Advertisement

ನಾನು ಬಡವರ ಜಾತಿಗೆ ಸೇರಿದವನು

01:24 AM May 12, 2019 | mahesh |

ಹೊಸದಿಲ್ಲಿ: “ಎಲ್ಲರೂ ನನ್ನ ಜಾತಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ನನಗಿರುವುದು ಒಂದೇ ಜಾತಿ. ಈ ದೇಶದ ಬಡ ಜನರು ಯಾವ ಜಾತಿಗೆ ಸೇರಿದ್ದಾರೋ, ಅದೇ ಜಾತಿಗೆ ಸೇರಿದವನು ನಾನು.’

Advertisement

ಜಾತಿ ಕುರಿತು ಪ್ರಶ್ನೆಯೆತ್ತಿದ ಉತ್ತರಪ್ರದೇಶದ ಮಹಾಮೈತ್ರಿಯ ಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಹೀಗೆಂದು ಉತ್ತರಿಸಿದ್ದಾರೆ. ಶನಿವಾರ ಉ. ಪ್ರದೇ ಶದ ರಾಬರ್ಟ್ಸ್ಗಂಜ್‌ ಮತ್ತು ಗಾಜಿಪುರದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ಯಲ್ಲಿ ಮಾತನಾಡಿದ ಮೋದಿ, “ಎಸ್‌ಪಿ ಮತ್ತು ಬಿಎಸ್ಪಿ ಈಗ ನನ್ನ ಜಾತಿಯ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಬಡಜನರು ಯಾವ ಜಾತಿಗೆ ಸೇರಿದ್ದಾರೋ, ಅದುವೇ ನನ್ನ ಜಾತಿ ಎಂದು ಹೇಳಲು ಇಷ್ಟಪಡುತ್ತೇನೆ’ ಎಂದಿದ್ದಾರೆ.

ಮಹಾಮೈತ್ರಿ ವಿರುದ್ಧದ ವಾಗ್ಧಾಳಿ ಮುಂದುವರಿಸಿದ ಮೋದಿ, “ಹಿಂದಿನ ಮೈತ್ರಿ ಸರಕಾರಗಳು ದೇಶದ ಗುಪ್ತಚರ ಸಂಸ್ಥೆಗಳನ್ನು ದುರ್ಬಲ ಗೊಳಿಸಿದವು. ನಂತರ ಬಂದ ಅಟಲ್‌ಜೀ ಸರಕಾರವು ಅದನ್ನು ಸರಿಪಡಿಸಿತು. ತೃತೀಯ ರಂಗದ ಸರಕಾರ ಮಾಡಿದ್ದು ಯಾವ ಅಪರಾಧಕ್ಕೂ ಕಮ್ಮಿಯಿಲ್ಲ. ಯಾವಾಗೆಲ್ಲ ದೇಶದಲ್ಲಿ ಮಹಾಕಲಬೆರಕೆಯ ಸರಕಾರ ಬಂದಿದೆಯೋ, ಆಗೆಲ್ಲ ದೇಶದ ಭದ್ರತೆಗೆ ಧಕ್ಕೆ ಉಂಟಾಗಿದೆ. ಹಾಗಾಗಿ, ಯಾವ ಕಾರಣಕ್ಕೂ ಮಹಾ ಮೈತ್ರಿಗೆ ಮತ ಹಾಕಬೇಡಿ. ಈಗಿರುವುದು ನವ ಭಾರತ. ಇಲ್ಲಿ ನಾವು ಉಗ್ರರ ಅಡಗು ತಾಣಗಳಿಗೆ ನುಗ್ಗಿ, ಅವರನ್ನು ದಮನ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಅವಾರ್ಡ್‌ ವಾಪ್ಸಿ ಗ್ಯಾಂಗ್‌ ಮೌನವೇಕೆ? ಅಲ್ವಾರ್‌ನಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರವಾದಾಗ, ಪ್ರಶಸ್ತಿ ವಾಪ್ಸಿ ಗ್ಯಾಂಗ್‌ನವರು ಮೌನ ವಹಿಸಿ ದ್ದೇಕೆ ಎಂದೂ ಮೋದಿ ಪ್ರಶ್ನಿಸಿದ್ದಾರೆ. ಚುನಾವಣೆ ಗಮನ ದಲ್ಲಿಟ್ಟು ರಾಜಸ್ಥಾನದ ಕಾಂಗ್ರೆಸ್‌ ಸರಕಾರವು, ಈ ಅತ್ಯಾಚಾರ ಪ್ರಕರಣ ವನ್ನು ಮುಚ್ಚಿಟ್ಟಿತು. ದೇಶದ ಮಗಳಿಗಾಗಲೀ, ಮಗನಿಗಾಗಲೀ “ನ್ಯಾಯ’ ದೊರಕಿಸಿ ಕೊಡಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.

ಎಚ್‌ಡಿಕೆ ವಿರುದ್ಧ ಮೋದಿ ಕಿಡಿ
“ಒಂದು ಹೊತ್ತಿನ ಊಟಕ್ಕಿಲ್ಲದವರು ಸೇನೆಗೆ ಸೇರುತ್ತಾರೆ’ ಎಂಬ ಕರ್ನಾಟಕದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ಪ್ರಸ್ತಾಪಿಸಿ ಪ್ರಧಾನಿ ಮೋದಿ ಮತ್ತೂಮ್ಮೆ ವಾಗ್ಧಾಳಿ ನಡೆಸಿದ್ದಾರೆ. ಉತ್ತರಪ್ರದೇಶದಲ್ಲಿ ಈ ಕುರಿತು ಪ್ರಸ್ತಾಪಿಸಿದ ಅವರು, “ಕಾಂಗ್ರೆಸ್‌ ಒಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದೆ. ಆ ವ್ಯಕ್ತಿಯ ತಂದೆ ಪ್ರಧಾನಿ ಹುದ್ದೆಯಲ್ಲಿದ್ದವರು. ಯಾರು ಹಸಿವಿನಿಂದಿದ್ದಾರೋ, ಅವರು ಸೇನೆಗೆ ಸೇರುತ್ತಾರೆ ಎಂದು ಆ ವ್ಯಕ್ತಿ ಹೇಳಿದ್ದಾರೆ. ಅವರ ಹೇಳಿಕೆಗೆ ಅವಹೇಳನಕಾರಿಯಾಗಿದೆ ಮಾತ್ರವಲ್ಲ, ಅವರು ದೇಶದ ಸಶಸ್ತ್ರ ಪಡೆಗೆ ಅವಮಾನ ಮಾಡಿದ್ದಾರೆ’ ಎಂದಿದ್ದಾರೆ.

Advertisement

ಕಾಪ್ಟರ್‌ ರಿಪೇರಿ ಮಾಡಿದ ರಾಹುಲ್‌!
ತಮ್ಮ ಹೆಲಿಕಾಪ್ಟರ್‌ನಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಖುದ್ದಾಗಿ ಸರಿಪಡಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಿಮಾಚಲಪ್ರದೇಶದ ಉನಾದಲ್ಲಿ ರ್ಯಾಲಿಗೆಂದು ತೆರಳಿದ್ದಾಗ ಕಾಪ್ಟರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಕೂಡಲೇ ರಿಪೇರಿ ಕೆಲಸದಲ್ಲಿ ರಾಹುಲ್‌ ಕೂಡ ಕೈಜೋಡಿಸಿ, ಸರಿಪಡಿಸಿದರು. ಬಳಿಕ ಇದರ ಪೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ ಅವರು, “ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಅದು ಉತ್ತಮ ಟೀಂವರ್ಕ್‌ ಎನಿಸುತ್ತದೆ. ಇವತ್ತು ನಮ್ಮ ಹೆಲಿಕಾಪ್ಟರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಎಲ್ಲರೂ ಸೇರಿ ತ್ವರಿತವಾಗಿ ರಿಪೇರಿ ಮಾಡಿದೆವು’ ಎಂದು ಬರೆದುಕೊಂಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಕನಿಷ್ಠ 85 ಸಾವಿರ ಮಂದಿ ಈ ಪೋಸ್ಟ್‌ ಅನ್ನು ಲೈಕ್‌ ಮಾಡಿದ್ದಾರೆ.

ಪ್ರಿಯಾಂಕಾ ವಾದ್ರಾರಿಂದ ಅವಮಾನ: ರಾಜೀನಾಮೆ
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವಮಾನ ಮಾಡಿದ್ದಾರೆ ಎಂಬ ಕಾರಣ ನೀಡಿ ಉತ್ತರ ಪ್ರದೇಶದ ಭದೋಹಿ ಜಿಲ್ಲಾ ಅಧ್ಯಕ್ಷ ಹಾಗೂ ಇತರ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಭ್ಯರ್ಥಿ ರಮಾಕಾಂತ್‌ ಯಾದವ್‌ ಸೂಕ್ತ ಸಹಕಾರ ನೀಡುತ್ತಿಲ್ಲ ಎಂದು ದೂರು ಹೇಳಲು ಹೋದಾಗ ಪ್ರಿಯಾಂಕಾ, ದೂರನ್ನು ನಿರ್ಲಕ್ಷಿಸಿದರು. ಅಷ್ಟೇ ಅಲ್ಲ, ಕಟುವಾಗಿ ಪ್ರತಿಕ್ರಿಯೆ ನೀಡಿದರು. ರ್ಯಾಲಿಗೆ ಯಾರನ್ನೂ ಆಹ್ವಾನಿಸಬೇಡಿ ಎಂದೂ ಸೂಚಿಸಿದ್ದಾರೆ ಎಂದು ಭದೋಹಿ ಜಿಲ್ಲಾಧ್ಯಕ್ಷೆ ನೀಲಂ ಮಿಶ್ರಾ ಹೇಳಿದ್ದಾರೆ. ಶುಕ್ರವಾರವಷ್ಟೇ ಭದೋಹಿಯಲ್ಲಿ ಪ್ರಿಯಾಂಕಾ ರ್ಯಾಲಿ ನಡೆಸಿದ್ದರು.

ಗಾಯಕ ಅರುಣ್‌ ಬಕ್ಷಿ ಬಿಜೆಪಿ ಸೇರ್ಪಡೆ
ನಟ, ಗಾಯಕ ಅರುಣ್‌ ಬಕ್ಷಿ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರ್ಪಡೆ ನಿರ್ಧಾರದ ಕುರಿತು ಮಾತನಾಡಿದ ಬಕ್ಷಿ, “ನಾನು ಯಾವಾಗಲೂ ಬಿಜೆಪಿ ಸಿದ್ಧಾಂತಗಳನ್ನು ಬಹುವಾಗಿ ಮೆಚ್ಚುವವನು. ಜೊತೆಗೆ ಮೋದಿ ಅವರ ಕಾರ್ಯವೈಖರಿ ಬಗ್ಗೆ ನನಗೆ ಮೆಚ್ಚುಗೆ ಇದೆ’ ಎಂದು ಹೇಳಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್‌ ನಾಯಕ ಹಾಗೂ ದೆಹಲಿ ಮಾಜಿ ಸಚಿವ ರಾಜ್‌ಕುಮಾರ್‌ ಚೌಹಾಣ್‌ ಅವರೂ ಶನಿವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರಿದ್ದಾರೆ. ಟಿಕೆಟ್‌ ನಿರಾಕರಿಸಿದ್ದರಿಂದ ಇವರು ಅಸಮಾಧಾನಗೊಂಡಿದ್ದರು.

ಕೈ ಕೈ ಮಿಲಾಯಿಸಿದ ಕೈ ನಾಯಕರು!
ಹೈದರಾಬಾದ್‌ನಲ್ಲಿ ಕಾಂಗ್ರೆಸ್‌ನ ಇಬ್ಬರು ನಾಯಕರು ಸಾರ್ವಜನಿಕವಾಗಿಯೇ ಪರಸ್ಪರ ಹೊಡೆ ದಾಡಿಕೊಂಡ ಘಟನೆ ಶನಿವಾರ ನಡೆದಿದ್ದು, ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟುಮಾಡಿದೆ. ಮಾಜಿ ಸಂಸದ ವಿ.ಹನುಮಂತ ರಾವ್‌ ಮತ್ತು ತೆಲಂಗಾಣ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ನಾಗೇಶ್‌ ಮುದಿರಾಜ್‌ ನಡುವೆ ಕುರ್ಚಿಯ ವಿಚಾರಕ್ಕೆ ಶುರುವಾದ ವಾಗ್ವಾದ ಪರಸ್ಪರ ಕೈ ಕೈ ಮಿಲಾಯಿಸುವಲ್ಲಿಗೆ ಹೋಗಿ, ಕೊನೆಗೆ ನೆಲದಲ್ಲೂ ಬಿದ್ದು ಹೊರಳಾಡಿದ್ದಾರೆ. ಮುಜುಗರ ಗೊಂಡ ಕಾಂಗ್ರೆಸ್‌, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮಕ್ಕೆ ಸೂಚಿಸಿದೆ.

ಮೋದಿ, ಆರೆಸ್ಸೆಸ್‌ಗೆ ನನ್ನ ಕುಟುಂಬದ ಮೇಲೆ ದ್ವೇಷ
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರೆಸ್ಸೆಸ್‌ಗೆ ನನ್ನ ಕುಟುಂಬದ ಮೇಲೆ ದ್ವೇಷವಿದೆ. ಆದರೆ, ನನಗೆ ಅವರ ಬಗ್ಗೆ ಅಂಥ ಯಾವ ದ್ವೇಷಭಾವನೆಯೂ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಹೇಳಿದ್ದಾರೆ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಕುರಿತು ಕಳೆದೊಂದು ವಾರದಲ್ಲಿ ಪ್ರಧಾನಿ ಮೋದಿ ಆಡಿರುವ ಮಾತುಗಳಿಗೆ ಸಂಬಂಧಿಸಿ ರಾಹುಲ್‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಮಧ್ಯಪ್ರದೇಶದ ಶುಜಾಲ್‌ಪುರದಲ್ಲಿ ಶನಿವಾರ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, “ಬಿಜೆಪಿ, ಆರೆಸ್ಸೆಸ್‌ ಹಾಗೂ ಪ್ರಧಾನಿ ಮೋದಿಗೆ ನನ್ನ ಕುಟುಂಬದ ಮೇಲೆ ಬಹಳ ದ್ವೇಷವಿದೆ. ಆದರೆ, ಅದನ್ನು ಹೋಗಲಾಡಿಸುವುದೇ ನನ್ನ ಕೆಲಸ. ಮೋದಿಯವರು ನನ್ನ ಮೇಲೆ ದಾಳಿ ಮಾಡುತ್ತಾರೆ. ನನ್ನ ಕುಟುಂಬ, ನನ್ನ ಅಪ್ಪಾಜಿ ಮತ್ತು ಅಜ್ಜಿಯ ಬಗ್ಗೆಯೂ ದ್ವೇಷ ಕಾರುತ್ತಾರೆ. ಆದರೆ, ನಾನು ಹೇಳುವುದಿಷ್ಟೆ. ನೀವು ದೇಶದ ಪ್ರಧಾನಮಂತ್ರಿ. ದ್ವೇಷವನ್ನು ಹೋಗಲಾಡಿಸಿ, ಪ್ರೀತಿಯನ್ನು ಹಬ್ಬಿಸುವ ಕೆಲಸ ಮಾಡಬೇಕು. ದ್ವೇಷವನ್ನು ಯಾವತ್ತೂ ದ್ವೇಷದಿಂದ ಹೋಗಲಾಡಿಸಲು ಸಾಧ್ಯವಿಲ್ಲ. ಹಾಗಾಗಿ, ನಾನು ಪ್ರೀತಿಯಿಂದಲೇ ಮೋದಿಯವರನ್ನು ಎದುರಿಸುತ್ತೇನೆ’ ಎಂದಿದ್ದಾರೆ.

“ಟಿಕೆಟ್‌ಗಾಗಿ 6 ಕೋಟಿ ಲಂಚ’: ಬಯಲಾಯಿತೇ ಆಪ್‌ ಪರಪಂಚ?
ಭ್ರಷ್ಟಾಚಾರ ವಿರೋಧಿ ಹೋರಾಟದಿಂದಲೇ ಮುನ್ನಲೆಗೆ ಬಂದ ಆಮ್‌ ಆದ್ಮಿ ಪಕ್ಷವೇ ಈಗ ಭ್ರಷ್ಟಾಚಾರದ ಗೂಡಾಗಿದೆಯೇ? ಪಶ್ಚಿಮ ದೆಹಲಿಯ ಆಪ್‌ ಅಭ್ಯರ್ಥಿಯ ಪುತ್ರನೊಬ್ಬ ಮಾಡಿರುವ ಆರೋಪವು ಇಂಥ ದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಲೋಕಸಭೆ ಚುನಾವಣೆಯ ಟಿಕೆಟ್‌ ಪಡೆಯಲು ನನ್ನ ತಂದೆ ಬಲ್ಬಿàರ್‌ ಸಿಂಗ್‌ ಜಾಖರ್‌ ಅವರು ದೆಹಲಿ ಸಿಎಂ ಕೇಜ್ರಿವಾಲ್‌ಗೆ 6 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಜಾಖರ್‌ ಪುತ್ರ ಉದಯ್‌ ಜಾಖರ್‌ ಆರೋಪಿಸಿದ್ದಾರೆ. ಆದರೆ, ಈ ಆರೋಪ ಅಲ್ಲಗಳೆದಿರುವ ಬಲ್ಬಿàರ್‌ ಜಾಖರ್‌, “ನಾನು 2009ರಲ್ಲೇ ಪತ್ನಿಗೆ ವಿಚ್ಛೇದನ ನೀಡಿದ್ದೇನೆ. ಮಗನೂ ಆಕೆಯೊಂದಿಗೇ ಬದುಕುತ್ತಿದ್ದಾನೆ. ನಾನು ಅವನೊಂದಿಗೆ ಮಾತನಾಡುವುದೇ ಅಪರೂಪ. ನನ್ನ ಪುತ್ರನ ಹೇಳಿಕೆಯ ಹಿಂದೆ ಈಗ ಪಟ್ಟಭದ್ರ ಹಿತಾಸಕ್ತಿಯುಳ್ಳ ರಾಜಕೀಯ ಪಕ್ಷಗಳು ಇರುವುದು ಸ್ಪಷ್ಟ’ ಎಂದಿದ್ದಾರೆ. ಇನ್ನೊಂದೆಡೆ, ಉದಯ್‌ ಜಾಖರ್‌ ಆರೋಪ ಕುರಿತು ಕೂಡಲೇ ತನಿಖೆಗೆ ಆದೇಶಿಸಬೇಕು ಎಂದು ಚುನಾ ವಣಾ ಆಯೋಗಕ್ಕೆ ದೆಹಲಿ ಬಿಜೆಪಿ ಒತ್ತಾಯಿಸಿದೆ.

82 ಜನರಿರುವ ಅಲಹಾಬಾದ್‌ನ ಕುಟುಂಬದಲ್ಲಿ 66 ಮತದಾರರು!
ಚುನಾವಣೆ ಬಂತೆಂದರೆ ಸಾಕು, ಈ ಕುಟುಂಬ ಹೆಚ್ಚು ಸುದ್ದಿಯಾಗುತ್ತದೆ. ಏಕೆಂದರೆ, ಈ ಕುಟುಂಬದಲ್ಲಿರುವುದು ಬರೋಬ್ಬರಿ 82 ಜನ! ಇಷ್ಟು ದೊಡ್ಡ ಕುಟುಂಬವಿರುವುದು ಉತ್ತರ ಪ್ರದೇಶದ ಅಲಹಾಬಾದ್‌ನ ಬಹರೈಚಾ ಹಳ್ಳಿಯಲ್ಲಿ. ಇದರ ಒಡೆಯ ನರೇಶ್‌ ಭುಟಿಯಾ (98). ಈ ಕುಟುಂಬದಲ್ಲಿನ 82 ಜನರಲ್ಲಿ 66 ಮಂದಿಗೆ ಓಟಿನ ಅಧಿಕಾರವಿದೆ. ಇವರ ಮುಖ್ಯ ಕಸುಬು ಕೃಷಿ. ಆದರೂ, ಈ ಕುಟುಂಬದ ನಾಲ್ವರು ಓದಿಕೊಂಡು ಮುಂಬೈನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಈ ಅವಿಭಕ್ತ ಕುಟುಂಬಕ್ಕೆ ಅಡುಗೆ ಬೇಯಿಸಲು ಇರುವುದು ಒಂದೇ ಅಡುಗೆ ಮನೆ. ಒಂದು ದಿನದ ಅಡುಗೆಗೆ ಏನಿಲ್ಲವೆಂದರೂ 20 ಕೆಜಿ ತರಕಾರಿ, 15 ಕೆಜಿ ಅಕ್ಕಿ ಹಾಗೂ 10 ಕೆಜಿ ಗೋಧಿ ಬೇಕಂತೆ!

ಭಾರತರತ್ನ ವಾಪಸ್‌ ಪಡೆಯಿರಿ
1984ರ ಸಿಖ್‌ ಹತ್ಯಾಕಾಂಡಕ್ಕೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರೇ ಕಾರಣ ಎಂದು ಆರೋಪಿಸಿರುವ ಹಿಮಾಚಲ ಪ್ರದೇಶದ ಬಿಜೆಪಿ ಅಧ್ಯಕ್ಷ ಸತ್ಪಾಲ್‌ ಸಿಂಗ್‌ ಸತ್ತಿ, “ಕೂಡಲೇ ರಾಜೀವ್‌ಗೆ ನೀಡಲಾಗಿರುವ ಭಾರತರತ್ನ ವನ್ನು ವಾಪಸ್‌ ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ. ಆಗ ಮಾತ್ರ ಸಿಖ್‌ ಸಮುದಾಯದ ನೋವು ಶಮನವಾಗುತ್ತದೆ ಎಂದೂ ಹೇಳಿದ್ದಾರೆ.

ಮತ್ತೆ ಸಿಧು ಸಡಿಲು ನಾಲಗೆ; ಬಿಜೆಪಿ ತಿರುಗೇಟು
ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಚುನಾವಣಾ ಆಯೋಗದಿಂದ ಶೋಕಾಸ್‌ ನೋಟಿಸ್‌ ಪಡೆದರೂ, ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ತಮ್ಮ ಲೂಸ್‌ಟಾಕ್‌ ಮುಂದುವರಿಸಿದ್ದಾರೆ. ಆಯೋಗದ ನೋಟಿಸ್‌ ಪಡೆದ ಬೆನ್ನಲ್ಲೇ ಇಂದೋರ್‌ನಲ್ಲಿ ಮತ್ತೆ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಧುಗೆ ತಿರುಗೇಟು ನೀಡಿದ್ದಾರೆ. ಇವರಿಬ್ಬರ ಮಾತಿನ ಝಲಕ್‌ ಇಲ್ಲಿದೆ.

ಮೋದಿ ನವವಧು ಇದ್ದಂತೆ
ಹೊಸದಾಗಿ ಮದುವೆ ಆಗಿ ಗಂಡನ ಮನೆಗೆ ಬಂದ ವಧು ಕೈಬಳೆಗಳ ಸದ್ದು ಮಾಡುತ್ತಾ ಇರುತ್ತಾಳೆಯೇ ಹೊರತು, ಸಾಕಷ್ಟು ರೊಟ್ಟಿ ತಟ್ಟುವುದಿಲ್ಲ. ಊರಿನ ಜನರು ಆಕೆಯ ಬಳೆಗಳ ಸದ್ದು ಕೇಳಿ, ಆಕೆ ಹೆಚ್ಚು ಕೆಲಸ ಮಾಡುತ್ತಿದ್ದಾಳೆ ಎಂದು ಭಾವಿಸುತ್ತಾರೆ. ಆದರೆ, ವಾಸ್ತವದಲ್ಲಿ ಆಕೆ ಕೆಲಸ ಮಾಡುವುದಿಲ್ಲ. ಮೋದಿಯವರದ್ದು ಕೂಡ ಸದ್ದು ಮಾತ್ರವೇ ಹೊರತು, ಕೆಲಸ ಏನೂ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಗುವಂತೆ ಮಾಡಿದ್ದು ಕಾಂಗ್ರೆಸ್‌. ಕಾಂಗ್ರೆಸ್‌ ಮೌಲಾನಾ ಆಜಾದ್‌ ಮತ್ತು ಮಹಾತ್ಮ ಗಾಂಧಿಯವರ ಪಕ್ಷ. ಇವರು ನಮಗೆ ಬಿಳಿಚರ್ಮದ ಬ್ರಿಟಿಷರಿಂದ ಸ್ವಾತಂತ್ರ್ಯ ಒದಗಿಸಿಕೊಟ್ಟರು. ಈಗ ಇಂದೋರ್‌ನ ಜನ “ಕಪ್ಪುಚರ್ಮದ ಬ್ರಿಟಿಷ’ರಾದ ಬಿಜೆಪಿಯವರಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುತ್ತಾರೆ. ಪ್ರಧಾನಿ ಮೋದಿ ಕೇವಲ “ಪ್ರಧಾನ ವಿಭಜಕ’ ಮಾತ್ರವಲ್ಲ. ಅವರು “ಪ್ರಧಾನ ಸುಳ್ಳುಗಾರ’ನೂ ಹೌದು, ಅಂಬಾನಿ ಮತ್ತು ಅದಾನಿಯವರ “ಪ್ರಧಾನ ಮ್ಯಾನೇಜರ್‌’ ಕೂಡ ಹೌದು. ತಮ್ಮ ಆಡಳಿತದ ಬಗ್ಗೆ ಹೇಳಲು ಏನೂ ಇಲ್ಲದಿರುವ ಕಾರಣ, ರಾಷ್ಟ್ರೀಯತೆಯ ಹೆಸರಲ್ಲಿ ಮೋದಿ ಮತ ಕೇಳುತ್ತಿದ್ದಾರೆ.

ಸಿಧು ಸೆಕ್ಸಿಸ್ಟ್‌ ಮತ್ತು ರೇಸಿಸ್ಟ್‌
ಸಿಧು ಒಬ್ಬ ಸ್ತ್ರೀದ್ವೇಷಿ ಹಾಗೂ ಜನಾಂಗೀಯ ದ್ವೇಷಿ. ಹಿಂದೆ ಮಿಷೆಲ್‌ ಒಬಾಮ ಕುರಿತೂ ಅವಹೇಳನ ಮಾಡಿದ್ದರು. ಮಿಷೆಲ್‌ ಅವರು ಶ್ವೇತಭವನದ ಅಡುಗೆಮನೆಯಲ್ಲಿ ಬ್ರೆಡ್‌ ತಯಾರಿಸಲು ಹೋದಾಗ, ಅಲ್ಲಿ ಲಕ್ನೋದ ಕೆಲವು ವಸ್ತುಗಳಿದ್ದವು ಎಂದು ಸಿಧು ಹೇಳಿದ್ದರು. ಅವರ ಪ್ರಕಾರ, ಮಹಿಳೆಯರು ಕೇವಲ ಅಡುಗೆಮನೆಗೆ ಸೀಮಿತ. ಆದರೆ, ನಮ್ಮ ಪ್ರಕಾರ, ಮಹಿಳೆಯರು ದೇಶವನ್ನೂ ಮುನ್ನಡೆಸಬಲ್ಲರು.
ಪ್ರಧಾನಿ ಮೋದಿ ಬಿಳಿ ಬಣ್ಣದವರಲ್ಲದೇ ಇರಬಹುದು. ಆದರೆ, ಅವರು ಚಿನ್ನದಂಥ ಹೃದಯ ಹೊಂದಿದ್ದಾರೆ. “ಕಾಲೇ ಹೇಂ ತೊ ಕ್ಯಾ ದಿಲ್‌ವಾಲೇ ಹೇಂ'(ಕಪ್ಪಾದರೇನು, ಹೃದಯವಂತರಲ್ಲವೇ) ಎಂಬ ಹಾಡು ಕೇಳಿದ್ದೀರಲ್ಲ, ಹಾಗೆ. ಮೇ 23ರಂದು ಇಟಾಲಿಯನ್‌ ಬಣ್ಣವೂ ಮಸುಕಾಗುತ್ತದೆ.
ಪ್ರಧಾನಿ ಮೋದಿ ಅವರನ್ನು “ಪ್ರಧಾನ ವಿಭಜಕ’ ಎಂದು ಟೈಮ್‌ ನಿಯತಕಾಲಿಕೆಯಲ್ಲಿ ಬರೆದ ಲೇಖಕ ಆತಿಷ್‌ ತಸೀರ್‌ ಪಾಕಿಸ್ತಾನದ ನಾಗರಿಕ. 2 ಸರ್ಜಿಕಲ್‌ ದಾಳಿ ನಡೆಸಿದ್ದಕ್ಕಾಗಿ ಪಾಕ್‌ನವರು ಮೊದಲೇ ಮೋದಿಯವರನ್ನು ದ್ವೇಷಿಸುತ್ತಾರೆ. ಪಾಕ್‌ನವರು ಹೇಗೆಂದು ಎಲ್ಲರಿಗೂ
ಗೊತ್ತಿದೆ.

ಜವಾಹರ ಲಾಲ್‌ ನೆಹರೂರಿಂದ ಹಿಡಿದು ಇಂದಿರಾ, ರಾಜೀವ್‌ಗಾಂಧಿ ಸೇರಿದಂತೆ ಈವರೆಗೂ ಕಾಂಗ್ರೆಸ್‌ ಬಡತನ ನಿರ್ಮೂಲನೆಯ ಹೆಸರಲ್ಲಿ ದೇಶದ ಜನರನ್ನು ಮೂರ್ಖ ರನ್ನಾಗಿಸುತ್ತಾ ಬಂದಿದೆ.
ರಾಜನಾಥ್‌ ಸಿಂಗ್‌, ಕೇಂದ್ರ ಸಚಿವ

ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವರ ಕಾಪ್ಟರ್‌, ವಾಹನಗ ಳನ್ನೂ ಆಯೋಗ ತಪಾಸಣೆ ಮಾಡ ಬೇಕು. ಝೆಡ್‌, ವೈ ಕೆಟಗರಿ ಭದ್ರತೆ ಪಡೆಯುತ್ತಿರುವವರೇ ವಾಹನಗಳಲ್ಲಿ ಹಣ ಸಾಗಾಟ ಮಾಡುತ್ತಿದ್ದಾರೆ.
ಮಮತಾ, ಪ.ಬಂಗಾಳ ಸಿಎಂ

ಔರಂಗಜೇಬ್‌ ಮಾದರಿಯಲ್ಲಿ ತನ್ನ ತಂದೆಯನ್ನೇ ಅಧಿಕಾರದಿಂದ ಕೆಳಗಿಳಿಸಿದ ವ್ಯಕ್ತಿ (ಅಖೀಲೇಶ್‌) ಈಗ ತನ್ನ ಬದ್ಧ ಎದುರಾಳಿ ಜೊತೆ ಸ್ನೇಹ ಹಸ್ತ ಚಾಚಿದ್ದಾನೆ. ಮೇ 23ರ ಬಳಿಕ ಅವರು ಮತ್ತೆ ಕಚ್ಚಾಡುವುದು ಖಚಿತ.
ಯೋಗಿ ಆದಿತ್ಯನಾಥ್‌, ಉ.ಪ್ರ. ಸಿಎಂ

ಸಿಖ್‌ ಹತ್ಯಾಕಾಂಡದಲ್ಲಿ ಸಾವಿ ರಾರು ಸಿಖ್ಬರ ಹತ್ಯೆ ನಡೆದಾಗ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅದನ್ನು ಸಮರ್ಥಿಸಿಕೊಂಡರು. ಈಗಲೂ ಕಾಂಗ್ರೆಸ್‌ ನಾಯಕರು ಅದರ ಸಮರ್ಥನೆಗೆ ನಿಂತಿದ್ದಾರೆ.
ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next