Advertisement

ಕಡಿಮೆ ಸ್ಥಾನ ಬಂದರೆ ನಾ ಹೊಣೆಯಲ್ಲ

09:59 AM Nov 26, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹದಿನೈದು ಕ್ಷೇತ್ರಗಳ ಉಪ ಚುನಾ ವಣೆಯು ದಿನದಿಂದ ದಿನಕ್ಕೆ ಕಾವೇರುತ್ತಿದ್ದರೂ ಕಾಂಗ್ರೆಸ್‌ನಲ್ಲಿ ಮಾತ್ರ ನಾಯಕರ ನಡುವಿನ ಗೊಂದಲಕ್ಕೆ ತೆರೆ ಬಿದ್ದಿಲ್ಲ. “ಹೆಚ್ಚಿನ ಸ್ಥಾನಗಳನ್ನು ಗೆಲ್ಲದಿದ್ದರೆ ನಾನು ಹೊಣೆಗಾರನಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.

Advertisement

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಶನಿವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷದಿನೇಶ್‌ ಗುಂಡೂರಾವ್‌ ಹಾಗೂ ಸಿದ್ದ ರಾಮಯ್ಯ ಜತೆ ರಹಸ್ಯ ಸಭೆ ನಡೆಸಿದ್ದು, ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿನ ಗೊಂದಲ ಹಾಗೂ ಉಪ ಚುನಾವಣೆಯಲ್ಲಿ ಸಂಪನ್ಮೂಲದ ಕೊರತೆಯ ಬಗ್ಗೆ ಸಿದ್ದರಾಮಯ್ಯ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಭ್ಯರ್ಥಿಗಳ ಆಯ್ಕೆ ಹಾಗೂ ಟಿಕೆಟ್‌ ಹಂಚಿಕೆ
ಯಲ್ಲಿ ಪಕ್ಷದ ಯಾವುದೇ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಿಪಕ್ಷ ನಾಯಕ ಸಿದ್ದರಾಮಯ್ಯ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್‌, ಕೆ.ಎಚ್‌. ಮುನಿಯಪ್ಪ, ಡಾ| ಜಿ. ಪರಮೇಶ್ವರ್‌, ಎಂ. ವೀರಪ್ಪ ಮೊಲಿ, ರಾಮಲಿಂಗಾ ರೆಡ್ಡಿ, ಡಿ.ಕೆ. ಶಿವಕುಮಾರ್‌ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ನಾಯಕರು ಈಗ ಉಪ ಚುನಾವಣೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳದೆ ಕಾಟಾಚಾರಕ್ಕೆ ಪ್ರಚಾರದಲ್ಲಿ ತೊಡಗಿಸಿಕೊಂಡು ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬುದು ಸಿದ್ದರಾಮಯ್ಯ ಬಣದವರ ಆಕ್ಷೇಪ.

ಹಿರಿಯ ನಾಯಕರ ಈ ನಡೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಮೊದಲ ಹಂತದಲ್ಲಿ 8 ಅಭ್ಯರ್ಥಿಗಳ ಆಯ್ಕೆ ಸಂದರ್ಭ ಯಾವುದೇ ನಾಯಕರ ಅಭಿಪ್ರಾಯ ಪಡೆಯದೆ ಏಕ ಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿ ದ್ದಾರೆಂದು ಹಿರಿಯ ನಾಯಕರು ಆಕ್ಷೇಪಿಸಿ ದ್ದರು. ಬಳಿಕ ಹಿರಿಯ ನಾಯಕರ ಸಭೆ ನಡೆಸಿದ್ದ ಸಿದ್ದರಾಮಯ್ಯ, “ನೀವು ಹೇಳುವ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ; ಗೆಲ್ಲಿಸಿ ಕೊಂಡು ಬರುವ ಜವಾಬ್ದಾರಿ ನಿಮ್ಮದು. ಆ ಅಭ್ಯರ್ಥಿಗಳ ಗೆಲುವಿಗೆ ಅಗತ್ಯವಿರುವ ಸಂಪನ್ಮೂಲ ಒದಗಿಸುವ ಜವಾಬ್ದಾರಿಯೂ ನಿಮ್ಮದೇ’ ಎಂದು ಹೇಳಿದ್ದರೆನ್ನಲಾಗಿದೆ.

ಎಲ್ಲ ನೀವು ಹೇಳಿದಂತೆಯೇ ಆಗಬೇಕೆಂದು ಬಯಸುವುದಾದರೆ ನೀವೇ ಎಲ್ಲರನ್ನೂ ಗೆಲ್ಲಿಸಿ ಕೊಂಡು ಬನ್ನಿ ಎಂದು ಹಿರಿಯ ನಾಯಕರು ಸಿದ್ದರಾಮಯ್ಯ ಅವರಿಗೆ ನೇರವಾಗಿಯೇ ಹೇಳುವ ಮೂಲಕ ಉಪ ಚುನಾವಣೆಯ ಸೋಲು-ಗೆಲುವಿನ ಜವಾಬ್ದಾರಿ ನಮಗಿಲ್ಲ ಎಂಬ ಸಂದೇಶವನ್ನು ನೀಡಿದ್ದರು ಎನ್ನಲಾಗಿದೆ.

Advertisement

ಉಪ ಚುನಾವಣೆಯಲ್ಲಿ ಕನಿಷ್ಠ 8 ಕ್ಷೇತ್ರ ಗಳನ್ನಾದರೂ ಗೆದ್ದು ಬಿಜೆಪಿಯವರಿಗಿಂತ ಹೆಚ್ಚುಸ್ಥಾನ ಗೆಲ್ಲುವ ಮೂಲಕ ತನ್ನ ಸಾಮರ್ಥ್ಯ ಸಾಬೀತುಪಡಿಸುವ ಗುರಿ ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರಿಗೆ ಪಕ್ಷದ ಹಿರಿಯ ನಾಯಕರ ಅಸಹಕಾರ ನಿರೀಕ್ಷಿತ ಗುರಿ ಮುಟ್ಟಲು ಅಡ್ಡಿಯಾಗುತ್ತಿದೆ ಎಂಬ ಅನು ಮಾನಕ್ಕೆ ಕಾರಣ ಎನ್ನಲಾಗಿದೆ.

ಸಂಪನ್ಮೂಲದ ಕೊರತೆ
ಉಪ ಚುನಾವಣೆಯಲ್ಲಿ ಬಿಜೆಪಿ ಸಂಘಟಿತವಾಗಿ ಪ್ರಚಾರ ನಡೆಸುತ್ತಿರುವುದಲ್ಲದೆ, ಮತದಾರರಿಗೆ ಎಲ್ಲ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದು, ಅವರನ್ನು ಕಾಂಗ್ರೆಸ್‌ ಕಡೆಗೆ ಮುಖ ಮಾಡುವಂತೆ ಮಾಡಲು ಸಂಪನ್ಮೂಲದ ಕೊರತೆ ಇದೆ ಎಂದು ವೇಣುಗೋಪಾಲ್‌ಗೆ ಸಿದ್ದರಾಮಯ್ಯ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಹಿರಿಯ ನಾಯಕರು ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದರ ಜತೆಗೆ ಅಗತ್ಯ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸದಿದ್ದರೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವುದು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿಯೂ ನಾಯಕರ ಅಸಹಕಾರ ಫ‌ಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಡಿಕೆಶಿ ಪ್ರತ್ಯೇಕ ಪ್ರವಾಸಗಳಿಗೆ ಆಕ್ಷೇಪ
ಮಾಜಿ ಸಚಿವ ಡಿ.ಕೆ.ಶಿವಕುಮಾರ್‌, ದೇವಸ್ಥಾನಗಳ ಭೇಟಿ ಹೆಸರಿನಲ್ಲಿ ಬೇರೆ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಕಾರ್ಯಕರ್ತರ ಸಭೆಗಳನ್ನು ಮಾಡುತ್ತಿರುವ ಬಗ್ಗೆಯೂ ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವೇಣುಗೋಪಾಲ್‌ ತಂತ್ರ?
ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರ ನಡೆಯ ಬಗ್ಗೆ ಹಿರಿಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಪರವಾಗಿ ನಡೆದುಕೊಳ್ಳುತ್ತಿರುವ ಅವರು, ಚುನಾವಣೆ ಮುಗಿಯುವ ಮೊದಲೇ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಈ ಕಾರ್ಯತಂತ್ರ ರೂಪಿಸಿದ್ದಾರೆ ಎಂಬ ಮಾತುಗಳು ಹಿರಿಯರ ವಲಯದಿಂದ ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next