Advertisement

Sadashiva Commission ವರದಿ ಜಾರಿ ಆಗದಿದ್ದರೆ ಎಲ್ಲದಕ್ಕೂ ಸಿದ್ಧ ಎಂದಿದ್ದೇನೆ; ಕಾದು ನೋಡಿ!

12:20 AM Nov 08, 2023 | Team Udayavani |

ಪರಿಶಿಷ್ಟ ಜಾತಿಯ ಒಳಪಂಗಡಗಳಿಗೆ ಒಳಮೀಸಲಾತಿ ಕಲ್ಪಿಸುವ ನ್ಯಾ|ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಧ್ವನಿ ಎತ್ತಿದ್ದಾರೆ. 30 ವರ್ಷಗಳ ಬೇಡಿಕೆಗೆ ತೀವ್ರ ಹೋರಾಟದ ಸ್ವರೂಪ ನೀಡಲು ಮುಂದಾಗಿರುವ ಅವರು, ಕರ್ನಾಟಕ ಆದಿಜಾಂಬವರ ಸಾಂಸತಿಕ ವೇದಿಕೆ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ತಮ್ಮದೇ ಸರಕಾರದ ವಿರುದ್ಧ ಗುಡುಗಿದ್ದರು. ಶಾಸಕರ ಮನೆಗೆ ಮುತ್ತಿಗೆ ಹಾಕಿ, ಸರಕಾರದಲ್ಲಿ ಸಚಿವನಾಗಿದ್ದೇನೆ, ಯಾರ ಆಟವೂ ನಡೆಯುವುದಿಲ್ಲ. ನಾನು ಎಲ್ಲದಕ್ಕೂ ಸಿದ್ಧ ಎಂದು ಎದೆಯುಬ್ಬಿಸಿ ಹೇಳಿದ್ದರು. ಎಲ್ಲದಕ್ಕೂ ಸಿದ್ಧ ಎಂದರೇನು ಎನ್ನುವ ನೇರಾನೇರ ಪ್ರಶ್ನೆಗೆ, ಕಾದು ನೋಡಿ ಎಂದು ಕುತೂಹಲ ಕಾಯ್ದಿಟ್ಟಿದ್ದಾರೆ. ಈ ವಿಚಾರದಲ್ಲಿ ಸಿಎಂ, ಡಿಸಿಎಂ ದಿಟ್ಟ ನಿಲುವು ತಳೆಯಬೇಕು ಎಂದೂ ಆಗ್ರಹಿಸಿದ್ದಾರೆ.

Advertisement

ನ್ಯಾ| ಸದಾಶಿವ ಆಯೋಗದ ವರದಿ ಜಾರಿಗೆ ಪಟ್ಟು ಹಿಡಿದಿದ್ದೀರಿ. 30 ವರ್ಷದಿಂದ ಆಗದಿರುವುದು ಈ ಸರಕಾರದಲ್ಲೂ ಆಗುವುದಿಲ್ಲ ಎನಿಸುತ್ತಿದೆಯೇ? ಆಕ್ರೋಶಿತ ರಾಗಿದ್ದೇಕೆ?
ಹಾಗೇನಿಲ್ಲ. ಪರಿಶಿಷ್ಟ ಜಾತಿಯ ಎಲ್ಲ ಮುಖ್ಯಸ್ಥರೂ ಸೇರಿ ಐಕ್ಯತಾ ಸಮಾವೇಶ ನಡೆಸಿದ್ದೆವು. ಚುನಾವಣೆಗೆ ಮೊದಲು ನಡೆದಿದ್ದ ಈ ಸಮಾವೇಶದಲ್ಲಿ ಒಳಮೀಸಲಾತಿ ನೀಡುವ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಅಂದಿನ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಗೃಹಸಚಿವ ಡಾ| ಜಿ.ಪರಮೇಶ್ವರ್‌ ಅವರು ಈ ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದರು. ವಾಸ್ತವಾಂಶ ಏನೆಂದರೆ, ನಮ್ಮ ಸರಕಾರ ಇಂದಿಗೂ ಇದಕ್ಕೆ ಬದ್ಧವಾಗಿದೆ. ಗ್ಯಾರಂಟಿಗಳು 5 ಇದ್ದುದರಿಂದ ಮೊದಲ ಅಧಿವೇಶನದಲ್ಲಿ ಇದು ಸಾಧ್ಯವಾಗಿಲ್ಲ. ಸಂಪುಟದ ಮುಂದೆ ಈ ವಿಚಾರ ತಂದು ಚರ್ಚಿಸಿ, ಜಾರಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ, ಸರಕಾರದ ಆರ್ಥಿಕ, ಶೈಕ್ಷಣಿಕ ಸೌಲಭ್ಯಗಳ ಸಮಾನ ಹಂಚಿಕೆಗಾಗಿ ನಮ್ಮ ಹೋರಾಟ ಅಷ್ಟೇ. ಆಕ್ರೋಶವಲ್ಲ. ಶಾಸಕರ ಮನೆಗೆ ಮುತ್ತಿಗೆ ಹಾಕಲು ಹೇಳಿಲ್ಲ. ಎಲ್ಲ ಶಾಸಕರಿಗೂ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಬೇರೆ ಪಕ್ಷದವರು ಇದರ ರಾಜಕೀಯ ಲಾಭ ಪಡೆಯುವಂತಾಗಬಾರದು. ಈ ವಿಚಾರದಲ್ಲಿ ಬಿಜೆಪಿ-ಜೆಡಿಎಸ್‌ ಭಾವನೆ ಏನಿದೆ ಎಂಬುದೂ ಗೊತ್ತಾಗಬೇಕು. ಹೀಗಾಗಿ ಶಾಸಕರಿಗೆ, ಸಚಿವರಿಗೆ ಮನವಿ ನೀಡಲು ಹೇಳಿದ್ದೇನೆ.

ಇಷ್ಟು ವರ್ಷವಾದರೂ ವರದಿ ಜಾರಿ ಆಗದಿರುವುದೇಕೆ? ತಡೆಯೊಡ್ಡುತ್ತಿರುವ ಶಕ್ತಿ ಯಾವುದು? ನಿಮ್ಮದೇ ಸರಕಾರಗಳಿದ್ದಾಗ ಏಕೆ ಆಗಲಿಲ್ಲ?
ಈ ಹಿಂದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಜೆಡಿಎಸ್‌ ಪ್ರಣಾಳಿಕೆಯಲ್ಲಿ ಈ ಅಂಶ ಸೇರಿಸಿದ್ದರು. ಹಿಂದಿನ ಬಿಜೆಪಿ ಸರಕಾರವು ಶೇ.15 ರಷ್ಟು ಇದ್ದ ಮೀಸಲಾತಿಯನ್ನು ಶೇ.17 ಹಾಗೂ ಶೇ.3 ರಷ್ಟು ಇದ್ದುದನ್ನು ಶೇ.7 ಕ್ಕೆ ಏರಿಸಿತ್ತು. ಜನಸಂಖ್ಯೆ ಜಾಸ್ತಿ ಆಗಿದೆ. ಅದಕ್ಕೆ ತಕ್ಕಂತೆ ಮೀಸಲಾತಿ ಹಂಚಿಕೆ ಮಾಡಬೇಕು ನಿಜ. ಆದರೆ ಕಾನೂನು ಚೌಕಟ್ಟಿನಲ್ಲಿ ಮಾಡಬೇಕಿತ್ತು. ಮೀಸ ಲಾತಿ ಪ್ರಮಾಣ ಶೇ.50 ಕ್ಕಿಂತ ಜಾಸ್ತಿಯಾಗ ಬಾರದೆಂಬ ಸುಪ್ರೀಂ ಕೋರ್ಟ್‌ ಆದೇಶವಿದ್ದರೂ ಈ ರೀತಿ ಅವೈಜ್ಞಾನಿಕವಾಗಿ ಮಾಡಿದ್ದರಿಂದ ಹಿನ್ನಡೆ ಆಯಿತು. ಪ್ರಮುಖವಾಗಿ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಒಪ್ಪಿ, ಸದನದಲ್ಲೂ ಅನುಮೋದಿಸಿ ಸಂಸತ್ತಿಗೆ ಕಳುಹಿಸಬೇಕಿದೆ. ಇದಕ್ಕಾಗಿ ಸಂವಿಧಾನ ತಿದ್ದುಪಡಿಗೂ ಶಿಫಾರಸು ಮಾಡಬೇಕಿದೆ. ಯುಪಿಎ ಸರಕಾರ ಅಧಿಕಾರದಲ್ಲಿ ಇದ್ದಾಗ ಉಷಾ ಮೆಹ್ರಾ ಸಮಿತಿ ರಚಿಸಿ ಅಧ್ಯಯನ ವರದಿ ತರಿಸಿಕೊಳ್ಳಲಾಗಿತ್ತು. ಆಂಧ್ರಪ್ರದೇಶಕ್ಕೆ ಸೀಮಿತವಾಗಿದ್ದ ವರದಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಸಿದ್ಧತೆ ಮಾಡಿಕೊಂಡಿತ್ತು. ಚುನಾವಣೆ ಬಂದಿದ್ದರಿಂದ ಸಾಧ್ಯವಾಗಿರಲಿಲ್ಲ. ಈ ವಿಚಾರದಲ್ಲಿ ಯುಪಿಎ ಸರಕಾರ ಕೂಡ ಬದ್ಧತೆ, ಆಸಕ್ತಿ ತೋರಿ ಪ್ರಾಮಾಣಿಕ ಪ್ರಯತ್ನ ನಡೆಸಿತ್ತು.

ಒಳಮೀಸಲಾತಿ ವಿಚಾರದಲ್ಲಿ ಒಳಪಂಗಡ ಗಳೇ ಒಡಕು ಪ್ರದರ್ಶಿಸಿವೆ, ಇಂದಿಗೂ ಹೋರಾಟ ಮುಂದುವರಿದಿವೆ. ಒಗ್ಗಟ್ಟು ಸಾಧ್ಯವೇ?
ಈ ಬಗ್ಗೆ ಹೆಚ್ಚು ಮಾತನಾಡಲ್ಲ. ಐಕ್ಯತಾ ಸಮಾವೇಶದಲ್ಲಿ ಎಡ, ಬಲ ಸೇರಿದಂತೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದ್ದೇವೆ. ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಶೇ.24.1 ರಷ್ಟು ಮೀಸಲಾತಿ ಸಿಗಬೇಕೆಂಬುದು ಹೇಗೆ ಸಂವಿಧಾನಬದ್ಧ ಹಕ್ಕೋ, ಅದೇ ರೀತಿ ಪರಿಶಿಷ್ಟ ಜಾತಿಯಲ್ಲಿನ ಎಡ, ಬಲ, ಬೋವಿ, ಬಂಜಾರ ಸೇರಿದಂತೆ ಎಲ್ಲ 101 ಒಳಪಂಗಡಗಳಿಗೂ ವೈಜ್ಞಾನಿಕವಾಗಿ ಒಳಮೀಸಲಾತಿ ಹಂಚಿಕೆ ಆಗಬೇಕು ಎಂಬುದು ನಮ್ಮ ಉದ್ದೇಶ. ಮನವಿ, ಹಕ್ಕೊತ್ತಾಯ ಮಾಡಲು ಎಲ್ಲರಿಗೂ ಅವಕಾಶಗಳಿವೆ. ಎಲ್ಲ ವರ್ಗಕ್ಕೂ ನ್ಯಾಯ ಸಿಗಬೇಕೆಂಬುದೇ ನಮ್ಮ ಉದ್ದೇಶವೂ ಆಗಿದೆ. ಈ ವಿಚಾರದಲ್ಲಿ ಸಿಎಂ, ಡಿಸಿಎಂ ದಿಟ್ಟ ನಿಲುವು ತೆಗೆದುಕೊಳ್ಳಬೇಕು. ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಬೇಕು. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇವೆ. ಆದಷ್ಟು ಬೇಗ ವರದಿ ಮಂಡಿಸಬೇಕೆಂಬುದು ಪರಮೇಶ್ವರ್‌ ಅವರ ಒತ್ತಾಯವೂ ಆಗಿದೆ. ಸಂಪುಟದ ಮುಂದೆ ಬರಲಿ ಚರ್ಚಿಸೋಣ ಎಂದು ಸಚಿವ ಮಹದೇವಪ್ಪ ಕೂಡ ಹೇಳಿದ್ದಾರೆ. ಯಾರದ್ದೂ ತಡೆಯಿಲ್ಲ. ಎಲ್ಲರೂ ಸ್ವಾಗತಿಸುವರೇ ಆಗಿದ್ದಾರೆ. ಕೆಲವರು ದಾರಿ ತಪ್ಪಿಸಿದ್ದಾರಷ್ಟೇ.

ಒಳಮೀಸಲಾತಿ ವಿಚಾರದಲ್ಲಿ ಎಲ್ಲಕ್ಕೂ ಸಿದ್ಧ ಎಂದಿದ್ದೀರಿ? ಇದರ ಅರ್ಥವೇನು?
ಅದನ್ನು ಕಾದು ನೋಡಿ. ನಾನೇ ಸರಕಾರದಲ್ಲಿ ಇದ್ದೇನೆ. ಒಳಮೀಸಲಾತಿ ಕೊಟ್ಟೇ ಕೊಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದೇವೆ. ನನಗೂ ಆಶಾಭಾವನೆ ಇದೆ. ಮುಂದಿನ ಯೋಚನೆ ಬೇಕಾಗುವುದಿಲ್ಲ ಎಂದುಕೊಂಡಿ ದ್ದೇನೆ. ಜನಸಂಘಟನೆ ನಮ್ಮ ಉದ್ದೇಶವೇ ಹೊರತು, ಸರಕಾರ ಅಥವಾ ಒಳಮೀಸಲಾತಿಗೆ ವಿರೋಧಿಸುತ್ತಿರುವವರ ವಿರುದ್ಧ ಹೋಗು ವುದಲ್ಲ. ಸಮಾಜದ ಕಣ್ತೆರೆಸಬೇಕಿದೆ. ಒಳ್ಳೆಯ ದಾರಿಯಲ್ಲಿ ಹೋಗುತ್ತಿದ್ದೇವೆ. ನಾನೊಬ್ಬ ಸಂಸದನಾಗಿ ಕೇಂದ್ರದಲ್ಲಿ ಸಚಿವನಾಗಿದ್ದವನು. ಒಂದು ಸಮುದಾಯ ಅಥವಾ ಉಪಜಾತಿಗೆ ಸೀಮಿತನಾಗಲಾರೆ. ಎಲ್ಲರಿಗಾಗಿ ನನ್ನ ಹೋರಾಟ. ಪರಿಶಿಷ್ಟರು ಅವಕಾಶವಂಚಿತರು. ಅವರಿಗೆ ಏನು ಸಿಗಬೇಕೋ ಅದು ಸಿಗುತ್ತಿಲ್ಲ. ಹೀಗಾಗಿ ಧ್ವನಿಗೂಡಿಸಿದ್ದೇನೆ. ಚಳಿಗಾಲದ ಅಧಿವೇಶನದಲ್ಲೇ ವರದಿ ಮಂಡನೆ ಆಗುವ ವಿಶ್ವಾಸವಿದೆ. ಮುಂದಿನ ಯೋಚನೆ ಮಾಡಿಲ್ಲ.

Advertisement

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕಾಂತರಾಜು ಅವರು ಅಧ್ಯಕ್ಷರಾಗಿದ್ದಾಗ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಅದು ಜಾರಿಗೆ ಬರಬೇಕು. ಹಿಂದುಳಿದ ವರ್ಗಗಳಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ, ಶೈಕ್ಷಣಿಕ ನ್ಯಾಯ ಸಿಗಬೇಕು. ಆಗ ಮಾತ್ರ ರಾಮರಾಜ್ಯ ನಿರ್ಮಾಣ ಸಾಧ್ಯ ಎಂಬುದು ಗಾಂಧೀಜಿ ಅವರ ಕನಸಾಗಿತ್ತು. ಸ್ವಾತಂತ್ರ್ಯ, ಸಂವಿಧಾನ, ಪ್ರಜಾ ಪ್ರಭುತ್ವಕ್ಕಾಗಿ ಸಾಕಷ್ಟು ತ್ಯಾಗ-ಬಲಿದಾನಗಳಾಗಿವೆ. ಅಂಬೇಡ್ಕರ್‌, ಬುದ್ಧ, ಬಸವಣ್ಣನವರ ತಣ್ತೀಗಳಲ್ಲಿ ನಂಬಿಕೆ ಇಟ್ಟು ಸರಕಾರ ನಡೆಸಬೇಕು. ಸಾಮಾಜಿಕ ಬದ್ಧತೆ ಬೇಕು. ಇಂತಹ ವಿಚಾರಗಳು ಬಂದಾಗ ಸರಕಾರದ ಮುಂದೆ ಕ್ಲಿಷ್ಟ ಸನ್ನಿವೇಶಗಳು ಇರುತ್ತವೆ.

ಒಕ್ಕಲಿಗರು, ಲಿಂಗಾಯತರ ವಿರೋಧ ವಿದೆಯಲ್ಲಾ?
ಒಕ್ಕಲಿಗರು, ಲಿಂಗಾಯತರು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುಂದುವರಿಯಬೇಕು. ಸಮಾಜದಲ್ಲಿ ಸಮಾನತೆ ಇರಬೇಕೇ ಹೊರತು, ಅಂತರ ಇರಬಾರದು. ಪ್ರೀತಿ, ವಾತ್ಸಲ್ಯದಿಂದ ಹಂಚಿಕೊಂಡು ಬದುಕಬೇಕು. ಬ್ರಾಹ್ಮಣ, ಒಕ್ಕಲಿಗ, ಲಿಂಗಾಯತರಲ್ಲೂ ಬಡವರಿದ್ದಾರೆ. ಶೇ.10 ರಷ್ಟು ಮೀಸಲಾತಿಯು ಈ ಸಮುದಾಯಗಳಲ್ಲಿನ ಬಡವರಿಗೆ, ಅರ್ಹರಿಗೆ ಸಿಗಬೇಕು. ಹಾಗೆ ಕೊಟ್ಟರೆ ಸ್ವಾಗತಾರ್ಹ. ಆದರೆ ಅರ್ಹರಿಗೆ ಸಿಗುತ್ತಿಲ್ಲ. ಹೀಗಾಗಿ ಇದು ಸರಿಯಿಲ್ಲ.
nಸರಕಾರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಹಣವಿಲ್ಲವೇ?
ಇನ್ನು ಇದು ಮೊದಲ ವರ್ಷವಾದ್ದರಿಂದ ಗ್ಯಾರಂಟಿಗೆ ಹಣ ಕೊಡಬೇಕಿದೆ. ಅಭಿವೃದ್ಧಿ ಕಾಮ ಗಾರಿಗೆ ಸ್ವಲ್ಪ ತೊಂದರೆ ಇದೆ. ಎರಡನೇ ವರ್ಷ ದಿಂದ ಎಲ್ಲವೂ ಸರಿ ಹೋಗಲಿದೆ. ಹಣ ಹೊಂದಿ ಸುವುದಾಗಿ ಸಿಎಂ ಹೇಳಿದ್ದಾರೆ. ಗ್ಯಾರಂಟಿಗಳನ್ನು ಜಾರಿಗೊಳಿಸಿ, ಅಭಿವೃದ್ಧಿಯತ್ತ ಗಮನ ಹರಿಸಿ ಸಿಎಂ, ಡಿಸಿಎಂ ಕೈ ಬಲಪಡಿಸಬೇಕು.

ಪದೇ ಪದೆ ಅಧಿಕಾರ ಹಂಚಿಕೆಯ ಮಾತೇಕೆ? ದಲಿತ ಸಿಎಂ ವಿಚಾರ ಎಲ್ಲಿಗೆ ಬಂತು? ಅಧಿಕಾರ ಬಿಟ್ಟುಕೊಡುವ ನಿಮ್ಮ ನಿಲುವು ಏನಾಯಿತು?
ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಎರಡೂವರೆ ವರ್ಷವಷ್ಟೇ ಅಧಿಕಾರ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದರು. ನಮಗೂ ಅದು ಅನ್ವಯ ಆಗಬೇಕು ಎಂದಿದ್ದೆ. ನಮ್ಮಂತೆ ಮೂರ್‍ನಾಲ್ಕು ಬಾರಿ ಗೆದ್ದ ಶಾಸಕರಿದ್ದಾರೆ. ಬೇರೆ ಶಾಸಕರಿಗೂ ಅವಕಾಶ ಸಿಗಲಿ. ಅದಕ್ಕೆ ತಯಾರಿದ್ದರಷ್ಟೇ ಪಕ್ಷ ಕಟ್ಟಲು ಸಾಧ್ಯ. ಎರಡು ವರ್ಷದವರೆಗೆ ಕಾಯಿರಿ. ನನ್ನ ಸುಧಾರಣೆ ಏನೆಂಬುದು ಗೊತ್ತಾಗಲಿದೆ.ಸಿದ್ದರಾಮಯ್ಯರನ್ನು ಸಿಎಂ ಹಾಗೂ ಶಿವಕುಮಾರ್‌ ಅವರನ್ನು ಡಿಸಿಎಂ ಮಾಡಿ ಪಕ್ಷವು ನಮಗೆಲ್ಲ ಕೆಲಸ ಮಾಡಲು ಹೇಳಿದೆ. ರಾಜಕೀಯ ಪಕ್ಷದಲ್ಲಿದ್ದಾಗ ನಮ್ಮದೇ ಶಿಸ್ತು ಇರುತ್ತದೆ. ಪಕ್ಷದೊಳಗೆ ಚರ್ಚಿಸಬೇಕಾದ ವಿಚಾರವನ್ನು ಬಹಿರಂಗವಾಗಿ ಚರ್ಚಿಸಬಾರದು. ಹಾಗೆಂದು ಬಾಯಿ ಮುಚ್ಚಿಕೊಂಡು ಇರಬೇಕು ಎಂದಲ್ಲ. ನಮ್ಮ ಬೇಡಿಕೆಯನ್ನು ಎಲ್ಲಿ ಹೇಳಬೇಕೋ ಅಲ್ಲಿ ಪ್ರಸ್ತಾವಿಸಬೇಕು. ಹೊರಗೆ ಚರ್ಚಿಸುವುದು ಆರೋಗ್ಯಕರವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸರಕಾರ ಬಂದು 6 ತಿಂಗಳೂ ಆಗಿಲ್ಲ. ಅಧಿಕಾರ ಹಂಚಿಕೆ ಚರ್ಚೆಯೇ ಅಪ್ರಸ್ತುತ.

 ಶೇಷಾದ್ರಿ ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next