Advertisement
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಿಂದೆ ಸಿಎಂ ಆಗಿದ್ದಾಗ ಬಂದ ಒಳ್ಳೆ ಹೆಸರು, ಸಿದ್ದರಾಮಯ್ಯ ಮತ್ತು ಅವರ ತಂಡದಿಂದ ಹಾಳಾಗಿದೆ. ಪೂರ್ವಯೋಜನೆ ಮಾಡಿ ನನ್ನ ಹೆಸರು ಹಾಳು ಮಾಡಿದರು. ಕಾಂಗ್ರೆಸ್‌ನಿಂದಲೇ ಎಲ್ಲವೂ ಸರ್ವನಾಶವಾಯಿತು. ಭಾವನಾತ್ಮಕ ಟ್ರ್ಯಾಪ್‌ಗೆ ನಾವು ಬಲಿಯಾದೆವು. ಎಚ್.ಡಿ.ದೇವೇಗೌಡರ ಮಾತು ಕೇಳಿ ಕಾಂಗ್ರೆಸ್ ಜೊತೆ ಕೈ ಜೋಡಿಸಿದೆ. ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಕಾರಣ ನಮ್ಮ ಶಕ್ತಿ ಕುಂದಿತು. ಸಿದ್ದರಾಮಯ್ಯ ಅವರುಅಪಪ್ರಚಾರ ಮಾಡಿದರು. ಬಿಜೆಪಿ ಜೊತೆ ಚೆನ್ನಾಗಿದ್ದಿದ್ದರೆ ಈಗ ನಾನೇ ಮುಖ್ಯಮಂತ್ರಿ ಆಗಿರುತ್ತಿದ್ದೆ. ಕಾಂಗ್ರೆಸ್ ಸಹವಾಸದಿಂದ ನಮ್ಮ ಶಕ್ತಿಯೂ ಕುಂದಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
Related Articles
Advertisement
ದೇಶದಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗುತ್ತದೆ. ಇದಕ್ಕೆ ವೇದಿಕೆ ಅವರೇ ಸಿದ್ಧ ಮಾಡಿಕೊಂಡಿದ್ದಾರೆ. ದೇಶದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿ ಬಗ್ಗೆ ಸಭೆಯಾಗುತ್ತಿದೆ. ಕೆಸಿಆರ್ ಈ ಬಗ್ಗೆ ನನಗೆ ಕರೆ ಮಾಡಿದ್ದರು. ಬಿಜೆಪಿ ವಿರುದ್ಧವಾಗಿ ಪ್ರಾದೇಶಿಕ ಪಕ್ಷಗಳು ನಿಲ್ಲುತ್ತವೆ ಎಂಬ ವಿಶ್ವಾಸ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಸರ್ಕಾರ ಬಂದು 15 ತಿಂಗಳಾಗಿದ್ದು, ಸಾಕಷ್ಟು ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ನೆರೆ ಹಾವಳಿ, ಕೊರೊನಾ ಸಮಸ್ಯೆಯಾಗಿದೆ. ಗ್ರಾಪಂ ಚುನಾವಣೆ ಹಿನ್ನೆಲೆ ಗ್ರಾಮ ಸ್ವರಾಜ್ಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಮೂರರಿಂದ ನಾಲ್ಕು ಮಂತ್ರಿಗಳಿಂದ ಚುನಾವಣಾ ತಯಾರಿಯಾಗುತ್ತಿದೆ. ಆದರೆ, ಜನರ ಸಮಸ್ಯೆಗೆ ಮಂತ್ರಿಗಳು ಸ್ಪಂದಿಸುತ್ತಿಲ್ಲ. ಯಾವ ಇಲಾಖೆಗೆ ಯಾವ ಮಂತ್ರಿಗಳಿದ್ದಾರೆ ನಮಗೇ ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದ ಸರ್ಕಾರದ ಬಗ್ಗೆ ಮೃದು ಧೋರಣೆ ಇಲ್ಲ. ಅದು ಪಕ್ಷದ ಸರ್ಕಾರ ಅಲ್ಲ ರಾಜ್ಯದ ಸರ್ಕಾರ. ಒಳ್ಳೇ ಕೆಲಸಕ್ಕೆ ಸದಾ ಸಹಕಾರ ನೀಡುತ್ತೇನೆ. ಆದರೆ, ಈಗ ಸಾಗುತ್ತಿರುವ ದಾರಿ ಸರಿಯಲ್ಲ. ಕೊರೊನಾ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಬೇಕಾಗಿರಲಿಲ್ಲ ಎಂದು ವಿರೋಧಿಸಿದರಲ್ಲದೇ, ಕೇಂದ್ರ ಸರ್ಕಾರ ನಿಮ್ಮನ್ನು ಲೆಕ್ಕಕ್ಕೆ ಇಟ್ಟಿಲ್ಲ. ಬಿಜೆಪಿ ಸಿಎಂ ಇದ್ದಾರೆ ಅನ್ನೋದನ್ನು ಕೇಂದ್ರ ಮರೆತುಬಿಟ್ಟಿದೆ ಎಂದು ಯಡಿಯೂರಪ್ಪ ಅವರ ವಿರುದ್ಧ ವ್ಯಂಗ್ಯವಾಡಿದರು.
ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಕುರಿತು ಮಾತನಾಡಿ, ಬೆಳಗಾವಿಯಲ್ಲಿ ಸಾಕಷ್ಟು ಹಾನಿಯಾಗಿದೆ. ಕಳೆದ ಬಾರಿ ನೀಡಿದ ಭರವಸೆ ಈಡೇರಿಸಿಲ್ಲ. ಯಾರು ಸೌಜನ್ಯಕ್ಕಾದರೂ ಹಳ್ಳಿ ಭೇಟಿ ಮಾಡುತ್ತಿಲ್ಲ. ಸರ್ಕಾರ ಸಲಹೆ, ಟೀಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಜನರಿಗೆ ದ್ರೋಹ ಬಗೆಯುವ ಕೆಲಸ ಮಾಡಬೇಡಿ. ಉಪಚುನಾವಣೆ ಗೆಲುವಿನಿಂದ ಬೀಗಬೇಡಿ. ಇದು ಯಾವುದು ಯಾರಿಗೂ ಶಾಶ್ವತವಲ್ಲ ಎಂದು ಕುಮಾರಸ್ವಾಮಿ ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆ ಉದಾಹರಣೆ ನೀಡಿದರು.
ರಾಜ್ಯದ ಚಿತ್ರಣವನ್ನು ಬದಲಾಯಿಸುವ ಭರವಸೆ ನೀಡಿದ್ದ ಸಿಎಂ ಯಡಿಯೂರಪ್ಪ ಅವರೇ ಜನರ ತುಟಿಗೆ ತುಪ್ಪ ಸವರುವ ಕೆಲಸ ಮಾಡಬೇಡಿ. ಸಮಾಜದ ಮೂಗಿಗೆ ತುಪ್ಪ ಸವರಿ ಶಾಶ್ವತವಾಗಿ ಹಿಡಿದಿಡಲು ಸಾಧ್ಯವಿಲ್ಲ. ಸತ್ಯಾಂಶ ಹೊರಗೆ ಬಂದೇ ಬರುತ್ತದೆ. ಸಂಕುಚಿತ ಕೀಳುಮಟ್ಟದ ರಾಜಕೀಯವನ್ನು ಬಿಡಿ. ಇನ್ನು ಮುಂದೆಯಾದರೂ ಜನರಿಗಾಗಿ ಕೆಲಸ ಮಾಡಿ ಎಂದು ಹರಿಹಾಯ್ದರು.