Advertisement
“ನೋಡು ಶೈಲಜಾ, ಇವರು ನಿನ್ನ ಬಳಿಯೇ ಮಾತನಾಡಲು ಬಂದವರು… ‘ಎನ್ನುತ್ತ ದಯಾನಂದರು ಪತ್ನಿಗೆ ನಮ್ಮ ಪರಿಚಯ ಮಾಡಿಕೊಟ್ಟರು. “ನಾನೇನು ಮಾತನಾಡಲಿ!’ ಎನ್ನುತ್ತ ಮಾತಿಗೆ ಶುರುವಿಟ್ಟ ಶೈಲಜಾ, ಸಹಜ ಶೈಲಿಯಲ್ಲಿ, ಬಹಳ ಕಾಲದ ಬಳಿಕ ಭೇಟಿಯಾಗುತ್ತಿರುವ ಸಹಪಾಠಿಯಂತೆ ಸುಖಕಷ್ಟ ಹಂಚಿಕೊಳ್ಳತೊಡಗಿದರು.
Related Articles
Advertisement
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಾನು ಇಂಗ್ಲಿಷ್ ಡಿಪ್ಲೊಮಾ ಮಾಡಿದ್ದೇನೆ- ಮದುವೆಯಾದ ಮೇಲೆ. ಇವರದು ಕನ್ನಡ ಡಿಪ್ಲೊಮಾ ಆಗಿದೆ. ಇಬ್ಬರೂ ಒಂದುವಾರ ತರಗತಿಗೆಂದು ಮೈಸೂರಿಗೆ ತೆರಳಿ, ಒಟ್ಟಾಗಿ ಓದಿದ್ದು ಈಗಲೂ ನೆನಪಿದೆ. ಹಾಗೇ ಮೈಸೂರು ಸುತ್ತಾಡಿದೆವು. ಬಹಳ ಚೆಂದದ ದಿನಗಳವು. “ಇವಳನ್ನು ಮದುವೆಯಾದ ಮೇಲೆ ನನಗೆ ಒಳ್ಳೆಯ ದಿನಗಳು ಬಂದವು’ ಅಂತ ಇವರು ಆಗಾಗ ಬೇರೆಯವರಲ್ಲಿ ಹೇಳುತ್ತಾರೆ. ನನಗೆ ತುಂಬ ಖುಷಿ.
ಇತ್ತೀಚೆಗೆ ಇವರು ಎಫ್ಎಂನಲ್ಲಿ, ತುಳು ಅಕಾಡೆಮಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ತುಂಬ ಸಕ್ರಿಯರಾಗಿದ್ದಾರೆ. ಹಾಗಾಗಿ, ನಾನು ಟೀಚರ್ ಕೆಲಸ ಬಿಟ್ಟಿದ್ದೇನೆ. ವೈಯಕ್ತಿಕ ಸಮಸ್ಯೆ ಹೆಚ್ಚಾದಾಗ ನಮ್ಮ ಸಮುದಾಯದವರು ದುಶ್ಚಟಗಳನ್ನು ಅಂಟಿಸಿಕೊಳ್ಳುವುದು ಬೇಗ. ಆದರೆ, ಇವರೆಂದೂ ಯಾವುದೇ ವ್ಯಸನಕ್ಕೆ ಶರಣಾದವರಲ್ಲ. ಆದ್ದರಿಂದ, ನಾವು ಈ ಸಂಜಯನಗರದಲ್ಲಿ ಚೆಂದದ ಹೊಸಮನೆ ಕಟ್ಟಿಕೊಳ್ಳುವುದು ಸುಲಭವಾಯಿತು.
ಜಗಳವೂ ಆಗುತ್ತದೆ ಎನ್ನಿ!ಹೆಗಲ ಮೇಲಿನ ಶಾಲನ್ನು, ಕರವಸ್ತ್ರವನ್ನು ಎಲ್ಲೆಂದರಲ್ಲಿ ಹಾಕುವುದು ಅವರ ಕೆಟ್ಟಬುದ್ಧಿ. ಅದೇ ವಿಷಯಕ್ಕೆ ನಮ್ಮ ನಡುವೆ ಜಗಳವಾಗುತ್ತದೆ. ನಾನು ಎಲ್ಲವನ್ನೂ ಒಪ್ಪವಾಗಿ ಇಡುತ್ತೇನೆ ಎಂಬ ಬಗ್ಗೆ ಅವರ ಮನಸ್ಸಿನಲ್ಲಿ ಗೌರವವಿದೆ. ಆದರೂ ಸುಮ್ಮನೆ ಜಗಳ ನಡೆಯುತ್ತದೆ. 8ನೆಯ ತರಗತಿಯಲ್ಲಿರುವ ಮಗ ಕೀರ್ತನ್ ನಮ್ಮ ಜಗಳ ನೋಡಿ ನಗುತ್ತಾನೆ. ನೇಮ ಮುಗಿಸಿ ಅವರು ಮನೆಗೆ ಬರುವಾಗ ನಾನು ಕಾಲಿಗೆ ನೀರು ಕೊಟ್ಟು ಬರಮಾಡಿಕೊಳ್ಳಬೇಕು. ಹೊರಡುವ ಮುನ್ನವೇ ಐದು ಮಡಿವಸ್ತ್ರಗಳನ್ನು, ಕುಡಿಯಲು ಬಿಸಿನೀರನ್ನು ಸಿದ್ಧಮಾಡಿಕೊಡುವುದು ಇದ್ದೇ ಇದೆ. ಆದರೆ, ಅವರು ಬಜ್ಪೆ ಬಳಿಯ ಪೆರಾರದಲ್ಲಿ ಮೂರು ದಿನ ಪಿಲಿಚಾಮುಂಡಿ, ಉಳ್ಳಾಕ್ಲು, ಬಲವಂಡಿ ನೇಮ ನೆರವೇರಿಸುವುದು ನೋಡುವಾಗ ನನಗೆ ಮೈ ಝುಂ ಅನ್ನುತ್ತದೆ. ಮೊದಲ ದಿನ ಪಿಲಿಚಾಮುಂಡಿ ನೇಮ ಮಾಡಿ, ಮರುದಿವಸ ಉಳ್ಳಾಕ್ಲು ನೇಮ ಮಾಡುತ್ತಾರೆ. ಉಳ್ಳಾಕ್ಲು ದೈವ ಗಗ್ಗರವಿಟ್ಟ ಬಳಿಕ ಚಿಕ್ಕ ಅಣಿಯಲ್ಲಿ ಕುಣಿತ ಮಾಡಿ, 1001 ಹಾಳೆಗಳ ದೊಡ್ಡ ಅಣಿಯನ್ನು ಹೊತ್ತು ಕುಣಿತ ಮಾಡಬೇಕು. ಅದಾದ ಬಳಿಕ ಮತ್ತೆ ಚಿಕ್ಕ ಅಣಿ ಧರಿಸಿ ಪಕ್ಕದ ಬಂಟಕಂಬಳದ ಬಳಿ ತೆರಳಿ ಊರಿನವರ “ವಾಗ್ದೋಷ ನಿವಾರಣೆ’ಯ ನುಡಿ ಹೇಳಬೇಕಾಗುತ್ತದೆ. ನೂರಾರು ಜನರಿಗೆ ವಾಗ್ದೋಷ ನಿವಾರಣೆ ನುಡಿ ಹೇಳಿಮುಗಿಯುವ ಹೊತ್ತಿಗೆ ಮಧ್ಯಾಹ್ನವಾಗಿಬಿಡುತ್ತದೆ. ಸುಮಾರು 24 ಗಂಟೆಗೂ ದೀರ್ಘಕಾಲ ಉಪವಾಸವಿದ್ದುಕೊಂಡು ನೇಮ ಮಾಡಬೇಕು. ನೋಡಿಯೇ ದಣಿಯುವಷ್ಟು ದೀರ್ಘ ಪ್ರಕ್ರಿಯೆ ಅದು. ಮೂರನೆಯ ದಿನ ಬಲವಂಡಿ ನೇಮವನ್ನು ಅವರಣ್ಣ ಸತೀಶ್ ಮಾಡುತ್ತಾರೆ. ಈ ಎಲ್ಲ ಕೈಂಕರ್ಯಗಳನ್ನು ನಡೆಸುವುದಕ್ಕೆ ದೈವವೇ ಅವರಿಗೆ ಶಕ್ತಿ ನೀಡುವುದೆಂದು ನಾನು ನಂಬಿದ್ದೇನೆ. ಹಾಗೆ ನೇಮ ಮುಗಿಸಿ ಅವರು ಮನೆಗೆ ಬರುವಾಗ ಬಹಳ ದಣಿದಿರುತ್ತಾರೆ. ಬೇರೆಯವರ ಹೆಗಲ ಮೇಲೆ ಕೈಯಿಟ್ಟು , ಬಸವಳಿದು ಅವರು ಒಳಬರುತ್ತಿರಬೇಕಾದರೆ ಅತ್ತೆಯ ಕಣ್ಣಲ್ಲೂ ನೀರು ಮೂಡುತ್ತದೆ. ಅವರಿಗೆ ಊಟ ಸಿದ್ಧಮಾಡುವುದು ನನಗೆ ಸಂಭ್ರಮ. ಪ್ರತಿದಿನ ತಲೆಗೆ ಮಿಂದು ಅಡುಗೆ ಕೆಲಸ ಶುರುಮಾಡಬೇಕು. ಮುದ್ರೆ ಧರಿಸಿದವರು ಉಣ್ಣುವಾಗ ದೀಪ ಆರಬಾರದು ಎಂಬ ನಿಯಮವಿದೆ. ಆದ್ದರಿಂದ, ದೇವರಿಗೆ ದೀಪ ಹಚ್ಚಿ ಅವರು ಊಟಕ್ಕೆ ಕುಳಿತುಕೊಳ್ಳುತ್ತಾರೆ. ಅವರು ಅಪ್ಪಟ ಸಸ್ಯಾಹಾರಿ. “ಉಪ್ಪಡ್ ಪಚ್ಚಿರ್’ ಎಂದರೆ ಅವರಿಗೆ ಪಂಚಪ್ರಾಣ. ಮುದ್ರೆ ಧರಿಸಿದವರು ಕಾಲುಂಗುರ, ಮುದ್ರೆಯ ಕಡಗ, ಜುಟ್ಟು, ತಿಲಕ, ಕಿವಿಯಲ್ಲಿ ಒಂಟಿ ಧರಿಸಿರಬೇಕು ಎಂಬ ನಿಯಮವನ್ನೂ ಅವರು ಅನುಸರಿಸುತ್ತಾರೆ. ಹೇಗೋ ಬದುಕು ಸಾಗಿದರಾಯಿತು ಎಂದುಕೊಂಡಿದ್ದವಳು ನಾನು. ದೇವರು ಇಷ್ಟು ದೂರ ಚೆನ್ನಾಗಿಯೇ ನಡೆಸಿ ತಂದಿದ್ದಾನೆ, ಮುಂದೆಯೂ ನಡೆಸುತ್ತಾನೆ ಎಂಬ ನಂಬಿಕೆ-ಭರವಸೆಯನ್ನು ದೇವರು ಇವರ ಮೂಲಕ ನನಗೆ ಕೊಟ್ಟಿದ್ದಾನೆ ಎನಿಸುತ್ತದೆ. ಕೋಪಕ್ಕೆ ಮದ್ದು
ಇವರು ಸ್ವಲ್ಪ ಶೀಘ್ರಕೋಪಿ. ಕೆಲಸಕಾರ್ಯಗಳ ಒತ್ತಡದಲ್ಲಿ ಕೆಲವೊಮ್ಮೆ ಎದುರಿಗೆ ಯಾರಿದ್ದಾರೆ ಎಂದು ಗಮನಿಸದೇ ರೇಗುತ್ತಾರೆ. ಆ ಸಂದರ್ಭದಲ್ಲಿ ನಾನು ಒಂದು ಮಾತು ಕೇಳಿದರೆ ತಕ್ಷಣ ಅವರು ಕೋಪ ಕಡಿಮೆ ಮಾಡಿಕೊಂಡು ಸಮಾಧಾನ ಚಿತ್ತದಿಂದ ಆಲಿಸುತ್ತಾರೆ. ಅವರ ಈ ಸ್ವಭಾವ ನನಗೆ ಬಹಳವೆಂದರೆ ಬಹಳ ಇಷ್ಟ
-ಶೈಲಜಾ ದಯಾನಂದ ಶೈಲಜಾ ದಯಾನಂದ್