದಕ್ಕಾಗಿ ಮುಖ್ಯಮಂತ್ರಿ, ಮುಖ್ಯ ನ್ಯಾಯಮೂರ್ತಿ, ಸಭಾಪತಿ, ಸ್ಪೀಕರ್, ಉಭಯ ಸದನಗಳ ವಿಪಕ್ಷ ನಾಯಕರ ಸಭೆ ನಡೆಯಬೇಕು, ಪತ್ರ ವ್ಯವಹಾರ ನಡೆಯಬೇಕು. ಇದಕ್ಕೆಲ್ಲ ತಿಂಗಳುಗಟ್ಟಲೆ ಹಿಡಿಯುತ್ತದೆ. ವಿಪರ್ಯಾಸವೆಂದರೆ, ನೇಮಕಾತಿ ಪ್ರಕ್ರಿಯೆ ಪ್ರಾಥಮಿಕ ಹಂತದ ಬೆಳವಣಿಗೆಗಳೂ ಈವರೆಗೆ ನಡೆದಿಲ್ಲ.
ಹೊಸ ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿ ಸರಕಾರದ ಮಟ್ಟದಲ್ಲಿ ಈವರೆಗೆ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ. ಜ.27ಕ್ಕೆ ಸಚಿವ ಸಂಪುಟ ಸಭೆ ಇದ್ದು, ಅದರಲ್ಲಿ ಈ ವಿಷಯ ವೇನಾದರೂ ಚರ್ಚೆಗೆ ಬರುತ್ತದೋ ನೋಡಬೇಕು.
– ಜೆ.ಸಿ ಮಾಧುಸ್ವಾಮಿ,
ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ.
ರಾಜ್ಯದಲ್ಲಿ ಒಂದು ಬಲಿಷ್ಠ ಹಾಗೂ ನಿಷ್ಪಕ್ಷ ಪಾತ ಲೋಕಾ ಯುಕ್ತ ಸಂಸ್ಥೆ ಇರುವುದು ಯಾವುದೇ ರಾಜಕೀಯ ಪಕ್ಷಗಳಿಗೆ ಬೇಕಾ ಗಿಲ್ಲ. ಹಾಗಾಗಿ ಈವರೆಗೆ ಪ್ರಕ್ರಿಯೆಯೇ ಆರಂಭ ವಾಗಿಲ್ಲ ಎಂದು ಸ್ವತಃ ಸರಕಾರವೇ ಹೇಳು ತ್ತಿರುವುದು ನನಗೆ ಆಶ್ಚರ್ಯ ಎನಿಸುತ್ತಿಲ್ಲ.
– ನ್ಯಾ| ಎನ್. ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತರು
- ರಫೀಕ್ ಅಹ್ಮದ್