ಹುಬ್ಬಳ್ಳಿ: “ಪದೇಪದೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಸಮಸ್ಯೆ ಸೃಷ್ಟಿಸುವುದು ಸರಿಯಲ್ಲ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಯೂ ಅಲ್ಲ. ಹೀಗಾಗಿ, ಈ ಕುರಿತು ಗೊಂದಲ ಸೃಷ್ಟಿಸುವುದು ಸರಿಯಲ್ಲ’ ಎಂದು ಸಚಿವ ಆರ್.ವಿ.ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಶಾಸಕ ರಮೇಶ ಜಾರಕಿಹೊಳಿ ನನ್ನ ಸಂಪರ್ಕದಲ್ಲಿಲ್ಲ. ಪಕ್ಷದ ಮುಖಂಡರೊಂದಿಗೆ ಸಂಪರ್ಕದಲ್ಲಿರಬಹುದು.
ಚುನಾವಣೆ ಎಂದರೆ ಒಂದು ರೀತಿ ಕ್ರಿಕೆಟ್ ಪಂದ್ಯವಿದ್ದಂತೆ. ಅದರಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಈ ಬಾರಿಯ ಲೋಕಸಭಾ ಫಲಿತಾಂಶ ನಮಗೆ ಭಾರೀ ಆಘಾತ ತಂದಿದೆ. ಹೀಗಾಗುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
“ರಾಷ್ಟ್ರದ ಜನ ಎನ್‌ಡಿಎ, ಬಿಜೆಪಿಗೆ ಮುಖ್ಯವಾಗಿ ನರೇಂದ್ರ ಮೋದಿಗೆ ಮತ ಕೊಟ್ಟಿದ್ದು, ಜನರ ತೀರ್ಪಿಗೆ ನಾವೆಲ್ಲ ತಲೆಬಾಗಬೇಕಾಗುತ್ತದೆ. ಈ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ತಕ್ಷಣ ಯಾವುದೇ ಪರಿಣಾಮ ಬೀರಲ್ಲ.
ಸಿಎಲ್‌ಪಿಸಿ ಅಧ್ಯಕ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರೆಲ್ಲ ಸಭೆ ನಡೆಸಿ ಸಿಎಂ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ನಿರ್ಣಯಿಸಲಾಗಿದೆ. ಮೇ 29ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ’ ಎಂದರು.