Advertisement

ನಾನು ಸರಕಾರಿ ನೌಕರರ ಪರ: ಸಿಎಂ ಸಿದ್ದರಾಮಯ್ಯ

11:03 PM Feb 27, 2024 | Team Udayavani |

ಬೆಂಗಳೂರು: ಪಂಚ ಗ್ಯಾರಂಟಿಗಳನ್ನು ಜಾರಿ ಮಾಡುವ ಆರ್ಥಿಕ ಹೊರೆಯ ನಡುವೆಯೂ 7ನೇ ವೇತನ ಆಯೋಗದ ಅಂತಿಮ ವರದಿ ಬಂದ ಅನಂತರ ಸರಕಾರಿ ನೌಕರರ ಬಗ್ಗೆ ಸರಕಾರ ಸಕಾರಾತ್ಮಕವಾಗಿ ತೀರ್ಮಾನ ಕೈಗೊಳ್ಳಲಿದೆ. ನಾನು ನೌಕರರ ಪರವಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಸರಕಾರಿ ನೌಕಕರ ಮಹಾ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈಗ 7ನೇ ವೇತನ ಆಯೋಗದ ಅಂತಿಮ ವರದಿ ನೀಡಲು ಇನ್ನಷ್ಟು ಕಾಲಾವಕಾಶ ಬೇಕೆಂದು ಆಯೋಗದ ಆಧ್ಯಕ್ಷರು ಕೋರಿದ್ದು, ಮಾ.15ರ ವರೆಗೆ ಸಮಯಾವಕಾಶ ನೀಡಲಾಗಿದೆ.

ಲೋಕಸಭಾ ಚುನಾವಣೆಯ ಹಿನ್ನೆಲೆ, ಆಯೋಗದ ಅಂತಿಮ ವರದಿಯನ್ನು ತ್ವರಿತವಾಗಿ ಸಲ್ಲಿಸುವುದಾಗಿ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ. ಅದೇ ರೀತಿ ಎನ್‌ಪಿಎಸ್‌ ರದ್ದುಗೊಳಿಸುವ ಬಗೆಗಿನ ವರದಿ ನೀಡುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಿದೆ. ಈ ಸಮಿತಿಯು ಆದಷ್ಟು ಬೇಗ ತನ್ನ ವರದಿ ಸಲ್ಲಿಸಲಿದೆ ಎಂದು ಸಿಎಂ ಹೇಳಿದರು.

ಆರನೇ ವೇತನ ಆಯೋಗದ ಜಾರಿಯ ಸಂದರ್ಭದಲ್ಲಿ ನಾನು ಸರಕಾರಿ ನೌಕರರ ವಿರುದ್ಧ ಇರುವುದಾಗಿ ಕೆಲವರು ಆರೋಪಿಸಿದ್ದರು. ಆದರೆ ನಾನು ಅಂದು ದಾಖಲೆಯ ಶೇ.30ರ ಫಿಟ್‌ಮೆಂಟ್‌ ನೀಡಿದ್ದೇನೆ. ಇದಕ್ಕಾಗಿ 10,500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೆ. ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ವೇತನ ಆಯೋಗದ ವರದಿ ಜಾರಿಗೊಳಿಸುವಲ್ಲಿ ಪ್ರಯತ್ನಪಟ್ಟಿದೆ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.

Advertisement

ವೇತನ ಆಯೋಗದ ಅಂತಿಮ ವರದಿ ಬಾರದೇ ನಾವು ಆ ಬಗ್ಗೆ ತೀರ್ಮಾನ ಕೈಗೊಳ್ಳುವಂತಿಲ್ಲ. 7ನೇ ವೇತನ ಆಯೋಗ ಫಿಟ್‌ಮೆಂಟ್‌ ಅನ್ನು ಶೇ. 40, ಶೇ.50 ಹೀಗೆ ನಿಗದಿ ಮಾಡಿದರೂ ನನ್ನ ತಕರಾರಿಲ್ಲ. ಆದಷ್ಟು ಬೇಗ ವರದಿ ಕೊಡುವಂತೆ ಹೇಳಿದ್ದೇವೆ. ಆಯೋಗ ನಿಮ್ಮ ಪರವಾಗಿ ಏನು ಶಿಫಾರಸು ಮಾಡುತ್ತದೆಯೋ ಅದರ ಬಗ್ಗೆ ಧನಾತ್ಮಕವಾಗಿ ತೀರ್ಮಾನ ಕೈಗೊಳ್ಳುತ್ತೇವೆ. ಇನ್ನೊಮ್ಮೆ ಆಯೋಗದ ಮುಖ್ಯಸ್ಥ ಸುಧಾಕರ್‌ ರಾವ್‌ ಅವರ ಬಳಿ ಶೀಘ್ರ ವರದಿ ನೀಡುವಂತೆ ಹೇಳುತ್ತೇನೆ. ಆದೇ ರೀತಿ ಎನ್‌ಪಿಎಸ್‌ ರದ್ದು ಪಡಿಸಿರುವ ರಾಜ್ಯಗಳ ವರದಿ ತರಿಸಿಕೊಳ್ಳುತ್ತೇನೆ. ಇದರ ಜತೆಗೆ ಜ್ಯೋತಿ ಸಂಜೀವಿನಿ ಯೋಜನೆ ಬಗ್ಗೆಯೂ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಸರಕಾರಿ ನೌಕರರು ತಮಗೆ ಆಗಿರುವ ಅನ್ಯಾಯವನ್ನು ಮುಂದಿಡುವುದು ಮತ್ತು ಅದನ್ನು ಸರಿಪಡಿಸಲು ಸರ್ಕಾರ ಪ್ರಯತ್ನ ನಡೆಸುವ ಪ್ರಕ್ರಿಯೆ ನಡೆಯಬೇಕು. ಆದರೆ ಇದೇ ನಮ್ಮ ಮೊದಲ ಆದ್ಯತೆಯಾಗಬಾರದು. ಪ್ರಜಾಪ್ರಭುತ್ವದಲ್ಲಿ ನಮ್ಮ ಮಾಲಕರಾದ ಜನರ ಪರವಾಗಿ ಕೆಲಸ ಮಾಡುವುದು ನಮ್ಮ ಮೊದಲ ಆದ್ಯತೆ ಆಗಬೇಕೆಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.

ಕರ್ನಾಟಕದಲ್ಲಿ 7.50 ಲಕ್ಷ ಸರಕಾರಿ ನೌಕರರಿದ್ದಾರೆ. ಅದರಲ್ಲಿ 5.90 ಲಕ್ಷ ಜನ ಹಾಲಿ ಕೆಲಸ ಮಾಡುತ್ತಿದ್ದಾರೆ. 2.50 ಲಕ್ಷ ಜನರನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ. ಕರ್ನಾಟಕದ ಜನಸಂಖ್ಯೆ 7 ಕೋಟಿ ಇದೆ. 7.50 ಲಕ್ಷ ಮಂಜೂರಾಗಿರುವ ಹುದ್ದೆಗಳಿವೆ. 7 ಲಕ್ಷ ಜನ 7 ಕೋಟಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುವ, ರಾಜ್ಯದ ಅಭಿವೃದ್ಧಿಯಲ್ಲಿ ಭಾಗಿಯಾಗುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ಎಂದು ಅವರು ಹೇಳಿದರು.

ಗ್ಯಾರಂಟಿಗೆ ಬೇಕು
56 ಸಾವಿರ ಕೋಟಿ!
ಬಜೆಟ್‌ನಲ್ಲಿ 52,009 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ನೀಡುವುದಾಗಿ ಪ್ರಕಟಿಸಿದ್ದೆವು. ಆದರೆ ಇನ್ನೂ ಮೂರ್ನಾಲ್ಕು ಸಾವಿರ ಕೋಟಿ ರೂ. ಹೆಚ್ಚುವರಿ ಹಣ ಗ್ಯಾರಂಟಿ ಯೋಜನೆಗೆ ಬೇಕಾಗಬಹುದು. ಸುಮಾರು 56 ಸಾವಿರ ಕೋಟಿ ರೂ. 2024-25ರ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಬೇಕಾಗಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೇಡಿಕೆ ಈಡೇರದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ
ಬೆಂಗಳೂರು: 7ನೇ ವೇತನ ಆಯೋಗದ ವರದಿ ಜಾರಿ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಗೆ ಹಿಂತಿರುಗುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟ ಭರವಸೆ ನೀಡಿಲ್ಲ ಎಂದು ಸರಕಾರಿ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಆರಮನೆ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಸರಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳು 7ನೇ ವೇತನ ಆಯೋಗ ಮತ್ತು ಎನ್‌ಪಿಎಸ್‌ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಿರುವ ಸಮಿತಿ ವರದಿ ನೀಡಿದ ಬಳಿಕ ತೀರ್ಮಾನ ಕೈಗೊಳ್ಳುವುದಾಗಿ ಪ್ರಕಟಿಸಿದ್ದು ನೌಕರ ವರ್ಗವನ್ನು ನಿರಾಸೆಯ ಮಡುವಿಗೆ ತಳ್ಳಿತು.

7ವರ್ಷದ ಬಳಿಕ ನಡೆದ ಮಹಾಸಮ್ಮೇಳನದಲ್ಲಿ ಸರಕಾರಿ ನೌಕರರ ಈ 2 ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಮುಖ್ಯಮಂತ್ರಿಗಳು ಖಚಿತ ನಿಲುವು ವ್ಯಕ್ತಪಡಿಸಬಹುದು ಎಂಬ ನಿರೀಕ್ಷೆಯೊಂದಿಗೆ ರಾಜ್ಯದೆಲ್ಲೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ನೌಕರರು ಸೇರಿದ್ದರು.

ಆದರೆ ಮುಖ್ಯಮಂತ್ರಿಗಳು ಸ್ಪಷ್ಟ ಭರವಸೆ ನೀಡದಿದ್ದದ್ದು ನೌಕರರಲ್ಲಿ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಯಿತು. ಮುಖ್ಯಮಂತ್ರಿಗಳು ತಮ್ಮ ಭಾಷಣ ಆರಂಭಿಸಿ ಈ ಎರಡು ಬೇಡಿಕೆಗಳ ಬಗ್ಗೆ ವರದಿ ಬಂದ ಮೇಲೆ ಕ್ರಮ ಎಂದು ಹೇಳುತ್ತಿದ್ದಂತೆ ಹಲವರು ಮುಖ್ಯಮಂತ್ರಿಗಳತ್ತ ಕೈ ಬೀಸಿ, ಧಿಕ್ಕಾರ ಕೂಗಿ ಅಸಮಾಧಾನ ಪ್ರಕಟಿಸಿದರು.

ಮುಷ್ಕರಕ್ಕೆ ಸಿದ್ಧ: ಷಡಾಕ್ಷರಿ
ಮುಖ್ಯಮಂತ್ರಿ ನಿರ್ಗಮನದ ಬಳಿಕ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ, ನೌಕರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಸಂಘವು ಸರಕಾರಿ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮೊದಲೇ ತಮ್ಮ ವರದಿ ಸಲ್ಲಿಸುವಂತೆ ವೇತನ ಆಯೋಗ ಮತ್ತು ಎನ್‌ಪಿಎಸ್‌ ಸಮಿತಿಗೆ ಮನವಿ ಸಲ್ಲಿಸುತ್ತೇವೆ. ವರದಿ ಸ್ವೀಕರಿಸಿ ಜಾರಿಗೊಳಿಸುವಲ್ಲಿ ಸರಕಾರ ವಿಳಂಬ ಧೋರಣೆ ತೋರಿದರೆ ಅನಿರ್ದಿಷ್ಟಾವಧಿ ಹೋರಾಟ, ಮುಷ್ಕರಕ್ಕೆ ನಾವು ಸಿದ್ಧರಿದ್ದೇವೆ ಎಂದು ಪ್ರಕಟಿಸಿದರು.

 

 

Advertisement

Udayavani is now on Telegram. Click here to join our channel and stay updated with the latest news.

Next