ಸಿಂಧನೂರು: ಪಕ್ಷ ಹಾಗೂ ನಮ್ಮ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿಯನ್ನು ವಹಿಸಿದ್ದು, ಯಾವುದೇ ಕಪ್ಪುಚುಕ್ಕೆಯಿಲ್ಲದ ರೀತಿ ಆಡಳಿತ ನಿಭಾಯಿಸುವೆ ಎಂದು ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಮಧ್ವರಾಜ್ ಆಚಾರ್ ಹೇಳಿದರು.
ನಗರದ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮೇರು ಗಾಯಕಿ ಲತಾ ಮಂಗೇಶ್ಕರ್, ಕನ್ನಡದ ಕಬೀರ ಇಬ್ರಾಹಿಂ ಸುತಾರ ನಿಧನರಾದ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಯಾವುದೇ ರೀತಿಯಿಂದಲೂ ಕಾನೂನು ಬಾಹಿರ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಮಧ್ವರಾಜ್ ಅವರ ಪಕ್ಷ ನಿಷ್ಠೆ ಪರಿಗಣಿಸಿ ನಾಯಕರು ಜವಾಬ್ದಾರಿ ಕೊಟ್ಟಿದ್ದಾರೆ. ಅಭಿವೃದ್ಧಿಯಾಗದ ಲೇಔಟ್ ಗಳಿಗೆ ಬಿಡುಗಡೆ ಅವಕಾಶ ನೀಡಬಾರದು. ಸರಕಾರದ ಮಾರ್ಗಸೂಚಿ, ಕಾನೂನಿನ ಅನ್ವಯ ಕೆಲಸ ಮಾಡಲಿ. ಯಾವುದೇ ರೀತಿಯಿಂದಲೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು ಎಂದರು.
ನಿರ್ಗಮಿತ ಅಧ್ಯಕ್ಷ ಅಮರೇಗೌಡ ವಿರೂಪಾಪುರ ಮಾತನಾಡಿ, ನನ್ನ ಅವಧಿಯಲ್ಲಿ ನಿಷ್ಪಕ್ಷಪಾತವಾಗಿ ಆಡಳಿತ ನಡೆಸಿದ್ದು, ಕೆಲವು ವಿರೋಧ ಬಂದರೂ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ನನ್ನ ಅವಧಿಯಲ್ಲಿ ನನ್ನ ಗಮನಕ್ಕೆ ಬಾರದೇ ನಗರಸಭೆಗೆ ಕಡತಗಳನ್ನು ರವಾನಿಸಿದ ಪ್ರಕರಣದಲ್ಲಿ, ಕಾನೂನು ಹೋರಾಟ ಮುಂದುವರಿಸುವೆ. ಕಾನೂನು ಬದ್ಧವಾಗಿ ಕೆಲಸ ನಿರ್ವಹಿಸಿದ ತೃಪ್ತಿಯಿದೆ ಎಂದರು.
ನೂತನವಾಗಿ ಪ್ರಾಧಿಕಾರದ ನಿರ್ದೇಶಕರಾಗಿ ನೇಮಕವಾದ ಪೂಜಪ್ಪ ಪೂಜಾರಿ, ಮಂಜುನಾಥ ಹರಸೂರು, ರಾಮನಗೌಡ ವಕೀಲರು ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಮುಖಂಡರಾದ ಎನ್.ಶಿವನಗೌಡ ಗೋರೆಬಾಳ, ಎಂ.ದೊಡ್ಡಬಸವರಾಜ್, ಬಿಜೆಪಿ ಅಧ್ಯಕ್ಷ ಹನುಮೇಶ ಸಾಲಗುಂದಾ, ಅಮರೇಶ ಅಂಗಡಿ, ರಾಜಶೇಖರ ಹಿರೇಮಠ, ಯಲ್ಲೂಸಾ ಬದಿ, ವೆಂಕಟೇಶ ಪ್ರಭು ಇದ್ದರು.