Advertisement

ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರವಾಸವನ್ನು ರದ್ದುಪಡಿಸಿದ್ದೇನೆ: ಜಗದೀಶ ಶೆಟ್ಟರ್‌

08:23 AM Nov 02, 2019 | Team Udayavani |

ಬೆಳಗಾವಿ: ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಹೂಡಿಕೆದಾರರನ್ನು ಸೆಳೆಯುವ ಉದ್ದೇಶದಿಂದ ಚೀನಾ ಪ್ರವಾಸ ಕೈಗೊಂಡಿದ್ದೆ. ಆದರೆ,ನೆರೆಯಿಂದಾಗಿ ಜನರು ಸಂಕಷ್ಟದಲ್ಲಿರುವುದರಿಂದ ಪ್ರವಾಸ ರದ್ದುಪಡಿಸಿದ್ದೇನೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿದೇಶ ಪ್ರವಾಸವೆಂದರೆ ಪಾಪದ ಕೆಲಸವೇನ್ರೀ?’ಎಂದು ಮಾಧ್ಯಮದವರ ವಿರುದ್ಧ ಹರಿಹಾಯ್ದರು.

ಇದೇನು ನನ್ನ ಖಾಸಗಿ ಪ್ರವಾಸವಾಗಿರಲಿಲ್ಲ. ಚೀನಾ ಸರ್ಕಾರದ ಆಹ್ವಾನದ ಮೇರೆಗೆ ಅಲ್ಲಿಗೆ ಹೋಗಲು ಯೋಜಿಸಿದ್ದೆ. ಜನಪ್ರತಿನಿಧಿಯಾಗಿ ನಾನು ಹೋಗುತ್ತಿಲ್ಲ. ಆದರೆ, ಇಲಾಖೆಯ ಹಿರಿಯ ಅಧಿಕಾರಿಗಳು ಹೋಗುತ್ತಾರೆ. ಇದೇನು ಖಾಸಗಿ ಪ್ರವಾಸವಲ್ಲ. ಸರ್ಕಾರದ ಪರವಾಗಿ ಹೋಗುತ್ತಿದ್ದಾರೆ. ಅಲ್ಲಿನ ಅಧಿಕಾರಿಗಳು ಇಲ್ಲಿಗೆ, ಇಲ್ಲಿನವರು ಬೇರೆ ಕಡೆ ಹೋಗುವುದು ಸಾಮಾನ್ಯ ಪ್ರಕ್ರಿಯೆ. ಇದರಲ್ಲಿ ಹೊಸದೇನೂ ಇಲ್ಲ ಎಂದರು.

ಚೀನಾದ ಸಚಿವರು ಸಹ ಇಲ್ಲಿಗೆ ಬಂದು ಮಾಹಿತಿ ಪಡೆದು ಹೋಗಿದ್ದಾರೆ. ನಾವು ಮುಂದಿನ ದಿನಗಳಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್‌) ಮಾಡಬೇಕಾಗಿದೆ. ಅದರ ಸಂಬಂಧ ಮಂತ್ರಿಯಾದ ನಾನು ಸೇರಿದಂತೆ ಅಧಿಕಾರಿಗಳು ವಿದೇಶಗಳಿಗೆ ಹೋಗಬೇಕಾಗುತ್ತದೆ. ರೋಡ್‌ ಷೋ ನಡೆಸಿ ಕರ್ನಾಟಕದ ಬಗ್ಗೆ ಮಾಹಿತಿ ಕೊಡಬೇಕಾಗುತ್ತದೆ. ಪ್ರಮುಖ ಅಧಿಕಾರಿಗಳು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೇಬೇಕಾಗುತ್ತದೆ. ನಾಡು ಹಾಗೂ ದೇಶದಲ್ಲಿ ಕೈಗಾರಿಕೆ ಬೆಳವಣಿಗೆಗೆ ಇರುವ ಪೂರಕ ವಾತಾವರಣದ ಬಗ್ಗೆ ವಿದೇಶಗಳಲ್ಲಿ ತಿಳಿಸಬೇಕಾಗುತ್ತದೆ. ಬಂಡವಾಳ ಆಕರ್ಷಿಸಬೇಕಾಗುತ್ತದೆ. ಇದು ಎಲ್ಲ ಸರ್ಕಾರದಲ್ಲೂ ನಡೆಯುವಂತಹ ಸಹಜ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೆರೆ ಸಂತ್ರಸ್ತರನ್ನು ಭೇಟಿಯಾಗಿಲ್ಲ ಎಂಬ ಪ್ರಶ್ನೆಗೆ, ಇಡೀ ಸರ್ಕಾರವೇ ಸಂತ್ರಸ್ತರೊಂದಿಗೆ ಇದೆ. ಅಧಿಕಾರಿಗಳು ಹಾಗೂ ಇತರ ಸಚಿವರು ಹಲವು ಬಾರಿ ಭೇಟಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನಾನೂ ಪ್ರವಾಸ ಮಾಡುತ್ತೇನೆ’ ಎಂದು ಉತ್ತರ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next