Advertisement

I am not costly: ಮೊದಲು ಕಥೆ ಹೇಳಿ; ಆ ನಂತರ ಸಂಭಾವನೆ

12:57 PM Sep 26, 2017 | |

ರಚಿತಾ ರಾಮ್‌ ಸ್ಟಾರ್‌ಗಳ ಚಿತ್ರಗಳಿಗಷ್ಟೇ ಸೀಮಿತ ಎಂಬ ಮಾತು ಗಾಂಧಿನಗರದಲ್ಲಿದೆ. ಅದಕ್ಕೆ ಕಾರಣ ಸತತವಾಗಿ ರಚಿತಾ, ಸ್ಟಾರ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು. ಹಾಗಾಗಿ, ಹೊಸಬರು ರಚಿತಾಗೆ ಕಥೆ ಹೇಳಲು ಕೂಡಾ ಹಿಂದೇಟು ಹಾಕುತ್ತಾರೆ. ಕಾಸ್ಟ್ಲಿ ಹೀರೋಯಿನ್‌ ಎಂಬ ಭಯ ಅವರನ್ನು ಕಾಡುತ್ತಿದೆ. ಹಾಗಂತ ರಚಿತಾ ಯಾವತ್ತೂ ತಾನು ಸ್ಟಾರ್‌ ಸಿನಿಮಾಗಳಿಗೆ ಸೀಮಿತ ಎಂದು ಹೇಳಿಲ್ಲ. ಬಹುತೇಕ ಸ್ಟಾರ್‌ಗಳ ಜೊತೆ ಪಕ್ಕಾ ಕಮರ್ಷಿಯಲ್‌ ಪಾತ್ರ ಮಾಡಿಕೊಂಡು ಬಂದಿರುವ ರಚಿತಾ ಅವರಿಗೆ ಈಗ ಆಫ್ ಬೀಟ್‌ ಸಿನಿಮಾಗಳ ಜೊತೆ ಹೊಸ ಬಗೆಯ ಪಾತ್ರ ಮಾಡಬೇಕೆಂಬ ಮನಸ್ಸಾಗಿದೆ. ಸದ್ಯ “ಭರ್ಜರಿ’ ಹಾಗೂ “ಉಪ್ಪಿ ರುಪಿ’ ಚಿತ್ರಗಳಲ್ಲಿ ಬಿಝಿಯಾಗಿರುವ ರಚಿತಾ ತಮ್ಮ ಆಸೆ, ಕನಸು, ಯೋಜನೆ, ಯೋಚನೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುವಂತವರಾಗಿ …

Advertisement

1. ಹಾಯ್‌, ಹೇಗಿದ್ದೀರಿ, ಹೇಗಿದೆ ಲೈಫ‌ು?
– ಜೀವನ ತುಂಬಾ ಚೆನ್ನಾಗಿ ನಡೀತಾ ಇದೆ. ಖುಷಿಯಾಗಿದ್ದೀರಿ. ಸದ್ಯ “ಭರ್ಜರಿ’ ಚಿತ್ರೀಕರಣ ಬಹುತೇಕ ಮುಗಿದಿದ್ದು, ಒಂದೇ ಒಂದು ಹಾಡು ಬಾಕಿ ಇದೆ. “ಉಪ್ಪಿ-ರುಪಿ’ ಚಿತ್ರದ ಸೆಕೆಂಡ್‌ ಶೆಡ್ನೂಲ್‌ ಆರಂಭವಾಗಿದೆ. ಈ ನಡುವೆಯೇ ಒಂದಷ್ಟು ಕಥೆ ಕೇಳುತ್ತಿದ್ದೇನೆ. “ರಿಷಭ ಪ್ರಿಯ’ ಎಂಬ ಕಿರುಚಿತ್ರವೊಂದನ್ನು ನಿರ್ಮಾಣ ಮಾಡಿದ್ದೇನೆ. ಸದ್ಯ ತುಂಬಾ ಖುಷಿ ಖುಷಿಯಾಗಿದ್ದೀನಿ. 

2. ಸದ್ಯ “ಭರ್ಜರಿ’ ಹಾಗೂ “ಉಪ್ಪಿ ರುಪಿ’ ಬಿಟ್ಟರೆ ರಚಿತಾ ಕೈಯಲ್ಲಿ ಬೇರೆ ಸಿನಿಮಾಗಳಿಲ್ಲ. ಯಾಕೆ?
– ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ, ಬರುವ ಪಾತ್ರಗಳೆಲ್ಲವೂ ನಾನು ಈ ಹಿಂದಿನ ಸಿನಿಮಾಗಳಲ್ಲಿ ಮಾಡಿರುವಂಥದ್ದೇ. ಮಾಡಿದ ಪಾತ್ರಗಳನ್ನೇ ಮತ್ತೆ ಮಾಡೋದು ಬೇಜಾರು. ನಾನೀಗ ಹೊಸ ತರಹದ ಪಾತ್ರಗಳನ್ನು ಹುಡುಕುತ್ತಿದ್ದೇನೆ. ಸಾಕಷ್ಟು ಕಮರ್ಷಿಯಲ್‌ ಸಿನಿಮಾಗಳನ್ನು ಮಾಡಿದ್ದೇನೆ. ಈಗ ಬೇರೇನಾದರೂ ಟ್ರೈ ಮಾಡೋಣ ಎಂದು ವಿಭಿನ್ನ ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ. ನನಗೆ ಆಫ್ ಬೀಟ್‌ ತರಹದ ಸಿನಿಮಾಗಳನ್ನು ಮಾಡೋದು ಇಷ್ಟ. ಆ ತರಹದ ಕಥೆ, ಪಾತ್ರಗಳನ್ನು ಎದುರು ನೋಡುತ್ತಿದ್ದೇನೆ.

3.ರಚಿತಾ ಸಂಭಾವನೆ ಜಾಸ್ತಿ ಎಂಬ ಕಾರಣಕ್ಕೆ ಹೊಸಬರು ನಿಮ್ಮತ್ರ ಬರೋಕೆ ಹೆದರ್ತಾರಂತೆ? 
– ಯಾರ್‌ ಹೇಳಿದ್ದು, ಯಾರೋ ಸುದ್ದಿ ಹಬ್ಬಿಸುತ್ತಾರೋ ಅಂದಾಕ್ಷಣ ಅದನ್ನು ನಂಬಿಬಿಡೋದಾ? “ರಚಿತಾ ಸಂಭಾವನೆ ಅಷ್ಟಂತೆ, ಇಷ್ಟಂತೆ, ಅವರ ಬಳಿ ಹೋಗೋದು ಬೇಡ’ ಎಂದು ನೀವ್‌ನೀವೇ ತೀರ್ಮಾನಿಸಿದರೆ ನಾನೇನು ಮಾಡೋಕಾಗುತ್ತೆ. ಮೊದಲು ಬಂದು ಕಥೆ ಹೇಳಿ. ಯಾವ ತರಹ ನರೇಟ್‌ ಮಾಡ್ತೀರಾ, ಯಾವ ತರಹದ ಪಾತ್ರ ಮಾಡಿಕೊಂಡಿದ್ದೀರಾ ಅನ್ನೋದು ಮುಖ್ಯ. ಸಂಭಾವನೆ ಆ ನಂತರದ ಮಾತು. ಯಾವ ಸಿನಿಮಾಗಳಿಗೆ ಎಷ್ಟು ಸಂಭಾವನೆ ಪಡೆಯಬೇಕು ಎಂದು ನನಗೆ ಗೊತ್ತು. ನಾನು ಕಥೆ, ನನ್ನ ಪಾತ್ರ ನೋಡುತ್ತೇನೆ. ರಚಿತಾ 40 ಲಕ್ಷ ತಗೋತ್ತಾರೆ ಅಥವಾ ಇನ್ನೆಷ್ಟು ತಗೋತ್ತಾರೆ ಅಂದಾಕ್ಷಣ ಅದನ್ನು ನಂಬುವ ಬದಲು ಯೋಚಿಸಬೇಕು. ನಾನು ಪ್ರೊಫೆಶನಲ್‌ ಆಗಿ ಸಂಭಾವನೆ ಕೋಟ್‌ ಮಾಡುತ್ತೇನೆ. ನನ್ನ ಮಾರುಕಟ್ಟೆಯನ್ನು ಕೂಡಾ ನಾನು ನೋಡುತ್ತೇನೆ. ನಾನು ಯಾವತ್ತು ನನಗೆ ಇಷ್ಟೇ ಸಂಭಾವನೆ ಬೇಕೆಂದು ಹಠ ಹಿಡಿದಿಲ್ಲ. ಯಾವುದಾದರೊಂದು ಕಥೆ ಇಷ್ಟವಾದರೆ, ಆ ತಂಡದಲ್ಲಿ ನಾನು ಇರಲೇಬೇಕೆಂದು ನನಗೆ ಮನಸ್ಸಾದರೆ ನನ್ನ ಸಂಭಾವನೆಯನ್ನು ನಾನು ಕಡಿಮೆ ಮಾಡಿಕೊಂಡಿದ್ದೇನೆ ಮತ್ತು ಮಾಡಿಕೊಳ್ಳುತ್ತೇನೆ. ನನಗೆ ಒಳ್ಳೆಯ ಕಥೆ ಹಾಗೂ ಪಾತ್ರ ಮುಖ್ಯ. ನಾನು ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷ ಆಯಿತು. ನನಗೂ ಒಂದಷ್ಟು ಗೊತ್ತಾಗಿದೆ. ಇನ್ನೂ ಕನ್‌ಫ್ಯೂಸ್‌ ಇದ್ದರೆ ನನ್ನ ಅಪ್ಪ-ಅಮ್ಮನಲ್ಲಿ ಚರ್ಚಿಸುತ್ತೇನೆ. ಯಾರಧ್ದೋ ಮಾತು ಕೇಳಿ “ರಚಿತಾ ಸಂಭಾವನೆ ಜಾಸ್ತಿ’ ಎಂದು ದೂರ ಉಳಿಯೋದು ಸರಿಯಲ್ಲ. 

4. “ಜಾನಿ ಜಾನಿ ಯೆಸ್‌ ಪಪ್ಪಾ’ ಹಾಗೂ “ಕನಕ’ ಒಪ್ಕೊಂಡ್ರಿ, ನಂತರ ಎರಡನ್ನೂ ಬಿಟ್ರಿ ಯಾಕೆ?
– “ಕನಕ’ದವರು ನನ್ನನ್ನು ಅಪ್ರೋಚ್‌ ಮಾಡಿದ್ದು ಹೌದು.  ಆದರೆ. “ಕನಕ’ ಸಿನಿಮಾ ತಂಡಕ್ಕೆ ಸ್ಪಷ್ಟವಾಗಿ ಹೇಳಿದ್ದೆ. ಸದ್ಯಕ್ಕೆ ನನ್ನ ಡೇಟ್ಸ್‌ ಇಲ್ಲ. ಏನೆಂದು ನೀವೇ ಡಿಸೈಡ್‌ ಮಾಡಿ ಎಂದಿದ್ದೆ. “ಜಾನಿ ಜಾನಿ ಯೆಸ್‌ ಪಪ್ಪಾ’ ಚಿತ್ರಕ್ಕೆ ಡೇಟ್ಸ್‌ ಕ್ಲಾéಶ್‌ ಆಗುತ್ತದೆಂದು ಅದರಿಂದ ಹೊರಬಂದೆ.

Advertisement

5. “ಜಾನಿ’ಯಿಂದ ತುಂಬಾ ಬೇಸರದಿಂದ ಹೊರಬಂದ್ರಿ ಎಂಬ ಮಾತಿದೆಯಲ್ಲ?
– ಯಾವ ಬೇಸರನೂ ಇಲ್ಲ. ನಾನ್ಯಾಕೆ ಬೇಸರಿಸಿಕೊಳ್ಳಬೇಕು. ನನ್ನ ನಿರ್ಧಾರ ನನಗೆ. “ಜಾನಿ’ ಬಿಡಲು ನಿಜವಾದ ಕಾರಣ ಡೇಟ್ಸ್‌ ಸಮಸ್ಯೆ. ಆರಂಭದಲ್ಲಿ ಆ ಚಿತ್ರ ಜುಲೈನಲ್ಲಿ ಚಿತ್ರೀಕರಣ ಆಗುತ್ತದೆಂದಿತ್ತು. ಜುಲೈ ಒಂದು ತಿಂಗಳು ಮುಖ್ಯ ದೃಶ್ಯಗಳ ಚಿತ್ರೀಕರಣ ಮಾಡಿ, ಆ ನಂತರ ನನ್ನನ್ನು “ಭರ್ಜರಿ’ ಚಿತ್ರದ ಪ್ರಮೋಶನ್‌ಗೆ ಬಿಟ್ಟುಕೊಡುವುದಾಗಿ ನಿರ್ದೇಶಕ ಪ್ರೀತಂ ಗುಬ್ಬಿ ಹೇಳಿದ್ದರು. ಆದರೆ, ಚಿತ್ರ ತಡವಾಯಿತು. ಆಗಸ್ಟ್‌ಗೆ ಹೋಗಿದೆ. ನನಗೆ “ಭರ್ಜರಿ’ ಸಿನಿಮಾ ಪ್ರಮೋಶನ್‌ ಕೂಡಾ ಮುಖ್ಯ. ಈಗಾಗಲೇ ಆ ಸಿನಿಮಾ ಆರಂಭವಾಗಿ ಎರಡು ವರ್ಷ ಕಳೆದಿದೆ. ಜನರಿಗೆ ಆ ಸಿನಿಮಾ ಬಗ್ಗೆ ಹೊಸದಾಗಿ ಹೇಳಬೇಕಿದೆ. ಹಾಗಾಗಿ, ಪ್ರಮೋಶನ್‌ನ ಅಗತ್ಯವಿದೆ. ಕಲಾವಿದರು ಪ್ರಮೋಶನ್‌ನಲ್ಲಿ ಭಾಗಿಯಾಗಬೇಕು. ಆ ಕಾರಣದಿಂದ ನಾನು ಪ್ರೀತಂಗೆ ಹೇಳಿ “ಜಾನಿ’ಯಿಂದ ಹೊರಬಂದೆ. ಅದು ಬಿಟ್ಟು ಬೇರೆ ಯಾವ ಕಾರಣವೂ ಇಲ್ಲ.

6. ನೀವು ಪರಭಾಷೆಗೆ ಹೋಗೋದು ತುಂಬಾ ದಿನಗಳಿಂದ ಸುದ್ದಿಯಾಗ್ತಾ ಇದೆ. ಯಾವತ್ತು ಹೋಗೋದು?
– ಹೌದು, ಸುದ್ದಿಯಾಗ್ತಾ ಇದೆ. ನನಗೆ ಸಿನಿಮಾ ಮಾಡಬೇಕು ಎಂಬ ಕಾರಣಕ್ಕೆ ಪರಭಾಷೆಗೆ ಹೋಗಲು ಇಷ್ಟವಿಲ್ಲ. ಕನ್ನಡದಲ್ಲಿ ನನಗೆ ದೊಡ್ಡ ಲಾಂಚ್‌ ಸಿಕ್ಕಿದೆ. ನಾನು ಅಲ್ಲೂ ಅದೇ ತರಹದ ಒಂದು ಒಳ್ಳೆಯ ಲಾಂಚ್‌ಗಾಗಿ ಎದುರು ನೋಡುತ್ತಿದ್ದೇನೆ. ಅದು ಬಿಟ್ಟು ಪರಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದೇನೆಂದು ಸುದ್ದಿಯಾಗಬೇಕೆಂಬ ಕಾರಣಕ್ಕೆ ಸಿನಿಮಾ ಒಪ್ಪಿಕೊಳ್ಳಲು ನಾನು ತಯಾರಿಲ್ಲ. ಏಕೆಂದರೆ, ನನಗೆ ಇಲ್ಲಿ ಒಳ್ಳೆಯ ಅವಕಾಶವಿದೆ. ಗಟ್ಟಿ ನೆಲೆ ಸಿಕ್ಕಿದೆ. ನನಗೆ ಆತುರಾತುರವಾಗಿ ಪರಭಾಷೆಗೆ ಹೋಗಬೇಕೆಂಬ ಯಾವ ಆಸೆಯೂ ಇಲ್ಲ. ಒಳ್ಳೆಯ ಲಾಂಚ್‌ ಸಿಕ್ಕರೆ ಹೋಗುತ್ತೇನೆ.

7. ಕನ್ನಡದಲ್ಲಿ ಇಷ್ಟ ಅವಕಾಶ ಇದ್ರೂ ಪರಭಾಷೆಯ ಮೋಹ ಯಾಕೆ?
– ಯಾಕೆ ಹೋಗಬಾರದು. ಇಲ್ಲಿ ಮೋಹದ ಪ್ರಶ್ನೆ ಬರೋದಿಲ್ಲ. ಅವಕಾಶ ಅಷ್ಟೇ ಮುಖ್ಯವಾಗುತ್ತದೆ. ಅವಕಾಶ ಬಂದು ಬಾಗಿಲು ಬಡಿಯೋದು ಒಮ್ಮೆ ಮಾತ್ರ. ಅದನ್ನು ನಾವು ಬಳಸಿಕೊಳ್ಳಬೇಕು. ನಾನು ಪರಭಾಷೆಗೆ ಹೋದ ಕೂಡಲೇ ಕನ್ನಡ ಬಿಡ್ತೀನಿ, ನಟಿಸೋದಿಲ್ಲ ಎಂದು ಯಾಕಂದುಕೊಳ್ಳಬೇಕು. ಕನ್ನಡ ಬಿಡುವ ಪ್ರಶ್ನೆಯೇ ಇಲ್ಲ.

8. ಹೊಸದಾಗಿ ಫೋಟೋ ಶೂಟ್‌ ಮಾಡಿಸಿಕೊಂಡಿದ್ದೀರಿ?
– ಹೌದು, ನನ್ನನ್ನು ನೋಡಿದವರು “ನೀವು ಬಾಲಿವುಡ್‌ನ‌ವರು ತರಹ ತುಂಬಾ ಸ್ಲಿಮ್‌ ಇದ್ದೀರಿ. ಸ್ವಲ್ಪ ದಪ್ಪಗಾಗಿ’ ಎನ್ನುತ್ತಿದ್ದರು. ಅದಕ್ಕಾಗಿ ಚಾಕ್ಲೇಟ್‌, ಐಸ್‌ಕ್ರೀಮ್‌ ತಿನ್ನತೊಡಗಿದೆ. ಇತ್ತೀಚೆಗೆ “ರಾಜಕುಮಾರ’ ಶತದಿನ ಕಾರ್ಯಕ್ರಮದಲ್ಲಿ ನೋಡಿದವರು “ದಪ್ಪಗಾಗಿದ್ದೀರಿ’ ಎಂದರು. ಈಗ ಹೇಗೆ ಕಾಣುತ್ತೇನೆ ನೋಡೋಣವೆಂದು ಫೋಟೋಶೂಟ್‌ ಮಾಡಿಸಿಕೊಂಡೆ ಅಷ್ಟೇ. ಅದು ಬಿಟ್ಟು ಬೇರೆ ಏನೂ ವಿಶೇಷವಿಲ್ಲ. 

9. “ರಿಷಭ ಪ್ರಿಯ’ ಎಂಬ ಕಿರುಚಿತ್ರ ನಿರ್ಮಾಣ ಮಾಡಿದ್ದೀರಿ?
– ಹೌದು, ತುಂಬಾ ಚೆನ್ನಾಗಿ ಬಂದಿದೆ. ಈ ಕಿರುಚಿತ್ರ ಮಾಡಲು ಕಾರಣ ನನ್ನ ಬೆಸ್ಟ್‌ ಫ್ರೆಂಡ್‌ ಮಯೂರ್‌. ಅವನೇ ಈ ಕಿರುಚಿತ್ರದ ನಿರ್ದೇಶಕ. ತುಂಬಾ ಟ್ಯಾಲೆಂಟೆಡ್‌. ಕಥೆ ಮಾಡಿಕೊಟ್ಟುಕೊಂಡು ಇನ್ವೆಸ್ಟರ್ಗೆ ಎದುರು ನೋಡುತ್ತಿದ್ದ. “ಯಾರಾದರೂ ಇದ್ದರೆ ಹೇಳು ರಚ್ಚು’ ಎಂದು ನನ್ನಲ್ಲೂ ಹೇಳಿದ್ದ. ಸ್ನೇಹಿತ ಕಷ್ಟದಲ್ಲಿದ್ದಾಗ ಸಹಾಯ ಮಾಡಬೇಕೆಂದೆನಿಸಿತು. ಅದಕ್ಕಾಗಿ ನಾನೇ ಇನ್ವೆಸ್ಟ್‌ ಮಾಡಿದೆ. ತುಂಬಾ ಟ್ಯಾಲೆಂಟ್‌ ಇದೆ ಅವನಿಗೆ. ಅಂದುಕೊಂಡಂತೆ ಚಿತ್ರೀಕರಿಸಿದ್ದಾನೆ. ಆತನ ನೆಟ್‌ವರ್ಕ್‌, ಫ್ರೆಂಡ್ಸ್‌ ದೊಡ್ಡದು. ಹಾಗಾಗಿ, ಅನೇಕರು ಪ್ರೋತ್ಸಾಹ ನೀಡುತ್ತಿದ್ದಾರೆ. ಇತ್ತೀಚೆಗೆ ವಿಜಯಪ್ರಕಾಶ್‌ ಒಂದು ಹಾಡು ಹಾಡಿ ಹೋದರು. ಅದು ಉಚಿತವಾಗಿ. ಅವರಿಗೊಂರು ಥ್ಯಾಂಕ್ಸ್‌. 

10. ಮುಂದಿನ ಯೋಜನೆ?
– ಈಗ ಕಿರುಚಿತ್ರ ಮಾಡಿದ್ದೇನೆ. ಮುಂದೆ ದೊಡ್ಡ ಸಿನಿಮಾ ಮಾಡಬೇಕೆಂಬ ಆಸೆ ಇದೆ. ಅದಕ್ಕೆ ದೇವರ ಆಶೀರ್ವಾದ ಬೇಕು. 

ಬರಹ: ರವಿಪ್ರಕಾಶ್‌ ರೈ; ಚಿತ್ರಗಳು: ಸಂಗ್ರಹ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next