Advertisement
ಮಂಡ್ಯ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿ ಸೋತಿದ್ದೇವೆ ಎಂದು ಹೇಳಿದ ಕುಮಾರಸ್ವಾಮಿ, “ಈಗ ಜಿಲ್ಲೆಯ ಜನರು ಅಭಿವೃದ್ಧಿ ಕುಂಠಿತ ಆಗಿದೆ ಎಂದು ಹೇಳುತ್ತಿದ್ದಾರೆ. ನನಗೆ ಪಕ್ಷದ ಭವಿಷ್ಯ ಮುಖ್ಯ, ನನ್ನ ಪಕ್ಷದ ಹೃದಯ ಮಂಡ್ಯ. ನನ್ನ ಪಕ್ಷವನ್ನು ಉಳಿಸಿಕೊಳ್ಳುವುದು ಮತ್ತು ಬೇರು ಗಟ್ಟಿ ಮಾಡುವುದು ನನ್ನ ಕರ್ತವ್ಯ. ಮಂಡ್ಯದ ಅಭಿವೃದ್ಧಿಗೆ ತಲೆ ಕೊಡಲು ಸಿದ್ಧ ಎಂದು ಪ್ರಕಟಿಸಿದ್ದಾರೆ.
ಮಂಡ್ಯದ ಜನರು ನೀವೇ ಸ್ಪರ್ಧೆ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡುತ್ತೇವೆ. ತಪ್ಪುಗಳು ಆಗಿವೆ. ಅದನ್ನು ಸರಿ ಮಾಡಿಕೊಳ್ಳಲಿದ್ದೇವೆ. ಕಳೆದ ಚುನಾವಣೆಯಲ್ಲಿ 5 ಕ್ಷೇತ್ರದಲ್ಲಿ ಕಡಿಮೆ ಮತದಿಂದ ಸೋತಿದ್ದೇವೆ. ಈ ಚುನಾವಣೆ ಮೂಲಕ ಜೆಡಿಎಸ್ ಮುಗಿಸುತ್ತೇವೆ ಎಂಬ ದುರಹಂಕಾರದ ಮಾತಿಗೆ ಉತ್ತರ ಕೊಡುತ್ತೇವೆ ಎಂದರು. ಈ ಮೊದಲು ಮಂಡ್ಯದಲ್ಲಿ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅಥವಾ ನಿಖೀಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕೆಂದು ತೀರ್ಮಾನ ಮಾಡಿದ್ದೆವು. ಆದರೆ ನಿಖೀಲ್ ಕೂಡ ಸ್ಪರ್ಧೆಗೆ ನಿರಾಕರಿಸಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
Related Articles
ಇದೇ ವೇಳೆ ಬಿಜೆಪಿ ತನಗೆ ಬಿಟ್ಟುಕೊಟ್ಟಿರುವ ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಜೆಡಿಎಸ್ ಬಹುತೇಕ ಅಂತಿಮಗೊಳಿಸಿದೆ. ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಹಾಸನದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಖಚಿತವಾಗಿದೆ. ಇನ್ನು ಕೋಲಾರದಿಂದ ಮಲ್ಲೇಶ್ ಬಾಬು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಬುಧವಾರ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.
ಮಂಗಳವಾರದ ಬೆಳವಣಿಗೆ ಅವಲೋಕಿಸಿದರೆ ಮಂಡ್ಯದಿಂದ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲು ನಿರ್ಧರಿಸಿದಂತಿದೆ. ಹೀಗಾಗಿ ಮತ್ತೆ ಮಂಡ್ಯ ಕಳೆದ ಚುನಾವಣೆಯಂತೆ ಈ ಸಲವೂ ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಲಿದೆ. ಕಾಂಗ್ರೆಸ್‌ನ ಸ್ಟಾರ್ ಚಂದ್ರು ಮತ್ತು ಕುಮಾರಸ್ವಾಮಿ ನಡುವೆ ಪೈಪೋಟಿ ನಡೆಯಲಿದೆ.
Advertisement
ಕೋಲಾರದಿಂದ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಕೋರ್ ಕಮಿಟಿಯಲ್ಲಿ ಒಲವು ವ್ಯಕ್ತವಾಗಿತ್ತು. ಆದರೆ ಹಾಸನ ಪ್ರವಾಸದಲ್ಲಿರುವ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಕೋಲಾರದಿಂದ ಮಲ್ಲೇಶ್ ಬಾಬು ಕಣಕ್ಕಿಳಿಯುತ್ತಾರೆ ಎಂದು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಮಲ್ಲೇಶ್ ಬಾಬು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಅಧಿಕವಾಗಿದೆ.