ಉಡುಪಿ: ‘ನಾನು ಉಡುಪಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಪಕ್ಷದ ಟಿಕೇಟ್‌ಗಾಗಿ ಅರ್ಜಿಯನ್ನು ಸಲ್ಲಿಸಿದ್ದು 1 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದೇನೆ’ ಎಂದು ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಗುರುವಾರ ಇಂದಿರಾ ಕ್ಯಾಂಟೀನ್ ಉದ್ಘಾಟನೆ ನಡೆಸಿದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಬಿಜೆಪಿ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ‘ಬಿಜೆಪಿಗೆ ಹೋಗುವ ಗೇಟ್ ಬಂದ್ ಆಗಿದ್ರೆ ಹೋಗುವುದು ಹೇಗೆ? ಬಿಜೆಪಿಗೆ ಹೋಗಲು ನನಗೆ ಇಬ್ಬರುನಾಯಕರು ತಡೆ ಹಾಕಿದ್ದಾರೆ. ಒಬ್ಬರು ಬಿಜೆಪಿಯ ಮಾಜಿ ಶಾಸಕರು ಇನ್ನೊಬ್ಬರು ನಮ್ಮಲ್ಲಿದ್ದು ಹೋದವರು’ ಎಂದು ಹೆಸರು ಹೇಳಲು ನಿರಾಕರಿಸಿದರು. ‘ಉಡುಪಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ’ ಎಂದರು.
ಬಿಜೆಪಿಯವರು ನಿಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ ಎಂದು ಕೇಳಿದಾಗ ‘ನನಗೆ ಯಾರೂ ಕಿರುಕುಳ ನೀಡಿಲ್ಲ. ಸಿಎಂ ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ನೀವು ಅವರನ್ನೇ ಕೇಳಿ’ ಎಂದರು.
‘ನಾನು ನಂಬರ್ 1 ಶಾಸಕ ಅಲ್ವಾ, ಹಾಗಾಗಿ ನನಗೆ ಡಿಮ್ಯಾಂಡ್’ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಕುರಿತು ಕಳೆದ ಕೆಲ ದಿನಗಳಿಂದ ಭಾರೀ ಚರ್ಚೆಯಾಗುತ್ತಿದೆ. ಸಾಮಾಜಿಕ ತಾಣಗಳು, ಮಾಧ್ಯಮಗಳಲ್ಲೂ ಚರ್ಚೆ ನಡೆಯುತ್ತಿದೆ.
ಟಿ.ಜೆ.ಅಬ್ರಾಹಂಗೆ ಮಾನನಷ್ಟ ಮೊಕದ್ದಮೆ ನೊಟೀಸ್
ಬ್ಯಾಂಕ್‌ಗೆ 192 ಕೋಟಿ ವಂಚಿಸಿದ್ದಾರೆ ಎಂದು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂಗೆ 3 ದಿನಗಳ ಒಳಗೆ ಉತ್ತರ ನೀಡುವಂತೆ ಶೋಕಾಸ್ ನೊಟೀಸ್ ನೀಡಿದ್ದು, ಉತ್ತರ ನೀಡದೆ ಹೋದಲ್ಲಿ 10 ಕೋಟಿ ರೂಪಾಯಿ ಮಾನ ನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಸಚಿವ ಪ್ರಮೋದ್ ತಿಳಿಸಿದರು.