ನಾವು ಐದಾರು ಹುಡುಗೀರು ಬೆಂಗಳೂರಿನ ಪಿಜಿಯಲ್ಲಿ “ಲಾಕ್’ ಆಗಿಬಿಟ್ಟಿದ್ದೆವು. ಪಿಜಿ ಓನರ್, ತುಂಬಾ ಸ್ಟ್ರಿಕ್ಟು. “ಊಟ- ತಿಂಡಿ ಕೊಡ್ತೀವಿ. ಹೊರಗೆಲ್ಲೂ ಹೋಗೋ ಹಾಗಿಲ್ಲ’ ಅಂತ ಕಟ್ಟುನಿಟ್ಟಾಗಿ ಹೇಳಿ, ಗೇಟ್ ಬಂದ್ ಮಾಡಿ ಬಿಟ್ಟರು. ಬೇರೆಯವರಂತೆ, ಹಾಲು- ತರಕಾರಿ ನೆಪ ಹೇಳಿ ಹೊರಗೆ ಹೋಗುವ ಅವಕಾಶವೂ ನಮಗಿರಲಿಲ್ಲ. ಐವತ್ತು ದಿನ ಒಳಗೇ ಇದ್ದು, ಒಂಥರಾ ಹುಚ್ಚು ಹಿಡಿದಂತೆ ಆಗಿತ್ತು.
ದಿನಾ ಸಂಜೆ, ಪಿಜಿಯಲ್ಲಿ ಕೊಡುವ ಕಲಗಚ್ಚಿನಂಥ ಕಾಫಿ ಕುಡಿಯುತ್ತಾ, “ಲಾಕ್ ಡೌನ್ ಪೆ ಚರ್ಚೆ’ ನಡೆಸುತ್ತಿದ್ದೆವು. ಲಾಕ್‌ಡೌನ್ ಮುಗಿದ ಮೇಲೆ, ಮೊತ್ತ ಮೊದಲು ಮಾಡುವ ಕೆಲಸ ಏನು ಎಂಬುದು ಚರ್ಚೆಯ ವಿಷಯ. ಪ್ರತಿದಿನ ಬಾಯ್‌ಫ್ರೆಂಡ್‌ನ ಮೀಟ್ ಮಾಡುತ್ತಿದ್ದ ಗೆಳತಿಯೊಬ್ಬಳು, ನಾನಂತೂ ಅವನನ್ನು ಭೇಟಿಮಾಡ್ತಿನಿ, ಅಂದಳು ನಾಚಿಕೆಯಿಂದ. “ವಿರಹಾ, ನೂರು ನೂರು ತರಹ…’ ಅಂತ ರೇಗಿಸಿದಾಗ, ಅವಳನ್ನು ನೋಡಬೇಕಿತ್ತು ನೀವು!
ಇನ್ನೊಬ್ಬಳು- “ಮೊದಲು ಹೋಗಿ ಐ ಬ್ರೋ, ಅಪ್ಪರ್ ಲಿಸ್ಟ್ ಮಾಡಿಸ್ಕೊತೀನಿ. ಒಳ್ಳೇ ಗಂಡಸರ ಹಾಗೆ ಮೀಸೆ ಬಂದಿದೆ’ ಅಂತ ಗೊಣಗಿದಳು. “ನಾನಂತೂ ಮನೆಗೆ ಹೋಗ್ತಿನಿ. ಅಪ್ಪ- ಅಮ್ಮ ತುಂಬಾ ಹೆದರಿಕೊಂಡಿದ್ದಾರೆ’ ಅಂದಳು ನನ್ನ ರೂಮ್‌ಮೇಟ…. “ಅಂಗಡಿಗೆ ಹೋಗಿ ಒಂದು ಡಝನ್ ಮಾಸ್ಕ್, ಸ್ಯಾನಿಟೈಝೆರ್ ತಗೋತೀನಿ. ಆಫೀಸ್‌ಗೆ ಬನ್ನಿ ಅಂದುಬಿಟ್ಟರೆ, ಹಾಕ್ಕೊಳ್ಳೋಕೆ ಮಾಸ್ಕ್ ಇಲ್ಲ’ ಅಂದಳು ಇನ್ನೊಬ್ಬಳು.
ನನ್ನ ಉತ್ತರವಂತೂ ಸಿದವಾಗಿತ್ತು; ಲಾಕ್‌ಡೌನ್ ಮುಗಿದ ದಿನವೇ, ಒಂದು ಕೆ.ಜಿ. ಮಾವಿನ ಹಣ್ಣು ತಂದು ತಿನ್ನುವುದು ಅಂತ! ಇದೆಂಥಾ ಬಯಕೆಯೇ ನಿಂದು ಅಂತ ಎಲ್ಲರೂ ನಕ್ಕಾಗ, ನನ್ನ ರೂಮ್ ಮೇಟ್ ಹೇಳಿದಳು- “ಇವಳ ಬಗ್ಗೆ ಗೊತ್ತಿಲ್ಲ ನಿಮಗಿನ್ನೂ, ಹೋದ್ವರ್ಷ ಮ್ಯಾಂಗೋ ಸೀಸನ್ ಅಲ್ಲಿ ಒಟ್ಟು 16 ಕೆಜಿ ಹಣ್ಣು ಒಬ್ಬಳೇ ತಿಂದಿದ್ದಾಳೆ. ನಾನೇ ಲೆಕ್ಕ ಇಟ್ಟಿದ್ದೀನಿ. ದಿನಾ ಆಫೀಸ್ ಇಂದ ಎರಡು ಕೆಜಿ ಹಿಡ್ಕೊಂಡ್ ಬರ್ತಿದು…’ ಅಲ್ವಾ ಮತ್ತೆ?
ಮಾವಿನ ಸೀಸನ್ ಬರುವುದೇ ವರ್ಷಕ್ಕೊಮ್ಮೆ. ಆಗಲೇ ಮನಸ್ ಪೂರ್ತಿ ಸವಿದು ಬಿಡಬೇಕು. ನಾನಂತೂ ಹೇಳಿದ ಹಾಗೇ, ಲಾಕ್‌ಡೌನ್ ಸಡಿಲಗೊಂಡ ದಿನವೇ ಹೊರಗೆ ಹೋಗಿ ಮೂರು ಕೆಜಿ ರಸಪುರಿ ಮಾವಿನ ಹಣ್ಣುತಂದಿದ್ದೇನೆ! ಅಮೆಜಾನ್ ಫ್ರೆಶ್ ಅಲ್ಲಿ ಆರ್ಡರ್ ಮಾಡಿದ ಬಂಗನಪಲ್ಲಿ, ಮಲ್ಗೊವ ಮಾವು ಇನ್ನೇನು ಕೈ ಸೇರಲಿದೆ. ಎಷ್ಟಾದರೂ ನಾನು ಆಮ್ ಆದ್ಮಿ ತಾನೇ? ಸದ್ಯ, ತಡವಾಗಿಯಾದರೂ ಮಾವು ಸಿಕ್ಕಿತಲ್ಲ..
* ನಿಖಿತಾ ಕೆ.