Advertisement

ಎಂಜಿಆರ್‌ ಮಾದರಿ ಆಡಳಿತ ಕೊಡುವೆ: ಸೂಪರ್‌ಸ್ಟಾರ್‌ ರಜನಿಕಾಂತ್‌

07:30 AM Mar 06, 2018 | |

ಚೆನ್ನೈ:  “ನಾನು ಎಂ.ಜಿ. ರಾಮಚಂದ್ರನ್‌ ಅಲ್ಲ. ಆದರೆ ಅವರಂತೆ ಬಡವರ ಪರವಾಗಿರುವ ಆಡಳಿತ ನೀಡಬಲ್ಲೆ’.
ಹೀಗೆಂದು ಘೋಷಣೆ ಮಾಡಿದ್ದು ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌. ಚೆನ್ನೈನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್‌ರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು. ಇನ್ನು ಒಂದು ಸಾವಿರ ವರ್ಷ ಕಳೆದರೂ ತಮಿಳುನಾಡಿನಲ್ಲಿ ಅವರನ್ನು ಮೀರಿಸುವವರು ಇಲ್ಲ. ನಾನೂ ಅದಕ್ಕೆ ಹೊರತಾಗಿಲ್ಲ. ನಾನು ಎಂಜಿಆರ್‌ ಎಂದರೆ ಅದು ಹಾಸ್ಯಾಸ್ಪದವಾದೀತು ಎಂದು ಹೇಳಿದರು. ಎಂ.ಜಿ.ರಾಮಚಂದ್ರನ್‌ ತಮಿಳು ಚಿತ್ರರಂಗದಿಂದ ರಾಜಕೀಯ ಪ್ರವೇಶ ಮಾಡಿ ಯಶಸ್ಸು ಕಂಡಂತೆ ಇತರರಿಗೆ ಆ ಸಾಧನೆ ಮಾಡಲು ಸಾಧ್ಯವಿಲ್ಲವೆಂಬ ಆಡಳಿತಾರೂಢ ಎಐಎಡಿಎಂಕೆ ನಾಯಕರು ಮಾಡಿದ ಟೀಕೆಗೆ ಪ್ರತಿಯಾಗಿ ತಲೈವಾ ಈ ಮಾತುಗಳನ್ನಾಡಿದ್ದಾರೆ. ಬಡವರಿಗೆ ಅನುಕೂಲವಾಗುವ ಸರಕಾರ ಮಾಡುವ ಕನಸು ತಮ್ಮದು ಎಂದಿದ್ದಾರೆ. “ಈಗಿನ ಸರಕಾರ ಸರಿಯಾಗಿ ತನ್ನ ಕರ್ತವ್ಯ ಮಾಡುತ್ತಿಲ್ಲ. ನನಗೆ 67 ವರ್ಷ ವಯಸ್ಸಾಯಿತು. ಜಯಲಲಿತಾ ಅವರು ಇಲ್ಲ. ಕರುಣಾನಿಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ.  ಹೀಗಾಗಿ ತಮಿಳುನಾಡಿನಲ್ಲಿ ಪ್ರಮುಖ ನಾಯಕನ ಕೊರತೆ ಇದೆ. ನಾಯಕರು ಇಲ್ಲವೆಂಬ ಕೊರತೆ ನೀಗಲು ಬಂದಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. 

Advertisement

ಬ್ಯಾನರ್‌ಗೆ ಆಕ್ಷೇಪ: ತಮ್ಮ ಬೆಂಬಲಿಗರು ಬ್ಯಾನರ್‌ಗಳನ್ನು ಕಟ್ಟಿ, ಸಾರ್ವಜನಿಕರಿಗೆ ಸಿಹಿ ಹಂಚಿದಕ್ಕೆ ಆಕ್ಷೇಪಿಸಿದ ಸೂಪರ್‌ಸ್ಟಾರ್‌, ಇದು ಮದ್ರಾಸ್‌ ಹೈಕೋರ್ಟ್‌ ಆದೇಶದ ಉಲ್ಲಂಘನೆ. ಮುಂದೆ ಹೀಗೆ ಮಾಡಬೇಡಿ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next