ಬೆಂಗಳೂರು: ನನಗೆ ಸಿಬಿಐನವರು ನ. 23 ರಂದು ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದ್ದರು. ಆದರೇ ಮಸ್ಕಿಗೆ ತೆರಳಿದ್ದರಿಂದ ಸಾಧ್ಯವಾಗಿರಲಿಲ್ಲ. ಮಾತ್ರವಲ್ಲದೆ ನಂತರ ಹಾಜರಾಗುವುದಾಗಿ ಮನವಿ ಮಾಡಿದ್ದೆ. ಅದರಂತೆ ಈಗ ಅವರು ನೀಡಿದ ಸಮಯದಲ್ಲೇ ವಿಚಾರಣೆಗೆ ಹಾಜರಾಗುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಅಹಮದ್ ಪಟೇಲ್ ಅವರ ನಿಧನ ನಮಗೆ ನೋವು ತಂದಿದೆ. ಬೆಳಗ್ಗೆ ಹೈದರಾಬಾದ್ ನಲ್ಲಿದ್ದಾಗ ಅವರು ವಿಧಿವಶರಾದ ಸುದ್ದಿ ತಿಳಿಯಿತು. ಪಕ್ಷ ನಿಷ್ಟರು, ಉತ್ತಮ ಮಾರ್ಗದರ್ಶಕರಾಗಿದ್ದರು. ಅವರು ಯಾವಾಗ ಬೇಕಾದರು ಅಧಿಕಾರ ಪಡೆಯಬಹುದಿತ್ತು. ಆದರೇ ಎಂದೂ ಮಂತ್ರಿ ಸ್ಥಾನ ಬಯಸಲಿಲ್ಲ ಪಕ್ಷ ಸಂಘಟನೆ ಮಾಡಿಕೊಂಡೇ ಬಂದವರು ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು.
ನನ್ನ ಮೇಲೆ ನಂಬಿಕೆ ಇಟ್ಟಿದ್ದರು. ಕಷ್ಟದ ದಿನಗಳಲ್ಲಿ ನನ್ನ ಪರ ನಿಂತಿದ್ದರು. ಚುನಾವಣೆಯಲ್ಲಿ ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಅವರ ಶಾಸಕರನ್ನ ನನ್ನ ಜೊತೆ ಕಳಿಸಿದ್ದರು. ವಾರದ ಹಿಂದೆ ಅವರ ಜೊತೆ ನಾನು ದೂರವಾಣಿಯ ಮೂಲಕ ಮಾತನಾಡಿದ್ದೆ. ಅವರ ಮಾರ್ಗದರ್ಶನ, ನೀಡಿದ ಧೈರ್ಯ ನಮಗೆ ಶಕ್ತಿ. ನನ್ನಂತಹ ಸಾವಿರಾರು ಮಂದಿಯನ್ನ ಗುರುತಿಸಿದ ಅವರ ನಿಧನ ತುಂಬಲಾರದ ನಷ್ಟ. ಅವರ ಅಂತ್ಯಕ್ರಿಯೆಗೆ ನಾನು ತೆರಳುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ನಲ್ಲಿ ನಾನು ಸಿಎಂ ಆಗಲು ಅಹಮದ್ ಪಟೇಲ್ ಪಾತ್ರ ದೊಡ್ಡದು: ಸಿದ್ದರಾಮಯ್ಯ
ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಕೆಶಿ, ಸಿಬಿಐಗೆ ಎಲ್ಲಾ ಸಹಕಾರ ಕೊಡುತ್ತಿದ್ದೇನೆ. ಸಹಕಾರ ಕೊಡದೆ ಓಡಿಹೋಗುವವನಲ್ಲ. ಸಿಬಿಐ ಅಧಿಕಾರಿಗಳು ಅವರ ಡ್ಯೂಟಿ ಅವರು ಮಾಡುತ್ತಾರೆ. 48 ದಿನ ಅವರ ಮ್ಯಾನ್ಯುವಲ್ ಓದಿದ್ದೇನೆ. ವಿಚಾರಣೆ ಹೇಗೆ ? ಏನು ? ಅನ್ನೋದನ್ನ ಅರ್ಥೈಸಿಕೊಂಡಿದ್ದೇನೆ. ನಾನೊಬ್ಬನೇನಾ ಆಸ್ತಿ ಮಾಡಿರೋನು ?
ನನ್ನ ಮೇಲೆ ಯಾವುದಾದರೂ ಆರೋಪ ಇದೆಯಾ ? ಲಂಚ ಪಡೆದಿದ್ದೇನಾ ? ಐದು ವರ್ಷ ಪವರ್ ಮಿನಿಸ್ಟರ್ ಆಗಿದ್ದೆ. ಆಗೇನಾದರೂ ಅಧಿಕಾರ ದುರ್ಬಳಕೆ ಮಾಡಿದ್ದೇನಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ ಡಿಕೆಶಿ, ಕಾರ್ಯಕರ್ತರು ಯಾರು ಸಿಬಿಐ ಕಚೇರಿಗೆ ಬರಬಾರದು. ಯಾರೂ ಆತಂಕ ಪಡುವುದೂ ಬೇಡ. ನಾನು ಪಕ್ಷ, ನಿಮಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿಲ್ಲ ಎಂದರು.
ಇದನ್ನೂ ಓದಿ: ಗೋವಾದಲ್ಲಿ ಸೋನಿಯಾ ಗಾಂಧಿ ಸೈಕ್ಲಿಂಗ್: ವಿಡಿಯೋ ವೈರಲ್