ಎರಡು ತಿಂಗಳ ಲಾಕ್‌ಡೌನ್ ಮುಗಿದು, ಮೊನ್ನೆಯಿಂದ ಆಫೀಸ್ ಶುರುವಾಯಿತು. ಮನೆಯೊಳಗಿದ್ದೂ ಇದ್ದೂ ಬೇಜಾರಾಗಿದ್ದ ನಾನು ಸ್ವಲ್ಪ ಖುಷಿ, ಜಾಸ್ತಿ ಆತಂಕದಿಂದ ಕಚೇರಿಗೆ ಬಂದೆ. ಬಹಳ ದಿನಗಳ ನಂತರ ಸಹೋದ್ಯೋಗಿಗಳನ್ನು ಭೇಟಿಯಾದ ಖುಷಿ ಎಲ್ಲರ ಕಣ್ಣುಗಳಲ್ಲಿ ಕಾಣುತ್ತಿತ್ತು. ನನ್ನನ್ನು ನೋಡಿ ದವರೆಲ್ಲ, “ಎರಡೇ ತಿಂಗಳಲ್ಲಿ ಎಷ್ಟೊಂದು ದಪ್ಪಗಾಗಿ ಬಿಟ್ಟಿದೀಯ…’ ಅಂತ ಹುಬ್ಬೇರಿಸಿದರು.
ಕೊಂಚ ಅವಮಾನವಾದರೂ ಪೆಚ್ಚು ಪೆಚ್ಚಾಗಿ ನಗದೆ ವಿಧಿ ಇರಲಿಲ್ಲ. ನನ್ನ ಸಹೋದ್ಯೋಗಿಗಳಲ್ಲಿ ಬಹುತೇಕರು ವಿವಾಹಿತೆ ಯರು. ಮಕ್ಕಳಿರುವವರು. ಲಾಕ್‌ಡೌನ್ ಸಮಯದಲ್ಲಿ ಗಂಡ- ಮಕ್ಕಳಿಗೆ ಬೇಯಿಸಿ, ಬಡಿಸಿ ಸಣ್ಣಗಾಗಿಬಿಟ್ಟಿದ್ದರು. ನನ್ನದೇ ವಯಸ್ಸಿನ ಅವಿವಾಹಿತ ಹುಡುಗಿಯರಿಬ್ಬರು, ಮನೆಯಲ್ಲೇ ಯೋಗ ಮಾಡಿ ಮೊದಲಿನಂತೆಯೇ ಕಾಣುತ್ತಿದ್ದರು. ಆದರೆ, ನಾನು ಮಾತ್ರ ಊದಿದ ಪೂರಿಯಂತಾಗಿದ್ದೆ.
ಅವತ್ತು ಮಧ್ಯಾಹ್ನ ಊಟಕ್ಕೆ ಕುಳಿತಾಗ ಎಲ್ಲರೂ ತಂತಮ್ಮ ಲಾಕ್‌ಡೌನ್ ಡೈರಿಯನ್ನು ಬಿಚ್ಚಿಟ್ಟರು. ಮಹಿಳೆಯರೆಲ್ಲ ಅಡುಗೆ ಮಾಡುತ್ತಲೇ ಕಾಲ ಕಳೆದ ಬಗ್ಗೆ ಬೇಸರದಿಂದ ಹೇಳಿದರೆ, ಹುಡುಗರಿಬ್ಬರು ಸಿಕ್ಕ ಸಮಯವನ್ನು ಬಾಡಿ ಬಿಲ್ಡಿಂಗ್‌ಗೆ ಬಳಸಿದ್ದು, ಅವರನ್ನು ನೋಡಿದರೇ ತಿಳಿಯುತ್ತಿತ್ತು. ಒಬ್ಬ ಗೆಳತಿ, ವರ್ಕ್ ಫ್ರಮ್ ಹೋಂ ಮಧ್ಯೆ ಸಮಯ ಮಾಡಿಕೊಂಡು ಗಿಟಾರ್ ಕಲಿತೆ ಅಂತ ಹೇಳಿಕೊಂಡಳು.
ನನ್ನ ಸರದಿ ಬಂದಾಗ, ಹೇಳಲು ಏನೂ ಇರಲೇ ಇಲ್ಲ. ಯಾಕಂದ್ರೆ, ನಾನು ಲಾಕ್‌ಡೌನ್ ಸಮಯದಲ್ಲಿ ಏನೂ ಮಾಡಲೇ ಇಲ್ಲ. ಊರಿಗೆ ಹೋಗಿ, ಅಮ್ಮನ ಕೈ ಅಡುಗೆಯನ್ನು ಚೆನ್ನಾಗಿ ಮೆಂದು, ಸಮಯ ಸಿಕ್ಕಾಗೆಲ್ಲ ಸಿನಿಮಾ ನೋಡುತ್ತಾ (ಜೊತೆಗೆ ಏನಾದರೂ ತಿನ್ನುತ್ತಾ) ತೂಕ ಹೆಚ್ಚಿಸಿಕೊಂಡಿದ್ದೆ. ಬೆಂಗಳೂರಿನ ಯೋಗ ತರಗತಿಯಲ್ಲಿ ಕಲಿತಿದ್ದನ್ನು, ಮನೆಯಲ್ಲಿ ಸ್ವಲ್ಪವಾದರೂ ನೆನಪಿಸಿಕೊಳ್ಳ ಬಹುದಿತ್ತು.
ಆದರೆ, ಜನ್ಮಕ್ಕಂಟಿದ ಸೋಮಾರಿ ಬುದ್ಧಿ ಎಲ್ಲಿ ಬಿಡಬೇಕು? ಹೀಗೆ ನನ್ನನ್ನು ನಾನು ಶಪಿಸಿಕೊಳ್ಳುತ್ತಿರುವಾಗ, “ಅದಿತಿ ಏನು ಮಾಡಿದಳ್ಳೋ ಇಲ್ಲವೋ, ದಪ್ಪ ಅಂತೂ ಆಗಿದ್ದಾಳೆ’ ಅಂತ ಕಿಸಕ್ಕನೆ ನಕ್ಕ ಬಾಡಿ ಬಿಲ್ದರ್ ಮಿತ್ರ. ಲಾಕ್‌ಡೌನ್ ಸಮಯ ದಲ್ಲಂತೂ ಏನೂ ಮಾಡಿಲ್ಲ, ಈಗಲಾದರೂ ಏನಾದರೂ ಮಾಡಬೇಕು, ಏರಿಸಿಕೊಂಡ ಈ ತೂಕಕ್ಕೆ!
* ಆರ್. ಅದಿತಿ