Advertisement

ಅಂದು Star ಚೆಲುವೆ ಕೈಹಿಡಿದಿದ್ದ ಈ ಛಾಯಾಗ್ರಾಹಕ ವಿವಾಹವನ್ನು 10 ವರ್ಷ ರಹಸ್ಯವಾಗಿಟ್ಟಿದ್ದ!

06:33 PM Jul 04, 2020 | Nagendra Trasi |

ಬಾಲಿವುಡ್ ನಲ್ಲಿ ಅಂದು ಮಧುಬಾಲಾ, ನರ್ಗೀಸ್, ಮಾಲಾ ಸಿನ್ನಾ, ವೈಜಯಂತಿ ಮಾಲಾ, ವಹೀದಾ ರೆಹಮಾನ್, ರೇಖಾ ಹೀಗೆ ಚೆಂದುಳ್ಳಿ ಚೆಲುವೆಯರ ದಂಡೆ ಇತ್ತು. ಈ ನಡುವೆ 1950-60ರ ದಶಕದಲ್ಲಿ ಪ್ರೇಕ್ಷಕರ ಮನಗೆದ್ದಾಕೆ ಖುರ್ಷಿದ್ ಅಖ್ತರ್ ಅಲಿಯಾಸ್ ಶ್ಯಾಮಾ. 1935ರಲ್ಲಿ ಲಾಹೋರ್ ನಲ್ಲಿ ಅಖ್ತರ್ ಜನಿಸಿದ್ದು. 1940ರ ಹೊತ್ತಿಗೆ ಇವರ ಕುಟುಂಬ ಬಾಂಬೆಗೆ ವಲಸೆ ಬಂದಿತ್ತು. ಖ್ಯಾತ ನಿರ್ದೇಶಕ ಗುರುದತ್ ಪಡುಕೋಣೆ ಅವರ ಆರ್ ಪಾರ್ (1954) ಸೇರಿದಂತೆ 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶ್ಯಾಮಾ ನಟಿಸಿ ಜನಪ್ರಿಯತೆ ಪಡೆದಿದ್ದರು.

Advertisement

ಕಿರಿಯ ವಯಸ್ಸಿನಲ್ಲೇ ಸಿನಿಮಾರಂಗಕ್ಕೆ ಎಂಟ್ರಿ!
1945ರಲ್ಲಿ ಬಾಲಿವುಡ್ ನಲ್ಲಿ ತೆರೆಕಂಡಿದ್ದ ಸೈಯದ್ ಶೌಕತ್ ಹುಸೈನ್ ರಿಜ್ವಿ ನಿರ್ದೇಶನದ “ಜೀನತ್” ಸಿನಿಮಾದಲ್ಲಿ ಶ್ಯಾಮಾ ನಟಿಸಿದ್ದು, ಆಗ ಈಕೆ ವಯಸ್ಸು ಕೇವಲ 10 ವರ್ಷ, 1947ರಲ್ಲಿ ಮೀರಾಬಾಯಿ ಸಿನಿಮಾದಲ್ಲಿ ತನ್ನ ಅದ್ಭುತ ಪ್ರತಿಭೆಯನ್ನು ತೋರ್ಪಡಿಸಿದ್ದರು. 1957ರಲ್ಲಿ ತೆರೆಕಂಡಿದ್ದ ಕ್ಲಾಸಿಕ್ ಚಿತ್ರ ಮಿರ್ಜಾ ಸಾಯಿಬನ್ ನಲ್ಲಿ ಶಮ್ಮಿ ಕಪೂರ್ ಜತೆ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು.

ಖುರ್ಷಿದ್ ಅಖ್ತರ್ ಹೆಸರು ಬದಲಾಯಿಸಿದ್ದು ನಿರ್ದೇಶಕ ವಿಜಯ್ ಭಟ್:
ಮೂಲತಃ ಮುಸ್ಲಿಂ ಸಮುದಾಯದಲ್ಲಿ ಜನಿಸಿದ್ದ ಖುರ್ಷಿದ್ ಅಖ್ತರ್ ಹೆಸರನ್ನು ಬಾಲಿವುಡ್ ನ ನಿರ್ದೇಶಕ ವಿಜಯ್ ಭಟ್ ಅವರು ಶ್ಯಾಮಾ ಎಂದು ಬದಲಾಯಿಸಿದ್ದರು. ಗುರುದತ್ ಅವರ ಆರ್ ಪಾರ್, ನಂತರ ಬರ್ಸಾತ್ ಕಿ ರಾತ್ ಸಿನಿಮಾದಲ್ಲಿನ ನಟನೆ ಮರೆಯಲು ಸಾಧ್ಯವಿಲ್ಲ. ಹೀಗೆ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಶ್ಯಾಮಾ 1950-60ರ ದಶಕದಲ್ಲಿ ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 1952ರಿಂದ 60ರವರೆಗೆ ಸುಮಾರು 80 ಸಿನಿಮಾಗಳಲ್ಲಿ ಅದು ಹೀರೋಯಿನ್ ಪಾತ್ರದಲ್ಲಿ. 1963ರಲ್ಲಿ ಶ್ಯಾಮಾ ನಟನೆಯ 18 ಸಿನಿಮಾಗಳು, 1964ರಲ್ಲಿ 17 ಚಿತ್ರ ತೆರೆಕಂಡಿದ್ದು ಈಕೆಯ ಜನಪ್ರಿಯತೆಯ ಉತ್ತುಂಗಕ್ಕೆ ಸಾಕ್ಷಿಯಾಗಿತ್ತು. 1957ರಲ್ಲಿ ಬಿಡುಗಡೆ ಕಂಡಿದ್ದ ಶಾರದಾ ಸಿನಿಮಾದಲ್ಲಿನ ನಟನೆಗಾಗಿ ಶ್ಯಾಮಾಗೆ ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿತ್ತು.

ಶ್ಯಾಮಾ ಸಂದರ್ಶನವೊಂದರಲ್ಲಿ ಹೇಳಿದ್ದ ಮಾತು: ನನಗೆ ನಟನೆ ಬಗ್ಗೆ ಯಾವತ್ತೂ ಹೆಚ್ಚಿನ ಕಲಿಕೆ ಬೇಕಾಗಿರಲಿಲ್ಲ. ನಾನು ತುಂಬಾ ವಿಶ್ವಾಸ ಹೊಂದಿದ್ದು, ಆ ಬಗ್ಗೆ ಹೆಚ್ಚು ಆಲೋಚನೆ ಮಾಡುವುದೂ ಇಲ್ಲ. ಯಾಕೆಂದರೆ ಸ್ಟಾರ್ ಗಳು ಹುಟ್ಟುತ್ತಾರೆ ವಿನಃ ತಯಾರಿಸುವುದಲ್ಲ ಎಂಬುದಾಗಿ ಹೇಳಿದ್ದರು!

Advertisement

ಅಂದಿನ ಖ್ಯಾತ ಹಾಸ್ಯ ನಟ ಜಾನಿ ವಾಕರ್ ಜತೆ ಛೂ ಮಂತರ್, ಆರ್ ಪಾರ್, ಮುಸಾಫಿರ್ ಖನ್ನಾ, ಖೋಟಾ ಪೈಸಾ, ಖೇಲ್ ಖಿಲಾರಿ ಕಾ ಹೀಗೆ ಹಲವು ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದರು. 1970, 1980ರ ದಶಕದಲ್ಲಿ ರಾಜೇಶ್ ಖನ್ನಾ ಜತೆ ಮಾಸ್ಟರ್ ಜೀ, ಅಜನಬೀ, ಸಾವನ್ , ದಿಲ್ ದಿಯಾ ದರ್ದ್ ಲಿಯಾ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಈ ಚೆಲುವೆಯ ಕೈಹಿಡಿದಿದ್ದು ಛಾಯಾಗ್ರಾಹಕ, ಅದೂ ಹತ್ತು ವರ್ಷ ರಹಸ್ಯವಾಗಿತ್ತು!
ನಿರಾಭರಣ ಸುಂದರಿಯಾಗಿದ್ದ ಶ್ಯಾಮಾಳನ್ನು ವಿವಾಹವಾಗಲು ಅಂದು ಹಲವರು ತುದಿಗಾಲಲ್ಲಿ ನಿಂತಿದ್ದರು. ಆದರೆ ಪ್ರೇಮ ಕುರುಡು…ಅದು ನಿಷ್ಕಲ್ಮಶವಾಗಿದ್ದು ಎಂಬುದಕ್ಕೆ ಶ್ಯಾಮಾ ವಿವಾಹ ಒಂದು ಉದಾಹರಣೆ. 1953ರಲ್ಲಿ ಶ್ಯಾಮಾ ಅವರನ್ನು ಫಾಲಿ ಮಿಸ್ಟ್ರಿ ಗುಟ್ಟಾಗಿ ವಿವಾಹವಾಗಿದ್ದರು. ಫಾಲಿ 1940-50ರ ದಶಕದ ಪ್ರಸಿದ್ಧ ಸಿನಿಮಾ ಛಾಯಾಗ್ರಾಹಕರಾಗಿದ್ದರು. ಫಾಲಿ ಪಾರ್ಸಿ ಜನಾಂಗದವರು. ಆಕೆಯನ್ನು ತಾನು ಮದುವೆಯಾಗಿದ್ದೇನೆ ಎಂಬ ವಿಷಯವನ್ನು ಬರೋಬ್ಬರಿ ಹತ್ತು ವರ್ಷಗಳ ಕಾಲ ರಹಸ್ಯವಾಗಿಟ್ಟಿದ್ದರು. ಅದಕ್ಕೆ ಕಾರಣ ಒಂದು ವೇಳೆ ಆಕೆ ಮದುವೆಯಾಗಿದೆ ಎಂಬ ವಿಷಯ ಬಹಿರಂಗವಾದರೆ ಶ್ಯಾಮಾಳ ಸಿನಿ ಬದುಕಿಗೆ ತೊಂದರೆಯಾಗುತ್ತದೆ ಎಂಬ ಕಳಕಳಿಯಾಗಿತ್ತು. ಆ ಕಾಲದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ಶ್ಯಾಮಾ ಎಂಬ ಸ್ಟಾರ್ ನಟಿಯ ವಿವಾಹ ಮುಚ್ಚಿಟ್ಟಿದ್ದು, ಅದು ಬಹಿರಂಗಗೊಂಡಿದ್ದು, ದಂಪತಿಗೆ ಮೊದಲ ಮಗು ಜನಿಸಿದಾಗ. ಶ್ಯಾಮಾ, ಫಾಲಿ ದಂಪತಿಗೆ ಇಬ್ಬರು ಗಂಡು ಹಾಗೂ ಒಬ್ಬಳು ಮಗಳು ಜನಿಸಿದ್ದಳು.

(ಎಡಗಡೆ ಮೊದಲ ವ್ಯಕ್ತಿ ಫಾಲಿ ಮಿಸ್ಟ್ರಿ, ಮೂರನೇಯವರು ದೇವ್ ಆನಂದ್)

1979ರಲ್ಲಿ ಪತಿ ಫಾಲಿ ಮಿಸ್ಟ್ರಿ ನಿಧನರಾಗಿದ್ದರು. ಆ ಬಳಿಕವೂ ಶ್ಯಾಮಾ ಮುಂಬೈನಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದು ಸಿನಿಮಾದಲ್ಲಿ ನಟಿಸಿದ್ದರು. ಶ್ಯಾಮಾ ನಿಕಟ ಸ್ನೇಹಿತರಾಗಿದ್ದವರು ಅಮೀತಾ ಹಾಗೂ ಜಾನಿ ವಾಕರ್. 82ನೇ ವಯಸ್ಸಿಗೆ ಶ್ಯಾಮಾ 2017ರ ನವೆಂಬರ್ 14ರಂದು ಇಹಲೋಕ ತ್ಯಜಿಸಿದ್ದರು. ಆದರೆ ಈಕೆ ನಟಿಸಿದ್ದ ಸಿನಿಮಾಗಳಲ್ಲಿ ಇಂದಿಗೂ ಜೀವಂತವಾಗಿದ್ದಾರೆ…ಅದೇ ಶ್ಯಾಮಾ ಎಂಬ ಸ್ಟಾರ್ ನಟಿಯ ಹೆಗ್ಗಳಿಕೆ…

Advertisement

Udayavani is now on Telegram. Click here to join our channel and stay updated with the latest news.

Next