ಬೆಂಗಳೂರು: ಮುಂದಿನ ಬಾರಿಯೂ ರಾಜ್ಯಕ್ಕೆ ನಾನೇ ಮುಖ್ಯಮಂತ್ರಿ. ಇದರಲ್ಲಿ ಯಾವುದೇ ಅನುಮಾನ ಬೇಡ’- ಇದು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ಪಷ್ಟೋಕ್ತಿ. ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ಈಗಲೇ ಘೋಷಿಸುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ, ಸಿದ್ದರಾಮಯ್ಯನವರ ಈ ಬಹಿರಂಗ ಹೇಳಿಕೆ ರಾಜಕೀಯವಾಗಿ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಗೆಲುವಿನ ನಂತರ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಉತ್ಸಾಹಭರಿತ ಚಟುವಟಿಕೆ ಆರಂಭವಾಗಿದ್ದು, ಮುಂದಿನ ಚುನಾವಣೆಗೆ ಯಾರು ನಾಯಕತ್ವ ವಹಿಸಬೇಕೆಂಬ ಚರ್ಚೆ ಬಿರುಸುಗೊಂಡಿದೆ. ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಬೇಕೆಂಬ ಹಲವು ನಾಯಕರ ಹೇಳಿಕೆಗಳ ನಡುವೆ, ಸಿದ್ದರಾಮಯ್ಯ ಅವರೇ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂದು ಮಂಗಳವಾರವಷ್ಟೇ ದಿಗ್ವಿಜಯ ಸಿಂಗ್ ಹೇಳಿದ್ದರು. ಆದರೆ, ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ, ಬುಧವಾರ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ, “ಮುಂದಿನ ಬಾರಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ’ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡುತ್ತ, 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆಯನ್ನು 2 ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಸಭಿಕರ ಸಾಲಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಸರ್ಕಾರದ ಅವಧಿ ಇರುವುದು ಇನ್ನೊಂದೇ ವರ್ಷ ಅಲ್ವಾ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಹೌದಮ್ಮ, ನಮ್ಮ ಸರ್ಕಾರದ ಅವಧಿ ಇನ್ನು ಒಂದು ವರ್ಷ ಇದೆ. ಆದರೆ, ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಬರುತ್ತದೆ, ಆಗ ನಾನೇ ಚೀಫ್ ಮಿನಿಸ್ಟರ್ ಇರ್ತಿನಿ, ಅದಕ್ಯಾಕೆ ಅನುಮಾನ ಪಡ್ತಿಯಮ್ಮಾ’ ಎಂದರು.
ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಲ್ಲ ಎಂದು ನಾನು ಎಷ್ಟೇ ಹೇಳಿದರೂ, ಇಲ್ಲ, ಈ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ಬಿಜೆಪಿಯವರು ಪದೇ ಪದೇ ಹೇಳಿದರು. ಈಗ ಉಪಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ಬಿಜೆಪಿಯವರು ಹೇಳಿದಂತೆ ಇದು ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದ್ದು, ಅದರಂತೆ ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ನಾನು ಅಹಿಂದಕ್ಕಷ್ಟೇ ಸಿಮೀತ ಅಲ್ಲ: ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯ ಅಹಿಂದ ಪರ ಎಂದು ಕೆಲವರು ಟೀಕೆ ಮಾಡುತ್ತಾರೆ. ಆದರೆ, ನಾನು ಅಹಿಂದ ಪರ ಎಂದು ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ಅಥವಾ ಮುಜುಗರಪಟ್ಟುಕೊಳ್ಳುವುದಿಲ್ಲ. ಏಕೆಂದರೆ, ನಮ್ಮ ಸಂವಿಧಾನ ಹೇಳಿದ್ದು, ಬಸವಣ್ಣ ಮತ್ತು ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದು, ಅದನ್ನೇ. ಹಾಗಂತ ನಾನು ಅಹಿಂದ ವರ್ಗಕ್ಕಷ್ಟೇ ಸೀಮಿತ ಅಲ್ಲ. ಎಲ್ಲ ಜಾತಿಯ ಬಡವರ ಪರ ನಾನು ಮತ್ತು ನಮ್ಮ ಸರ್ಕಾರ ಇದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಶೂಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ, ಮೈತ್ರಿ, ಮನಸ್ವಿನಿ ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದು ಕೇವಲ ಅಹಿಂದ ವರ್ಗಕ್ಕಷ್ಟೇ ಅಲ್ಲ. ಎಲ್ಲ ಜಾತಿಯ ಬಡವರನ್ನು ಗಮನದಲ್ಲಿಟ್ಟುಕೊಂಡು ಅನುಷ್ಟಾನಕ್ಕೆ ತರಲಾಗಿದೆ ಎಂದರು.
“
ನಮಗೆ ಗುಜರಾತ್ ಮಾದರಿ ಬೇಕಿಲ್ಲ, ಉತ್ತರ ಪ್ರದೇಶ ನಮಗೆ ಮಾದರಿ ಅಲ್ಲ. ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯೇ ನಮಗೆ ಮಾದರಿ. ರಾಜ್ಯದ ಸರ್ವತೋಮುಖ ಬೆಳವಣಿಗೆ ಮಾದರಿ ಇಟ್ಟುಕೊಂಡು ನಾವು ಚುನಾವಣೆ ಎದುರಿಸುತ್ತೇವೆ’.
– ಸಿದ್ದರಾಮಯ್ಯ, ಮುಖ್ಯಮಂತ್ರಿ.