ಬೆಂಗಳೂರು: ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಜೆಡಿಎಸ್‌ಗೆ ಮತ ನೀಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮನವಿ ಮಾಡಿದ್ದಾರೆ.
ಗುರುವಾರ ಮಹಾಲಕ್ಷ್ಮಿ ಲೇ ಔಟ್‌ನ ಶನೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ. ನಾಶಿ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ತಿಳಿದುಕೊಳ್ಳಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಈ ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಹಣ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಗೋಪಾಲಯ್ಯ ಬಹಿರಂಗ ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು.
ಗೋಪಾಲಯ್ಯ ಅವರ ಪತ್ನಿ ಉಪ ಮೇಯರ್ ಆಗಿದ್ದಾಗ ಎಷ್ಟು ಆನುದಾನ ಖರ್ಚು ಮಾಡಿದ್ದಾರೆ. ಅವರು ಪಡೆದುಕೊಂಡ ಅನುದಾನ ನಿಜವಾಗಿಯೂ ವೆಚ್ಚ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ ಎಂದು ಆರೋಪ ಮಾಡುತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇವಸ್ಥಾನಕ್ಕೆ ಬಂದು ಚರ್ಚೆ ಮಾಡಲಿ. ಎಷ್ಟು ಹಣ ಬಂತು, ಎಲ್ಲಿ ಹೋಯಿತು ಎಂಬುದು ಹೇಳಲಿ ಎಂದು ಸವಾಲು ಹಾಕಿದರು.
ಈ ಕ್ಷೇತ್ರದ ಸಮಸ್ಯೆ ಎದುರಿಸಲು ನಮ್ಮ ಪಕ್ಷದ ಮುಖಂಡರ ಜತೆ ಕಣಕ್ಕಿಳಿದಿದ್ದೇನೆ ಎಂದು ಹೇಳಿದರು.ಮಹಾರಾಷ್ಟ್ರ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಬಿಜೆಪಿಗೆ ಕಪಾಳಮೋಕ್ಷ. ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಹೇಳಿದರು. ಜಫ್ರುಲ್ಲಾಖಾನ್, ಆರ್.ಪ್ರಕಾಶ್ ಸೇರಿ ಹಲವು ಮುಖಂಡರು ಹಾಜರಿದ್ದರು.