ಚಿಕ್ಕಬಳ್ಳಾಪುರ: ಡಿ.ಕೆ.ಶಿವಕುಮಾರ್ ರೀತಿ ನಾನು ಕೆಳ ಹಂತದ ರಾಜಕಾರಣ ಮಾಡಲು ನಾನು ಹೋಗುವುದಿಲ್ಲ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ರವರ 129 ನೇ ಜನ್ಮ ಜಯಂತಿ ಪ್ರಯುಕ್ತ ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ತಮ್ಮ ರಾಜೀನಾಮೆಗೆ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಡಿ.ಕೆ.ಶಿವಕುಮಾರ್ ರವರ ಸದ್ಗುಣಗಳು ಮಾತ್ರ ಇದುವರೆಗೂ ಗೊತ್ತಿತ್ತು. ಆದರೆ ಅವರ ದೊಡ್ಡ ಗುಣ ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು. ಡಿ.ಕೆ.ಶಿವಕುಮಾರ್ ರೀತಿ ನಾನು ಕೆಳ ಹಂತದ ರಾಜಕಾರಣ ಮಾಡಕ್ಕೆ ನಾನು ಹೋಗುವುದಿಲ್ಲ ಎಂದರು.
ಸಚಿವ ಸುಧಾಕರ್ ಅವರು ಮಕ್ಕಳೊಂದಿಗೆ ಈಜುವ ಫೋಟೊವನ್ನು ಇತ್ತೀಚೆಗೆ ಟ್ಟಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಕೋವಿಡ್-19 ಸಂಕಷ್ಟದ ಸಮಯದಲ್ಲಿ ಸುಧಾಕರ್ ವರ್ತನೆ ಸರಿಯಲ್ಲ, ಅವರು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಒತ್ತಾಯಿಸಿದ್ದರು.
ಇದೇ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಪಂ ಸದಸ್ಯ ರಾಜಾಕಾಂತ್, ಡೀಸಿ ಆರ್.ಲತಾ, ಸಿಇಒ ಫೌಜಿಯಾ ತರುನ್ನುಮ್, ಎಸ್ಪಿ ಮಿಥುನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.