ರಾಜಮೌಳಿ ನಿರ್ದೇಶನದ “ಆರ್‌ಆರ್‌ಆರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಚಿತ್ರ ಜನವರಿ 7 ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ಪ್ರತಿ ರಾಜ್ಯಗಳಿಗೆ ಹೋಗಿ ಪ್ರಚಾರ ಮಾಡುತ್ತಿದೆ. ಶುಕ್ರವಾರ “ಆರ್‌ಆರ್ ಆರ್’ ತಂಡ ಪ್ರಚಾರದ ಸಲುವಾಗಿ ಬೆಂಗಳೂರಿಗೆ ಆಗಮಿಸಿತ್ತು. ನಿರ್ದೇಶಕ ರಾಜ್‌ಮೌಳಿ, ನಟರಾದ ಜೂ.ಎನ್‌ಟಿಆರ್, ರಾಮ್‌ಚರಣ್ ತೇಜಾ, ನಟಿ ಆಲಿಯಾ ಭಟ್ ಸಿನಿಮಾ ಕುರಿತಾಗಿ ತಮ್ಮ ಅನಿಸಿಕೆ ಹಂಚಿಕೊಂಡರು.
ನಿರ್ದೇಶಕ ರಾಜಮೌಳಿ ಈ ಬಾರಿ “ಆರ್‌ಆರ್‌ಆರ್’ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಲು ಕಾರಣ, ಕಳೆದ ಬಾರಿ “ಬಾಹುಬಲಿ’ ಸಮಯದಲ್ಲಿ ಎದುರಾದ ಪ್ರಶ್ನೆಯಂತೆ. “ಬಾಹುಬಲಿ’ ಸಿನಿಮಾವನ್ನು ಕನ್ನಡ ಬಿಟ್ಟು ಬೇರೆ ಎಲ್ಲಾ ಭಾಷೆಗಳಿಗೆ ಡಬ್ ಮಾಡಿಯೇ ರಿಲೀಸ್ ಮಾಡಿದ್ದೆ. ಆಗ ಅನೇಕರು ಕನ್ನಡವನ್ನು ಯಾಕೆ ಕಡೆಗಣಿಸುತ್ತೀರಿ. ಕನ್ನಡಿಗರು ಅಂದ್ರೆ ಅಷ್ಟೊಂದು ತಾತ್ಸಾರನಾ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಈ ಬಾರಿ ಕನ್ನಡದಲ್ಲೇ ಡಬ್ ಮಾಡಿ ರಿಲೀಸ್ ಮಾಡುತ್ತಿದ್ದೇನೆ. ಯಾವುದೇ ಅಪಭ್ರಂಶವಾಗದಂತೆ ಎಚ್ಚರ ವಹಿಸಿ ಡಬ್ ಮಾಡಿದ್ದೇನೆ’ ಎಂದರು.
ಇನ್ನು, ಸಿನಿಮಾದ ಬಗ್ಗೆ ಮಾತನಾಡಿದ ರಾಜ್‌ಮೌಳಿ, “ನಾನು ಭಾವನೆಗಳನ್ನು ನಂಬಿ ಸಿನಿಮಾ ಮಾಡುವವನು. ನನಗೆ ಎಮೋಶನ್ ಇಲ್ಲದೇ ಸಿನಿಮಾ ಮಾಡಲು ಬರುವುದಿಲ್ಲ. ಚಿತ್ರದ ಪ್ರತಿ ಸನ್ನಿವೇಶ, ಹಾಡಿನಲ್ಲೂ ಎಮೋಶನ್ ಇದೆ. ಸ್ಟಾರ್‌ಕಾಸ್ಟ್, ಬಜೆಟ್ ಜನರನ್ನು ಚಿತ್ರಮಂದಿರಕ್ಕೆ ಕರೆತರುವವರೆಗೆ ಮಾತ್ರ ಸಹಾಯವಾಗುತ್ತದೆ. ಆ ನಂತರ ಸಿನಿಮಾದ ಓಡೋದು ಅದರಲ್ಲಿನ ಸತ್ವದಿಂದ’ ಎಂದರು ರಾಜ್‌ಮೌಳಿ.
ಇದನ್ನೂ ಓದಿ:ದೃಶ್ಯ-2 ಚಿತ್ರ ವಿಮರ್ಶೆ: ಕುತೂಹಲದ ಹಾದಿಯಲ್ಲಿ ಪೊನ್ನಪ್ಪ ಕೇಸ್!
ಇನ್ನು, ಜೂ.ಎನ್‌ಟಿಆರ್ ಕನ್ನಡ ವರ್ಷನ್‌ಗೆ ಡಬ್ ಮಾಡಿದ್ದಾರೆ. ಇದು ಅವರಿಗೆ ಖುಷಿ ಕೊಟ್ಟಿದೆ. ಏಕೆಂದರೆ ಅವರ ತಾಯಿ ಕುಂದಾಪುರದವರು. “ನಾನು ಕನ್ನಡದಲ್ಲಿ ಡಬ್ ಮಾಡುತ್ತೇನೆಂದು ಗೊತ್ತಾದಾಗ ನನ್ನಮ್ಮ, ತುಂಬಾ ಎಚ್ಚರಿಕೆಯಿಂದ ಡಬ್ ಮಾಡು, ಅಲ್ಲಿ ನಮ್ಮವರು ಇದ್ದಾರೆ, ತಲೆ ತಗ್ಗಿಸುವ ಹಾಗೆ ಮಾಡಬೇಡ ಎಂದರು. ಹಾಗಾಗಿ, ಸಾಕಷ್ಟು ಎಚ್ಚರಿಕೆ ವಹಿಸಿ ಮಾಡಿದ್ದೇನೆ. ನನ್ನ ಕನ್ನಡದಲ್ಲಿ ತಪ್ಪಾಗಿದ್ದರೆ ಕ್ಷಮಿಸಿ’ ಎಂದ ಅವರು, ಪುನೀತ್‌ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡು “ಗೆಳೆಯ ಗೆಳೆಯ’ ಹಾಡು ಹೇಳಿದರು.
ಇನ್ನು, ಮತ್ತೂಬ್ಬ ನಟ ರಾಮ್‌ಚರಣ್ ತೇಜಾ ಕೂಡಾ ಸಿನಿಮಾದ ಅನುಭವದ ಜೊತೆ, ಕನ್ನಡಿಗರ ಪ್ರೀತಿ ಬಗ್ಗೆ ಮಾತನಾಡಿದರು. ಮುಂದೆ ಕನ್ನಡದಲ್ಲಿ ಒಳ್ಳೆಯ ಆಫರ್ ಬಂದರೆ ನಟಿಸುತ್ತೇನೆ ಎಂದರು. ನಟಿ ಆಲಿಯಾ ಭಟ್ ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು.
ಕರ್ನಾಟಕದಲ್ಲಿ “ಆರ್‌ಆರ್‌ಆರ್’ ಚಿತ್ರದ ವಿತರಣೆಯನ್ನು ಕೆವಿಎನ್ ಸಂಸ್ಥೆ ಪಡೆದುಕೊಂಡಿದೆ. ಕಾರ್ಯಕ್ರಮದಲ್ಲಿ ಕೆವಿಎನ್ ಸಂಸ್ಥೆಯ ವೆಂಕಟ್ ಕೋನಂಕಿ ಕೂಡಾ ಹಾಜರಿದ್ದರು