ಮೈಸೂರು: ಸಿಡಿ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರ ಹೆಸರು ಬಂದಿದ್ದರಲ್ಲಿ ನನಗೇನು ಅಚ್ಚರಿ ಅನಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮೊದಲೇ ಇದು ಚರ್ಚೆಯಲ್ಲಿತ್ತು. ಈಗ ಅದು ಹೊರಗೆ ಬಂದಿದೆ ಅಷ್ಟೇ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಹೆಸರು ಹೇಳು ಎಂದು ನಾವೆನಾದರು ಹೇಳಿದ್ದೇವಾ? ಆಕೆಯೇ ತಾನಾಗಿಯೇ ಆ ಹೆಸರು ಹೇಳಿದ್ದಾಳೆ. ಅಲ್ಲಿಗೆ ಇದರ ಅರ್ಥ ಏನು ಎಂದು ಪ್ರಶ್ನಿಸಿದ್ದಾರೆ.
ಸಿಡಿ ಪ್ರಕರಣದಲ್ಲಿ ಮಹಾನಾಯಕನ ಪಾತ್ರ ಇದೆ ಎನ್ನುವುದು ಚರ್ಚೆಯಲ್ಲಿದೆ. ಸಂತ್ರಸ್ತೆಯೇ ಅವರ ಹೆಸರು ಹೇಳಿದ್ದಾಳೆ. ನಾವೇನು ಅವರ ಹೆಸರು ಹೇಳಿ ಎಂದು ಹೇಳಿದ್ದೇವಾ? ಯಾರಾದರೂ ಅವರ ಹೆಸರು ಹೇಳಿ ಎಂದು ಹೇಳಿಕೊಟ್ಟಿದ್ದಾರಾ? ಆತ ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಮಗೂ ಇತ್ತು. ಡಿಕೆಶಿಯೇ ಮಹಾನಾಯಕನೆಂಬ ಪ್ರಶ್ನೆಗೆ ಈಗ ಅವರ ಹೆಸರು ಬಂದಿದೆ ಅಷ್ಟೇ. ಮಹಾನಾಯಕ ಯಾರು ಅಂತ ಸದ್ಯದಲ್ಲೇ ಗೊತ್ತಾಗಲಿದೆ ಎಂದರು.
ಇದನ್ನೂ ಓದಿ: ಜಾರಕಿಹೊಳಿ ಹೆಸರು ಬರೆದಿಟ್ಟು ನಾನು ಸಾಯ್ಬೇಕು ಅನಿಸ್ತಿದೆ: ಸಿಡಿ ಲೇಡಿಯ ಮತ್ತೊಂದು ವಿಡಿಯೋ
ಇಡೀ ಪ್ರಕರಣದಲ್ಲಿ ರಾಜಕಾರಣಿಗಳು, ಮಂತ್ರಿಗಳು ಟಾರ್ಗೆಟ್ ಆಗುತ್ತಿದ್ದಾರೆ. ಹಾಗಾಗಿ ಈ ಪ್ರಕರಣದ ಮಹಾನಾಯಕ ಯಾರು ಎಂಬ ಸತ್ಯಾಸತ್ಯತೆ ಹೊರಗೆ ಬರಲೇಬೇಕು. ಯುವತಿ ಎಲ್ಲಿಯೇ ಬಂದು ಹೇಳಿಕೆ ನೀಡಿದರೂ ಆಕೆಗೆ ರಕ್ಷಣೆ ನೀಡಲು ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಬದ್ದವಾಗಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಆರು ಸಚಿವರು ಕೋರ್ಟ್ ಗೆ ಹೋಗಿರುವ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರವಾಗಿ ಉಪಚುನಾವಣೆ ಪ್ರಚಾರದಿಂದ ದೂರ ಇರಲು ಸಿಎಂ ಹೇಳಿಲ್ಲ. ನನಗೆ ಸದ್ಯ ಊಟಿಗೆ ಉಸ್ತುವಾರಿ ನೀಡಲಾಗಿದೆ. ನಂತರ ಮಸ್ಕಿಗೆ ನೇಮಕ ಮಾಡಲಾಗಿದೆ. ಪ್ರಚಾರದಿಂದ ದೂರ ಇರಿ ಎಂಬುದೆಲ್ಲ ಕಪೋಲಕಲ್ಪಿತ ಸುದ್ದಿ. ನಮಗೆ ಈ ಬಗ್ಗೆ ಸಿಎಂ ಯಾವ ಸೂಚನೆ ನೀಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.