Advertisement

ಸರ್ಕಾರದ ತಪ್ಪುಗಳನ್ನು ಏಕಾಂಗಿಯಾಗಿ ಪ್ರಶ್ನೆ ಮಾಡುವುದು ನಾನೊಬ್ಬನೆ: ಕುಮಾರಸ್ವಾಮಿ

01:41 PM Nov 21, 2023 | Team Udayavani |

ರಾಮನಗರ: ನನ್ನ ವಿರುದ್ಧ ಪೋಸ್ಟರ್ ಅಂಟಿಸಿಕೊಳ್ಳಲಿ, ಯಾರು ಬೇಡ ಎನ್ನುತ್ತಾರೆ. ನನಗೆ ಯಾರೂ ಏನೂ ಮಾಡಲಾಗದು. ಸರ್ಕಾರದ ತಪ್ಪುಗಳನ್ನು ಏಕಾಂಗಿಯಾಗಿ ಪ್ರಶ್ನೆ ಮಾಡುವುದು ಕುಮಾರಸ್ವಾಮಿ ಒಬ್ಬನೇ. ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಅಕ್ರಮ ಸಂಪತ್ತು, ವರ್ಗಾವಣೆ ದಂಧೆ ಬಗ್ಗೆ ಧ್ವನಿ ಎತ್ತಿದ್ದು ನಾನು. ನಾನು ಇಲ್ಲಿವರೆಗೂ ಹೇಳಿದ್ದಕ್ಕೆ ಒಂದಕ್ಕೂ ಸರ್ಕಾರ ಉತ್ತರ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Advertisement

ದಾಸೇಗೌಡನ ದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ಇಲ್ಲಿ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆಯೇ ಇಲ್ಲ. ಮಕ್ಕಳ ಭವಿಷ್ಯದ ಬಸ್ಸು ಎಲ್ಲಿದೆ. ಇದು ಈ ಸರ್ಕಾರ ನುಡಿದಂತೆ ನಡೆದಿರುವುದಾ? ಮಕ್ಕಳು ಜೆಸಿಬಿಯಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ಇವರು ನಿತ್ಯ ಕಲರ್ ಫುಲ್ ಫೋಟೊ ಪೋಸ್ ಕೊಡುತ್ತಾರೆ. ಸರ್ಕಾರದ ಅಕ್ರಮಗಳ ಪ್ರಶ್ನೆ ಮಾಡಿದರೆ ನನ್ನ ವಿರುದ್ಧ ಪೋಸ್ಟರ್ ಹಾಕುತ್ತಾರೆ ಎಂದು ಕಿಡಿಕಾರಿದರು.

ಇಂದು ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆಗಮನ ವಿಚಾರಕ್ಕೆ ಮಾತನಾಡಿದ ಅವರು, ಜನರ ಕಷ್ಟ ಸುಖ ನೋಡಲು ಬರಲಿಲ್ಲ. ಈಗ ಜನರ ಹಣ ಲೂಟಿ ಮಾಡುವ ನಿಗಮ ಮಂಡಳಿ ನೇಮಕ ಮಾಡಲು ಬರ್ತಿದ್ದಾರಾ.? ನಿಗಮ ಮಂಡಳಿ ರಚನೆ ಮಾಡಿ ಜನರ ಕಷ್ಟ ಕೇಳುತ್ತೀರಾ? ಅದು ಯಾವುದೇ ಸಿಎಂ ಕ್ಷೇತ್ರದಲ್ಲಿ ಶಾಲಾ ಕಟ್ಟಡ ಕಟ್ಟಲು ದುಡ್ಡಿಲ್ಲ ಎಂದು ಸಿಎಸ್ಆರ್ ಫಂಡ್ ಕೇಳುತ್ತಿದ್ದೀರಾ? ಸಿಎಂ ಕ್ಷೇತ್ರದಲ್ಲಿ 2.5 ಲಕ್ಷಕ್ಕೆ ಯಾವುದೋ ಖಾಸಗಿ ಕಂಪನಿ ವಿರುದ್ಧ ಅರ್ಜಿ ಹಿಡಿದುಕೊಂಡು ನಿಂತಿದ್ದಾರೆ. ಸಿಎಂ ಮನೆಗೆ ನವೀಕರಣ ಮಾಡಲು ಕೋಟ್ಯಾಂತರ ಹಣ ಖರ್ಚು ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಎಚ್ ಡಿಕೆ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಎಂಬ ಡಿಕೆಶಿ ಹೇಳಿಕೆಗೆ ಉತ್ತರಿಸಿ, ಕೊಳ್ಳೆ ಹೊಡೆದಾಗಿದೆ, ಅವರ ಜೀವನ ಏನೆಂದು ಗೊತ್ತಿದೆ. ದೇಶದ ವ್ಯವಸ್ಥೆಯಲ್ಲಿ ಕಳ್ಳರು ಒಂದೇ, ಸುಳ್ಳರು ಒಂದೇ.! ಭಗವಂತ ಇದ್ದಾನೆ, ಅಂತಿಮವಾಗಿ ಎಲ್ಲಾ ತೀರ್ಮಾನ ಮಾಡುತ್ತಾನೆ. ಈ ಸಮಾಜದಲ್ಲಿ ಹಣದ ಮದ ಇದ್ದವರು ಎಲ್ಲವನ್ನೂ ಕೊಂಡುಕೊಳ್ಳುತ್ತೇನೆ ಎಂದುಕೊಂಡಿದ್ದಾರೆ. ಎಲ್ಲದಕ್ಕೂ ಒಂದು ಅಂತಿಮ ಇದ್ದೇ ಇದೆ ಎಂದರು.

ಇದನ್ನೂ ಓದಿ:Vijayapura; ಸರ್ಕಾರ ಪತನದ ಹಗಲುಗನಸು ಕಾಣುವವರಿಗೆ ಬೇಡ ಎನ್ನಲಾದೀತೆ: ಡಾ.ಪರಮೇಶ್ವರ್

Advertisement

ರೈತರಿಗೆ ಬರ ಪರಿಹಾರ ಬಿಡುಗಡೆಯಾಗದ ವಿಚಾರವಾಗಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ 800 ಕೋಟಿ ಇಟ್ಟಿದ್ದೇವೆ ಎನ್ನುತ್ತಾರೆ. ರೈತರಿಗೆ ಪರಿಹಾರ ನೀಡದೆ ಯಾವ ಉದ್ದೇಶಕ್ಕೆ ಹಣ ಇಟ್ಟಿದ್ದೀರಿ. ಸರ್ಕಾರದ ಮಾಹಿತಿ ಪ್ರಕಾರವೇ 33 ಸಾವಿರ ಕೋಟಿ ರೈತರ ಬೆಳೆ ನಷ್ಟವಾಗಿದೆ. ದೀಪಾವಳಿ ಕೆಲವು ಕಡೆ ಮಳೆಯಾಗಿದೆ. ಆದರೆ ಬಹುತೇಕ ಕಡೆ ಮೇವಿನ ಕೊರತೆಯಿದೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಫಸಲು ಹಾಳಾಗಿದೆ. ಹಿಂದೆ ಬೇರೆ ದೇಶಗಳಿಗೆ ಆಹಾರ ಪದಾರ್ಥ ರಫ್ತು ಮಾಡುತ್ತಿದ್ದೆವು. ಈಗ ನಮ್ಮಲ್ಲೇ ಆಹಾರದ ಕೊರತೆ ಉಂಟಾಗುತ್ತಿದೆ. ಫಸಲು ಭೀಮಾ ಯೋಜನೆ ಅಡಿ ರೈತರಿಗೆ ಪರಿಹಾರ ಕೊಡುವುದಕ್ಕಿಂತ ಹೆಚ್ಚಾಗಿ ಖಾಸಗಿ ಕಂಪೆನಿಗಳಿಗೆ ಹೆಚ್ಚಿನ ಲಾಭವಾಗುತ್ತಿದೆ. ಬೆಳೆ ಪರಿಹಾರದ ನಷ್ಟವನ್ನು ಇಲ್ಲಿವರೆಗೂ ಸರ್ಕಾರ ಕೊಟ್ಟಿಲ್ಲ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next