ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಲ್ಲ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತನ್ನು ತಳ್ಳಿಹಾಕಿದರು.
ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು, ಪ್ರತಿ ಕ್ದೇತ್ರಕ್ಕೂ ಓರ್ವ ಸಚಿವರನ್ನು ನಿಯೋಜಿಸಲಾಗಿದೆ. ಸ್ಥಳೀಯವಾಗಿ ಸಭೆ ನಡೆಸಿ ಮೂವರ ವರದಿ ನೀಡುವಂತೆ ಹೇಳಿದ್ದೇವೆ. ಧಾರವಾಡ ಕ್ಷೇತ್ರದ ಅಭ್ಯರ್ಥಿಯ ಆಕಾಂಕ್ಷಿ ಶೆಟ್ಟರ ಇರಬಹುದು ಎಂದರು. ಪಕ್ಕದಲ್ಲಿದ್ದ ಶೆಟ್ಟರ ಅವರು ನಾನು ಆಕಾಂಕ್ಷಿಯಲ್ಲ ಎಂದು ಮುಖ್ಯಮಂತ್ರಿಗಳ ಹೇಳಿಕೆಯನ್ನು ತಳ್ಳಿಹಾಕಿದರು.
ಜಗದೀಶ ಶೆಟ್ಟರ ಅವರು ಹಿಂದೆ ಬಿಜೆಪಿಯಲ್ಲಿದ್ದಾಗ ಇವರ ನಿವಾಸಕ್ಕೆ ಬಂದಿದ್ದೆ. ಇದು ಎರಡನೇ ಬಾರಿ, ಬಂದಿರುವುದರಲ್ಲಿ ಏನೂ ವಿಶೇಷತೆಯಿಲ್ಲ. ಅವರ ಜನ್ಮದಿನಕ್ಕೆ ಶುಭಾಶಯ ಕೋರಿ ಉಪಹಾರಕ್ಕೆ ಆಗಮಿಸಿರುವುದಾಗಿ ಸ್ಪಷ್ಟಪಡಿಸಿದರು.
ಅಲ್ಪಸಖ್ಯಾತರಿಗೆ ಹಿಂದೆಯೂ ಟಿಕೆಟ್ ಕೊಟ್ಟಿದ್ದೆವು, ಈ ಬಾರಿಯೂ ಪರಿಗಣಿಸುತ್ತೇವೆ. ಆದರೆ ಬಿಜೆಪಿಯವರು ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುತ್ತಾರಾ ಎಂದು ಪ್ರಶ್ನಿಸಿದರು.
ಯತ್ನಾಳ್ ಗಡ್ಡ ಬಿಟ್ಟವರು, ಬುರುಕ ಹಾಕಿದವರು ಬರಬೇಡಿ ಅಂತಾರೆ. ಅವರನ್ನು ನಾನು ಭೇಟಿ ಮಾಡಲ್ಲ ಎನ್ನುತ್ತಾರೆ. ಅವರದು ಬಹುತ್ವದ ಪಕ್ಷನಾ..? ನಮ್ಮ ದೇಶ ಬಹುತ್ವ ಸಂಸ್ಕೃತಿ ಇರುವ ದೇಶ. ಬರಬೇಡ ಅಂದವರೊಂದಿಗೆ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಾರೆ ಎಂದರು.