ಬೆಳಗಾವಿ: ನಾನೇನು ಸನ್ಯಾಸಿ ಅಲ್ಲ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಬೇಕೆನ್ನುವ ಉತ್ಕಟ ಆಕಾಂಕ್ಷೆಯನ್ನು ಮತ್ತೆ ಹೊರ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಪರಮೇಶ್ವರ್ ‘ಯಾರೂ ಬೇಕಾದರೂ ನಾನು ಸಿಎಂ ಹುದ್ದೆಯ ಆಕಾಂಕ್ಷಿ ಎಂದು ಓಡಾಡಬಹುದು. ಆದರೆ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸುವುದು ಶಾಸಕರು ಮತ್ತು ನಮ್ಮ ಹೈಕಮಾಂಡ್’ ಎಂದರು.
‘ಇವಾಗ ಪಕ್ಷದ ಅಧ್ಯಕ್ಷನಾಗಿ ನನ್ನ ಉದ್ದೇಶವೇನೆಂದರೆ ಕಾಂಗ್ರೆಸ್ ಪಕ್ಷವನ್ನು ಬಹುಮತದ ಮೂಲಕ ಮತ್ತೆ ಅಧಿಕಾರಕ್ಕೆ ತರುವುದು. ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ನಾಯಕರು ಇದಕ್ಕಾಗಿ ಶ್ರಮಿಸುತ್ತೇವೆ’ ಎಂದರು.
‘ಪಕ್ಷಕ್ಕೆ ಬಹುಮತ ಬಂದಲ್ಲಿ ಮೊದಲು ಸಿಎಲ್‌ಪಿ ಸಭೆ ಕರೆದು ಅಲ್ಲಿ ಯಾರು ಮುಖ್ಯಮಂತ್ರಿ ಎನ್ನುವುದನ್ನು ತೀರ್ಮಾನಿಸಲಾಗುತ್ತದೆ ಅಲ್ಲಿ ಕೇಂದ್ರದ ವೀಕ್ಷಕರು ಉಪಸ್ಥಿತರಿರುತ್ತಾರೆ’ ಎಂದರು.
‘ಕೆಲವರು ನಮ್ಮನ್ನು ಹೈಕಮಾಂಡ್ ಪಕ್ಷ ಎಂದು ಟೀಕೆ ಮಾಡುತ್ತಾರೆ ಹೌದು ನಮ್ಮದು ಹೈಕಮಾಂಡ್ ಪಕ್ಷ. ಮನೆಗೊಬ್ಬ ಯಜಮಾನ ಬೇಕಲ್ಲ. ಕಾಂಗ್ರೆಸ್ ಪಕ್ಷದ ಯಜಮಾನ ಹೈಕಮಾಂಡ್. ಯಜಮಾನ ಇಲ್ಲದ ಮನೆಯ ಸ್ಥಿತಿ ಹೇಗಿರುತ್ತದೆ ಎನ್ನುವುದು ಗೊತ್ತಿದೆಯಲ್ಲ’ ಎಂದರು.