ಬೆಂಗಳೂರು: ರೇಣುಕಾಸ್ಚಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ (Darshan) ಅವರ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರು ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಕೊಲೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅವರನ್ನು ಇದುವರೆಗೆ ಚಿತ್ರರಂಗದ ಅನೇಕರು ಭೇಟಿ ಆಗಿದ್ದಾರೆ. ಆದಷ್ಟು ಬೇಗ ಅವರು ಜೈಲಿನಿಂದ ಹೊರಬಂದು ಮೊದಲಿನಂತೆ ಜನರನ್ನು ರಂಜಿಸಲಿ ಎಂದು ಕೆಲ ಕಲಾವಿದರು ಆಶಿಸಿದ್ದಾರೆ. ಇನ್ನು ಕೆಲವರು ಅವರಿಂದ ತಪ್ಪು ಆಗಿದ್ದರೆ ಶಿಕ್ಷೆ ಆಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ಸಿಗರೇಟ್ ಎಳೆಯುತ್ತಾ, ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಇಷ್ಟು ನ್ಯಾಯಾಂಗ ಬಂಧನದ ಸುತ್ತ ಸದ್ದು ಮಾಡುತ್ತಿದ್ದ ಪ್ರಕರಣ ಈಗ ಮತ್ತೊಮ್ಮೆ ದರ್ಶನ್ ಸುತ್ತಲ್ಲೇ ಸುತ್ತುತ್ತಿದೆ.
ದರ್ಶನ್ ಅವರ ಬಗ್ಗೆ ಇದುವರೆಗೆ ಹಲವು ಕಲಾವಿದರು ಮಾತನಾಡಿದ್ದಾರೆ. ಇದೀಗ ಮೊದಲ ಬಾರಿಗೆ ದರ್ಶನ್ ಅವರ ಬಗ್ಗೆ ಕಿಚ್ಚ ಸುದೀಪ್ ಅವರು ಜಾಣ್ಮೆಯಿಂದ ಮಾತನಾಡಿದ್ದಾರೆ.
ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆದು ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.
ದರ್ಶನ್ ವಿಚಾರದ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರಿಸಿದ ಅವರು, ನಾನು ಒಳಗೆ ಹೋಗಿ ಅವರನ್ನ ಹೊರಗೆ ಕಳಿಸಬೇಕಾ ಎಂದು ಮರು ಪ್ರಶ್ನಿಸಿದ್ದಾರೆ.
ನಾನು ಏನನ್ನು ಹೇಳಬೇಕೋ ಅದನ್ನು ಬಹಳ ಹಿಂದೆಯೇ ಹೇಳಿ ಆಗಿದೆ. ಅದನ್ನೇ ಮತ್ತೆ ಕೆದಕಿಕೊಂಡು ಮಾತನಾಡೋದಕ್ಕೆ ಇಷ್ಟಪಡಲ್ಲ. ನಾನು ಯಾರ ಮನಸ್ಸನ್ನು ನೋಯಿಸಲು ಇಷ್ಟಪಡಲ್ಲ. ಅವರಿಗೆ ಅಂಥ ಒಂದಷ್ಟು ಫ್ಯಾನ್ಸ್ ಊರೆಲ್ಲ ಇದ್ದಾರೆ. ಅವರಿಗೂ ಅಂಥ ಒಂದು ಕುಟುಂಬವಿದೆ. ನಾವು ಮಾತನಾಡುವುದರಿಂದ ಅವರಿಗೂ ನೋವಾಗೋದು ಬೇಡ. ಮಾತನಾಡಿ ಅವರ ಕುಟುಂಬಕ್ಕೂ ನೋವು ಕೊಡಲು ನಾನು ಇಷ್ಟಪಡಲ್ಲ. ನಾನು ಇದನ್ನು ರಾಜಕೀಯವಾಗಿ ಮಾತನಾಡುತ್ತಿದ್ದೇನೆ ಎಂದು ಅಂದುಕೊಳ್ಳಬೇಡಿ ಎಂದು ಹೇಳಿದ್ದಾರೆ.
ನಮಗೆ ನಮ್ಮ ನೆಲದ ಕಾನೂನಿನ ಮೇಲೆ ನಂಬಿಕೆಯಿದೆ. ಮಾಧ್ಯಮಗಳಲ್ಲಿ ಬಂದ ಬಳಿಕವೇ ನನಗೂ ವಿಚಾರ ಗೊತ್ತಾಗಿದ್ದು. ನಾವು ಪರಸ್ಪರ ಮಾತನಾಡುತ್ತಿಲ್ಲ ಹಾಗಾಗಿ ನಾನು ಹೋಗಿಲ್ಲ ಎಂದು ಎಂದು ಸುದೀಪ್ ಹೇಳಿದ್ದಾರೆ.
ಅವರು ಡಿಫ್ರೆಂಟ್ ಪರ್ಸನ್ , ನನ್ನ ಆಸಕ್ತಿ, ಅಭಿರುಚಿ ಬೇರೆ. ನನಗೆ ನಾಟಕೀಯವಾಗಿ ಇರಲು ಬರುವುದಿಲ್ಲ. ಸಮಾಜ ಯಾರೋ ಏನೋ ಹೇಳುತ್ತಾರೆ ನಾನು ಮಾಡೋದಕ್ಕೆ ಇಷ್ಟಪಡಲ್ಲ. ಮನಸ್ಸಿನಿಂದ ಬಂದರೆ ನೀವು ಯಾರು ಏನೂ ಹೇಳಿದರೂ ನಾನು ಹೋಗೇ ಹೋಗ್ತೀನಿ ಎಂದಿದ್ದಾರೆ.
ಸದ್ಯ ಕಿಚ್ಚ ಅವರ ಮ್ಯಾಕ್ಸ್ ಸಿನಿಮಾದ ವಿಚಾರ ಟ್ರೆಂಡ್ ನಲ್ಲಿದೆ ಅವರ ಹುಟ್ಟುಹಬ್ಬದ ದಿನ ಬಿಗ್ ಅಪ್ಡೇಟ್ ಹೊರಬೀಳುವ ಸಾಧ್ಯತೆಯಿದೆ. ಇನ್ನೊಂದೆಡೆ ಅನೂಪ್ ಭಂಡಾರಿ ಅವರ ‘ಬಿಲ್ಲಾ ರಂಗ ಭಾಷ’ ಬಗ್ಗೆಯೂ ಅಪ್ಡೇಟ್ ಹುಟ್ಟುಹಬ್ಬಕ್ಕೆ ಬರಲಿದೆ.
ಇದನ್ನೂ ಓದಿ: India Under 19: ಆಸೀಸ್ ವಿರುದ್ದದ ಸರಣಿಗೆ ದ್ರಾವಿಡ್ ಪುತ್ರ ಸಮಿತ್ ಆಯ್ಕೆ