Advertisement

ನನಗೆ ಮಹಾಪೌರ ಸ್ಥಾನ ಖಚಿತ

03:08 PM Mar 03, 2017 | Team Udayavani |

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಮಹಾಪೌರರ ಸ್ಥಾನ ಈ ಬಾರಿ ನನಗೆ ಸಿಗುವುದು ಖಚಿತ ಎಂದು ಪಾಲಿಕೆ ಬಿಜೆಪಿ ಸದಸ್ಯ ಶಿವಾನಂದ ಮುತ್ತಣ್ಣವರ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 40-50 ವರ್ಷಗಳಿಂದ ಕುರುಬ ಸಮಾಜದವರಿಗೆ ಯಾವುದೇ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. 

Advertisement

ಕುರುಬ ಸಮಾಜಕ್ಕೆ ಮಹಾಪೌರರ ಸ್ಥಾನ ನೀಡಿದ್ದಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ನಮ್ಮ ಮುಖಂಡರಾದ ಸಂಸದ ಪ್ರಹ್ಲಾದ ಜೋಶಿ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಅವರು ಮಹಾಪೌರ ಸ್ಥಾನಕ್ಕೆ ನನ್ನನೇ ಆಯ್ಕೆ ಮಾಡಲಿದ್ದಾರೆ ಎಂಬ ಅಚಲ ನಂಬಿಕೆ ಇದೆ. ಈಗಾಗಲೇ ಜಿಲ್ಲೆಯ ಎಲ್ಲ ಸಂಘಟನೆಯವರ, ಮುಖಂಡರ, ಜನಪ್ರತಿನಿಧಿಗಳ ಒಲವು ನನ್ನ ಮೇಲಿದ್ದು ಇದಕ್ಕೆ ಪೂರಕವಾಗಲಿದೆ ಎಂದರು. 

ಮಾ.3ರಂದು ಕೋರ್‌ ಕಮಿಟಿ ಸಭೆ ನಡೆಯಲಿದ್ದು, ಅಂದು ಬೆಳಿಗ್ಗೆ 11:30 ಗಂಟೆಗೆ ಕಿತ್ತೂರ ಚನ್ನಮ್ಮ ಪ್ರತಿಮೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಅಂಬೇಡ್ಕರ ಪ್ರತಿಮೆ, ಸರ್ವೋದಯ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, 1ರಿಂದ 2 ಸಾವಿರ ಜನರ ಮೆರವಣಿಗೆಯೊಂದಿಗೆ ಪಕ್ಷದ ಮುಖಂಡರಾದ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ, ಪ್ರದೀಪ ಶೆಟ್ಟರ, ನಾಗೇಶ ಕಲುºರ್ಗಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಮಹಾಪೌರ ಆಯ್ಕೆಯ ಮೊದಲೇ ಶಿವಾನಂದ ಮುತ್ತಣ್ಣವರ ಸುದ್ದಿಗೋಷ್ಠಿಯಲ್ಲಿ ಡಾ| ರಾಜಕುಮಾರ ಅವರ ಭಾವಚಿತ್ರದ ಜತೆಗೆ “ಮೇಯರ್‌ ಮುತ್ತಣ್ಣ’ ಎಂದು ಬರೆಸಿದ ಬ್ಯಾನರ್‌ ಹಾಕಿಕೊಳ್ಳುವ ಮೂಲಕ ಮುಂದಿನ ಮಹಾಪೌರ ನಾನೇ ಎಂಬ ಮಹತ್ವದ ಸಂದೇಶ ರವಾನಿಸಿದರು.

ಹುಡಾ ಅಧ್ಯಕ್ಷರಿಂದ ಅತಿಕ್ರಮಣ ..
ವೀರಾಪುರ ಓಣಿಯಲ್ಲಿರುವ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.4ರಲ್ಲಿ ಒಳಚರಂಡಿ ಕಾಮಗಾರಿ ನಡೆಯಬೇಕಿದ್ದು ಇದಲ್ಲದೆ ಶಾಲೆಯ ಸುತ್ತಲೂ ಕಾಂಪೌಂಡ್‌ ನಿರ್ಮಿಸಬೇಕಿದೆ. ಆದರೆ ಹುಡಾ ಅಧ್ಯಕ್ಷ ಅನ್ವರ್‌ ಮುಧೋಳ ಅವರು ಅತಿಕ್ರಮಣ ಮಾಡಿಕೊಂಡು ಮನೆ ನಿರ್ಮಿಸಿದ್ದು ಯಾವ ಕೆಲಸವೂ ಆಗುತ್ತಿಲ್ಲ. ಈ ಜಾಗದಲ್ಲಿ ಸಿಟಿ ಸರ್ವೇ ಅಧಿಕಾರಿಗಳು ಬಂದು ಅಳತೆ ಮಾಡುವುದಿಲ್ಲ.

Advertisement

ಅವರನ್ನು ಕರೆದುಕೊಂಡು ಬಂದು ಅಳತೆ ಮಾಡಿಸಿದರೂ ಇದುವರೆಗೂ ಕೆಲಸವಾಗುತ್ತಿಲ್ಲ. ಪಾಲಿಕೆ ವಕೀಲರಾದ ಸಂಕನಗೌಡರು ಯಾವುದೇ ಕೆಲಸ ಮಾಡುತ್ತಿಲ್ಲ. ಅವರಿಗೆ ಈ ಕುರಿತು ಸಂಬಂಧಿಸಿದ ದಾಖಲಾತಿಗಳನ್ನು ಕೇಳಿದರೂ ನೀಡುತ್ತಿಲ್ಲ. ಈ ಕುರಿತು ಪಾಲಿಕೆ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next